ಸನಾತನ ಧರ್ಮ ಹೇಳಿಕೆಗೆ ಕ್ಷಮೆ ಕೇಳಲ್ಲ: ಉದಯನಿಧಿ

| Published : Oct 23 2024, 12:32 AM IST

ಸಾರಾಂಶ

‘ಸನಾತನ ಧರ್ಮ ಎಂಬುದು ಡೆಂಘೀ ಮತ್ತು ಮಲೇರಿಯಾ ಇದ್ದಂತೆ. ಅದನ್ನು ವಿರೋಧಿಸುವುದಲ್ಲ.. ಬದಲಾಗಿ ನಿರ್ಮೂಲನೆ ಮಾಡಬೇಕು’ ಎಂದು ಕಳೆದ ವರ್ಷ ತಾವು ನೀಡಿದ್ದ ವಿವಾದಿತ ಹೇಳಿಕೆ ಬಗ್ಗೆ ಕ್ಷಮೆ ಕೇಳಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರ ಪುತ್ರ ಹಾಗೂ ಡಿಸಿಎಂ ಉದಯನಿಧಿ ಸ್ಟಾಲಿನ್‌ ಹೇಳಿದ್ದಾರೆ.

ಚೆನ್ನೈ: ‘ಸನಾತನ ಧರ್ಮ ಎಂಬುದು ಡೆಂಘೀ ಮತ್ತು ಮಲೇರಿಯಾ ಇದ್ದಂತೆ. ಅದನ್ನು ವಿರೋಧಿಸುವುದಲ್ಲ.. ಬದಲಾಗಿ ನಿರ್ಮೂಲನೆ ಮಾಡಬೇಕು’ ಎಂದು ಕಳೆದ ವರ್ಷ ತಾವು ನೀಡಿದ್ದ ವಿವಾದಿತ ಹೇಳಿಕೆ ಬಗ್ಗೆ ಕ್ಷಮೆ ಕೇಳಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅವರ ಪುತ್ರ ಹಾಗೂ ಡಿಸಿಎಂ ಉದಯನಿಧಿ ಸ್ಟಾಲಿನ್‌ ಹೇಳಿದ್ದಾರೆ.

ಸಭೆಯೊಂದರಲ್ಲಿ ಮಾತನಾಡಿದ ಉದಯನಿಧಿ, ‘ಸನಾತನ ಧರ್ಮ ಮಹಿಳೆಯರ ಕುರಿತು ದಮನಕಾರಿ ನಿಲುವು ಹೊಂದಿದೆ. ಹೀಗಾಗಿಯೇ ಇದರ ವಿರುದ್ಧ ದ್ರಾವಿಡ ನಾಯಕರಾದ ಪೆರಿಯಾರ್‌, ಅಣ್ಣದೊರೈ, ಕರುಣಾನಿಧಿ ಅವರಂಥ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ನಾನು ಅದೇ ಮಾತುಗಳನ್ನು ಪುನರುಚ್ಚಾರ ಮಾಡಿದ್ದೆ. ಆದರ ನನ್ನ ಮಾತುಗಳನ್ನು ತಿರುಚಿ ವಿವಾದ ಸೃಷ್ಟಿಸಲಾಗಿತ್ತು.’ ಎಂದರು.

‘ತಮಿಳುನಾಡು ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲೂ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲೆಲ್ಲಾ ನನ್ನ ಕ್ಷಮೆಗೆ ಆಗ್ರಹಿಸಲಾಗಿದೆ. ಆದರೆ ನಾನು ಕಲೈನಾರ್‌ (ಕರುಣಾನಿಧಿ) ಅವರ ಮೊಮ್ಮಗ. ಯಾವುದೇ ಕಾರಣಕ್ಕೂ ಹೇಳಿಕೆ ಕುರಿತಂತೆ ಕ್ಷಮೆ ಯಾಚಿಸುವುದಿಲ್ಲ. ಎಲ್ಲಾ ಪ್ರಕರಣಗಳನ್ನೂ ಎದುರಿಸಲು ನಾನು ಸಿದ್ಧ’ ಎಂದರು.

==

ಸಂವಿಧಾನ ಪೀಠಿಕೆಯಿಂದ ಹಿಂದುತ್ವ ಪದ ತೆಗೆಯಲು ಕೋರಿದ್ದ ಅರ್ಜಿ ಮತ್ತೆ ವಜಾ

ನವದೆಹಲಿ: ಸಂವಿಧಾನದ ಪೀಠಿಕೆಯಲ್ಲಿರುವ ‘ಹಿಂದುತ್ವ’ ಪದ ತೆಗೆದು ‘ಸಂವಿಧಾನತ್ವ’ ಎಂಬ ಪದ ಸೇರಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಮುಖ್ಯ ನ್ಯಾ। ಡಿ.ವೈ.ಚಂದ್ರಚೂಡ್‌ ಅವರ ಸುಪ್ರೀಂಕೋರ್ಟ್‌ ನ್ಯಾಯಪೀಠ ವಜಾ ಮಾಡಿದೆ.ಕಳೆದ ಕೆಲ ದಶಕಗಳಲ್ಲಿ ಹೀಗೆ ವಜಾ ಆದ ಮೂರನೇ ಅರ್ಜಿ ಇದು ಎಂಬುದು ವಿಶೇಷ.

‘ಹಿಂದುತ್ವ ಎಂಬ ಪದವು, ನಿರ್ದಿಷ್ಟ ಸಮುದಾಯವೊಂದರ ಧಾರ್ಮಿಕ ಮೂಲಭೂತವಾದಿಗಳು ದುರುಪಯೋಗಪಡಿಸಿಕೊಳ್ಳಲು ಸಾಕಷ್ಟು ಅವಕಾಶ ಕಲ್ಪಿಸಿದೆ. ಜೊತೆಗೆ ಈ ಪದವು, ಜಾತ್ಯತೀತ ಸಂವಿಧಾನವನ್ನು ದೇವಪ್ರಭುತ್ವದ ಸಂವಿಧಾನಕ್ಕೆ ಬದಲಾಯಿಸಲು ಉದ್ದೇಶ ಹೊಂದಿರುವವರಿಗೆ ಅವಕಾಶ ಕಲ್ಪಿಸುತ್ತದೆ’ ಎಂದು ಡಾ.ಎಸ್‌.ಎನ್‌.ಕುಂದ್ರಾ (65) ಎಂಬ ಅರ್ಜಿದಾರರು ವಾದಿಸಿದ್ದರು.ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ‘ನಾವು ಇಂಥ ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸುವುದಿಲ್ಲ. ನಮಗೆ ಮಾಡಲು ಬೇಕಾದಷ್ಟು ಒಳ್ಳೆಯ ಕೆಲಸಗಳಿವೆ’ ಎಂದು ಹೇಳಿ ಅರ್ಜಿ ವಜಾ ಮಾಡಿತು.

1994ರಲ್ಲಿ ಇಸ್ಲಾಯಿಲ್‌ ಫಾರೂಖಿ ಪ್ರಕರಣದ ತೀರ್ಪಿನ ವೇಳೆ ನ್ಯಾಯಾಲಯವು, ‘ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಹಿಂದುತ್ವ ಎನ್ನುವುದು ಜೀವನದ ವಿಧಾನ ಅಥವಾ ಒಂದು ಮನಸ್ಥಿತಿ. ಅದನ್ನು ಧಾರ್ಮಿಕ ಹಿಂದೂ ಮೂಲಭೂತವಾತಕ್ಕೆ ಹೋಲಿಸಬಾರದು’ ಎಂದು ಹೇಳಿತ್ತು.