ಸಾರಾಂಶ
ವಾಷಿಂಗ್ಟನ್: ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದ್ದು, ‘ಭಾರತದಲ್ಲಿ ಅಲ್ಪಸಂಖ್ಯಾತರ (ಮುಸ್ಲಿಮರ) ಪರಿಸ್ಥಿತಿ ಹದಗೆಡುತ್ತಿದೆ’ ಎಂದು ಆರೋಪಿಸಿದೆ. ಅಲ್ಲದೆ, ‘ಭಾರತದ ಗುಪ್ತಚರ ಸಂಸ್ಥೆಯಾದ ರಾ, ಸಿಖ್ ಪ್ರತ್ಯೇಕತವಾದಿಗಳ ಹತ್ಯೆ ನಡೆಸಲು ಸಂಚು ರೂಪಿಸುತ್ತಿದೆ. ಆದಕಾರಣ ಅಮೆರಿಕದಲ್ಲಿ ಅದನ್ನು ನಿರ್ಬಂಧಿಸಬೇಕು’ ಎಂದು ಅಮೆರಿಕದ ಸರ್ಕಾರವನ್ನು ಒತ್ತಾಯಿಸಿದೆ.
ಟ್ರಂಪ್ ಆಡಳಿತಕ್ಕೆ ವಾರ್ಷಿಕ ವರದಿ ಸಲ್ಲಿಸಿರುವ ಆಯೋಗ, ‘2024ರಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹಾಗೂ ತಾರತಮ್ಯ ಅಧಿಕವಾಗಿದ್ದು, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ’ ಎಂದು ಕಿಡಿಕಾರಿದೆ,
ಅಮೆರಿಕದಲ್ಲಿರುವ ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಭಾರತದ ಗುಪ್ತಚರ ಮಾಜಿ ಅಧಿಕಾರಿ ವಿಕಾಶ್ ಯಾದವ್ ನಡೆಸಿದ್ದರು ಎಂದು ಅಮೆರಿಕ ಇತ್ತೀಚೆಗೆ ಆರೋಪಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ಇದಕ್ಕೂ ಮುನ್ನ 2023ರ ಜೂ.18ರಂದು ಕೆನಡಾದಲ್ಲಿ ಹತ್ಯೆಯಾದ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ಕೊಲೆಯ ಹಿಂದೆ ಭಾರತದ ಗುಪ್ತಚರ ಸಂಸ್ಥೆಯ ಕೈವಾಡವಿದೆ ಎಂದು ಕೆನಡಾ ಆರೋಪಿಸಿತ್ತು.
ಅಮೆರಿಕದ ಆರೋಪ ಸುಳ್ಳು: ಭಾರತ
ನವದೆಹಲಿ: ಅಮೆರಿಕದ ಆಯೋಗದ ವರದಿಯನ್ನು ತಿರಸ್ಕರಿಸಿರುವ ಭಾರತ, ಅದನ್ನು ಪಕ್ಷಪಾತ ಮತ್ತು ರಾಜಕೀಯ ಪ್ರೇರಿತ ಎಂದು ಕರೆದಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ‘ಪ್ರಜಾಪ್ರಭುತ್ವ ಮತ್ತು ಸಹಿಷ್ಣುತೆಯ ಸಂಕೇತವಾಗಿರುವ ಭಾರತದ ಸ್ಥಾನವನ್ನು ದುರ್ಬಲಗೊಳಿಸುವ ಯತ್ನಗಳು ಯಶಸ್ವಿಯಾಗುವುದಿಲ್ಲ. ಆಯೋಗಕ್ಕೆ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ನಿಜವಾದ ಕಾಳಜಿಯೇ ಇಲ್ಲ. ರಾ ಅಧಿಕಾರಿಗಳಿಂದ ಯಾವುದೇ ಹತ್ಯೆ ಸಂಚು ನಡೆದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.
)

;Resize=(128,128))
;Resize=(128,128))
;Resize=(128,128))
;Resize=(128,128))