ಸಾರಾಂಶ
3-4 ದಿನದಲ್ಲಿ ರಾಹುಲ್ ಗಾಂಧಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದ್ದು, ರಾಯ್‌ಬರೇಲಿ, ವಯನಾಡ್ ಕ್ಷೇತ್ರದಲ್ಲಿ ಒಂದು ಆಯ್ಕೆ ಮಾಡಿಕೊಳ್ಳಬೇಕಿದೆ
ನವದೆಹಲಿ: ಉತ್ತರ ಪ್ರದೇಶದ ರಾಯ್‌ಬರೇಲಿ ಹಾಗೂ ಕೇರಳದ ವಯನಾಡ್ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,, ಈ ಎರಡರ ಪೈಕಿ 1 ಕ್ಷೇತ್ರವನ್ನು ಇನ್ನು 3-4 ದಿನದೊಳಗೆ ಅಂತಿಮಗೊಳಿಸುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು. ಆದರೆ ಮೂಲಗಳ ಪ್ರಕಾರ ಅವರು ವಯನಾಡ್ ಕೈಬಿಟ್ಟು ರಾಯ್‌ಬರೇಲಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇಣುಗೋಪಾಲ್, ‘ರಾಹುಲ್ ಗಾಂಧಿಗೆ ತಮ್ಮ ಕ್ಷೇತ್ರವನ್ನು ಆರಿಸಿಕೊಳ್ಳಲು ಜೂ.17ರವರೆಗೂ ಅವಕಾಶವಿದೆ. ಏಕೆಂದರೆ ಜೂ.15ರಿಂದ 2-3 ದಿನ ಲೋಕಸಭೆ ಅಧಿವೇಶನ ನಡೆವ ಸಾಧ್ಯತೆಯಿದೆ. ಆದರೆ ಇನ್ನು 3-4 ದಿನದೊಳಗೆ ರಾಹುಲ್ ಗಾಂಧಿ ತಮ್ಮ ಸಂಸದೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ’ ಎಂದು ತಿಳಿಸಿದರು.ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ಸತತ ಎರಡನೇ ಬಾರಿ ಸಂಸದರಾಗಿ 3.9 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಜೊತೆಗೆ ತಮ್ಮ ತಾಯಿ ಸೋನಿಯಾ ಗಾಂಧಿ ತೊರೆದ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಲ್ಲಿಯೂ ಸಹ ಸ್ಪರ್ಧಿಸಿ 3.6 ಲಕ್ಷಕ್ಕೂ ಅಧಿಕ ಮತಗಳಿಂದ ಭರ್ಜರಿ ಜಯ ಸಾಧಿಸಿದ್ದರು.