ಸಾರಾಂಶ
ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ಭಾರತದ ಉಪರಾಷ್ಟ್ರಪತಿ ಹುದ್ದೆಯು ಬಹುಶಃ ನಿಯಮಿತ ಸಂಬಳದ ಪ್ರಯೋಜನ ಪಡೆಯದ ಏಕೈಕ ಹುದ್ದೆಯಾಗಿದೆ ಎಂಬ ಕುತೂಹಲದ ಅಂಶ ಗೊತ್ತಾಗಿದೆ.
ನವದೆಹಲಿ : ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ಭಾರತದ ಉಪರಾಷ್ಟ್ರಪತಿ ಹುದ್ದೆಯು ಬಹುಶಃ ನಿಯಮಿತ ಸಂಬಳದ ಪ್ರಯೋಜನ ಪಡೆಯದ ಏಕೈಕ ಹುದ್ದೆಯಾಗಿದೆ ಎಂಬ ಕುತೂಹಲದ ಅಂಶ ಗೊತ್ತಾಗಿದೆ. ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರ ಪಾತ್ರಕ್ಕಾಗಿ ಮಾತ್ರ ಉಪರಾಷ್ಟ್ರಪತಿಗಳು ತಮ್ಮ ಸಂಬಳವನ್ನು ಪಡೆಯುತ್ತಾರೆ. ರಾಜ್ಯಸಭಾ ಸಭಾಪತಿ ತಿಂಗಳಿಗೆ 4 ಲಕ್ಷ ರು. ವೇತನಕ್ಕೆ ಅರ್ಹರು.
ಉಪರಾಷ್ಟ್ರಪತಿಗಳು ಭಾರತದ ರಾಷ್ಟ್ರಪತಿಗಳಾಗಿ ಪ್ರಭಾರ ಹುದ್ದೆ ಹೊಣೆ ವಹಿಸಿಕೊಂಡಾಗ ಮಾತ್ರ ಅವರ ವೇತನವನ್ನು ಪಡೆವ ಅರ್ಹತೆ ಹೊಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಉಪರಾಷ್ಟ್ರಪತಿಗಳು ರಾಜ್ಯಸಭೆ ಸಭಾಪತಿ ಹುದ್ದೆ ಬಿಡುತ್ತಾರೆ.
ಭತ್ಯೆಗೆ ಅರ್ಹ:
ಸಂಬಳ ಇರದಿದ್ದರೂ ಉಪರಾಷ್ಟ್ರಪತಿಗಳು ಉಚಿತ ವಸತಿ, ವೈದ್ಯಕೀಯ ಆರೈಕೆ, ರೈಲು ಮತ್ತು ವಿಮಾನ ಪ್ರಯಾಣ, ಸ್ಥಿರ ದೂರವಾಣಿ ಸಂಪರ್ಕ, ಮೊಬೈಲ್ ಫೋನ್ ಸೇವೆ, ವೈಯಕ್ತಿಕ ಭದ್ರತೆ ಮತ್ತು ಸಿಬ್ಬಂದಿ ಸೇರಿದಂತೆ ಹಲವಾರು ಸವಲತ್ತುಗಳು ಮತ್ತು ಭತ್ಯೆಗಳನ್ನು ಪಡೆಯುತ್ತಾರೆ.
ಮಾಜಿ ಆದರೆ ಏನು?:
ಮಾಜಿ ಉಪರಾಷ್ಟ್ರಪತಿಗಳು ತಿಂಗಳಿಗೆ ಸುಮಾರು 2 ಲಕ್ಷ ರು. ಪಿಂಚಣಿ, ಟೈಪ್-8 ಬಂಗಲೆ, ಒಬ್ಬ ವೈಯಕ್ತಿಕ ಕಾರ್ಯದರ್ಶಿ, ಒಬ್ಬ ಹೆಚ್ಚುವರಿ ವೈಯಕ್ತಿಕ ಕಾರ್ಯದರ್ಶಿ, ಒಬ್ಬ ವೈಯಕ್ತಿಕ ಸಹಾಯಕ, ಒಬ್ಬ ವೈದ್ಯ, ಒಬ್ಬ ನರ್ಸಿಂಗ್ ಅಧಿಕಾರಿ ಮತ್ತು ನಾಲ್ವರು ವೈಯಕ್ತಿಕ ಸಹಾಯಕರನ್ನು ಪಡೆಯುತ್ತಾರೆ.
ಇತ್ತೀಚೆಗೆ ಹಠಾತ್ ರಾಜೀನಾಮೆಯ ನಂತರ, ಜಗದೀಪ್ ಧನಕರ್ ಇತ್ತೀಚೆಗೆ ರಾಜಸ್ಥಾನದ ಮಾಜಿ ಶಾಸಕರ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದರು.