ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
‘ವೈಜ್ಞಾನಿಕವಾಗಿ ಪುನಃ ಜಾತಿ ಗಣತಿ ನಡೆಸಲು ಸರ್ಕಾರವನ್ನು ಒತ್ತಾಯಿಸಬೇಕು, ಸಮುದಾಯದ ಮುಖಂಡರು ಪಕ್ಷಾತೀತವಾಗಿ ಇದಕ್ಕಾಗಿ ಹೋರಾಟ ನಡೆಸಬೇಕು. ಆಗಿಂದಾಗ್ಗೆ ಸಭೆ ನಡೆಸಿ ನಮ್ಮ ಒಗ್ಗಟ್ಟು ಪ್ರದರ್ಶಿಸಬೇಕು’ ಎಂಬ ಸಂದೇಶವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ರವಾನಿಸಿದೆ.ಸರ್ಕಾರ ಜಾತಿ ಗಣತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದ ಬೆನ್ನಲ್ಲೇ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಮಂಗಳವಾರ ಸಂಜೆ ಹೋಟೆಲ್‌ವೊಂದರಲ್ಲಿ ಕರೆದಿದ್ದ ಸಮುದಾಯದ ರಾಜಕೀಯ ಮುಖಂಡರು, ಗಣ್ಯರ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದ್ದು, ಒಂದೊಮ್ಮೆ ಸರ್ಕಾರ ಜಾತಿ ಗಣತಿ ಜಾರಿಗೊಳಿಸಲು ಮುಂದಾದರೆ ಮುಂದಿನ ರೂಪುರೇಷೆ ಬಗ್ಗೆ ಮತ್ತೊಮ್ಮೆ ಚರ್ಚಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಹಾಜರಿದ್ದ ಮಾಜಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಮುಖಂಡರು ಸಭೆಯಲ್ಲಿ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ‘ಸಮುದಾಯದ ವಿಷಯ ಬಂದಾಗ ನಾವೆಲ್ಲಾ ಮೊದಲು ಒಗ್ಗಟ್ಟಾಗಬೇಕು. ಇದರಿಂದ ಅನ್ಯಾಯ ಆಗುವುದನ್ನು ತಡೆಯಬಹುದು. ಇಲ್ಲದಿದ್ದರೆ ಯುವ ಪೀಳಿಗೆ ಸೌಲಭ್ಯಗಳಿಂದ ವಂಚಿತವಾಗಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.ಪಂಚ ನಿರ್ಣಯ:
ಸಭೆಯ ಬಳಿಕ ಮಾತನಾಡಿದ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ, ‘ಸಭೆ ಐದು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ. ಕಾಂತರಾಜ್ ಆಯೋಗ ನಡೆಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಯು ವೈರುಧ್ಯ ಮತ್ತು ಲೋಪಗಳಿಂದ ಕೂಡಿದ್ದು ಹೊಸದಾಗಿ ವೈಜ್ಞಾನಿಕ ಗಣತಿ ನಡೆಸಬೇಕು. ವರದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಉದ್ದೇಶಿತ ಪ್ರಕ್ರಿಯೆಯನ್ನು ಕೈಬಿಡಬೇಕು. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಉಪ ಪಂಗಡಗಳ ಜೊತೆಯಲ್ಲಿ ‘ಲಿಂಗಾಯತ’ ಎಂದು ಬದಲಾಯಿಸಲು ಸೂಕ್ತ ತಿದ್ದುಪಡಿ ತರಬೇಕು. ವೀರಶೈವ-ಲಿಂಗಾಯತದ ಎಲ್ಲ ಉಪ ಪಂಗಡಗಳನ್ನು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಆಗ್ರಹಿಸಿದರು.ಇದಕ್ಕೂ ಮುನ್ನ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ್, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್, ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತಿತರರು ಪಾಲ್ಗೊಂಡು ಚರ್ಚೆ ನಡೆಸಿದರು.==
18 ತಿಂಗಳಲ್ಲಿ ಮಹಾಸಭೆಯಿಂದಲೇ ಗಣತಿರಾಜ್ಯ ಸರ್ಕಾರ ನಡೆಸಿರುವ ಜಾತಿ ಗಣತಿಯು ಅವೈಜ್ಞಾನಿಕವಾಗಿದೆ. ವೀರಶೈವ-ಲಿಂಗಾಯತ ಸಮುದಾಯದ ನಿಖರ ಅಂಕಿ ಅಂಶಗಳ ಬಗ್ಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಿಂದಲೇ ಸಮೀಕ್ಷೆ ನಡೆಸಿ 18 ತಿಂಗಳಲ್ಲಿ ವರದಿ ಬಿಡುಗಡೆಗೊಳಿಸಲಾಗುವುದು ಎಂದು ಮಹಾಸಭೆ ರಾಜ್ಯಾಧ್ಯಕ್ಷ ಶಂಕರ ಬಿದರಿ ಸ್ಪಷ್ಟಪಡಿಸಿದರು.
ಮಹಾಸಭೆಯ ತಾಲೂಕು ಘಟಕಗಳಿಂದ ನಾವೇ ಕಾರಾರುವಕ್ಕಾಗಿ ಸಮೀಕ್ಷೆ ನಡೆಸಿ 18 ತಿಂಗಳಲ್ಲಿ ನಿಖರ ಅಂಕಿ ಅಂಶ ಬಿಡುಗಡೆಗೊಳಿಸಲಿದ್ದೇವೆ. ಅಡಿಕೆ ಧಾರಣೆಯ ಬಗ್ಗೆ ಹೇಗೆ ಯಾವ ರೀತಿ ದಿನವೂ ಮಾಹಿತಿ ಸಿಗುತ್ತದೆಯೋ ಅದೇ ರೀತಿ ಅಂದಿನ ಅಂಕಿ ಅಂಶಗಳನ್ನು ಅಂದೇ ಗಣಕೀಕರಣಗೊಳಿಸಿ ಸಾರ್ವಜನಿಕವಾಗಿ ಹಂಚಿಕೊಳ್ಳಲಿದ್ದೇವೆ ಎಂದು ಬಹಿರಂಗಪಡಿಸಿದರು.===