ನಿಮಗೆ ಸಂಬಳ ಬೇಕಾ..., ಎಚ್‌.ಡಿ.ಕುಮಾರಸ್ವಾಮಿಯನ್ನು ಕೇಳಿರಿ..!

| Published : Aug 08 2025, 01:01 AM IST

ಸಾರಾಂಶ

ನಿಮಗೆ ಸಂಬಳ ಬೇಕಾದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೇಳಿರಿ. ಮೈಷುಗರ್ ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಶಾಲೆಗೆ ಹಣ ಬಿಡುಗಡೆ ಮಾಡದಂತೆ ತೀರ್ಮಾನ ಕೈಗೊಳ್ಳಲಾಗಿದೆ. ಕುಮಾರಸ್ವಾಮಿ ಅವರು ಕೊಟ್ಟಿರುವ ಮಾತಿನಂತೆ ಐದು ಕೋಟಿ ರು. ಕೊಟ್ಟರೆ ವೇತನ ನೀಡುತ್ತೇನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿಮಗೆ ಸಂಬಳ ಬೇಕಾದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೇಳಿರಿ. ಮೈಷುಗರ್ ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಶಾಲೆಗೆ ಹಣ ಬಿಡುಗಡೆ ಮಾಡದಂತೆ ತೀರ್ಮಾನ ಕೈಗೊಳ್ಳಲಾಗಿದೆ. ಕುಮಾರಸ್ವಾಮಿ ಅವರು ಕೊಟ್ಟಿರುವ ಮಾತಿನಂತೆ ಐದು ಕೋಟಿ ರು. ಕೊಟ್ಟರೆ ವೇತನ ನೀಡುತ್ತೇನೆ.

- ಕಳೆದ ಏಳೆಂಟು ತಿಂಗಳಿಂದ ಸಂಬಳಕ್ಕಾಗಿ ಪರದಾಡುತ್ತಿರುವ ಮೈಷುಗರ್ ಶಾಲಾ ಶಿಕ್ಷಕರು ವೇತನ ಪಾವತಿಗಾಗಿ ಅಧ್ಯಕ್ಷ ಸಿ.ಡಿ.ಗಂಗಾಧರ್ ಬಳಿ ತೆರಳಿ ಮನವಿ ಮಾಡಿದಾಗ ಹೇಳಿದ ಮಾತುಗಳಿವು.

ಮೈಷುಗರ್ ಪ್ರೌಢ ಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿ ಉತ್ತಮವಾಗಿ ನಡೆಸುವ ಆಲೋಚನೆಯೊಂದಿಗೆ ಪ್ರಕ್ರಿಯೆ ಆರಂಭಿಸಿದ್ದೆವು. ಇದರಿಂದ ಶಾಲಾ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಶಾಲೆ ಉತ್ತಮವಾಗಿ ಮುಂದುವರೆಯಲು ಸದಾ ಅವಕಾಶವೂ ಇತ್ತು. ಆದರೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶಾಲೆಯ ಅಮೃತ ಮಹೋತ್ಸವಕ್ಕೆ ಆಗಮಿಸಿದ್ದ ವೇಳೆ 5 ಕೋಟಿ ರು. ಅನ್ನು ಶಾಲೆಗೆ ನೀಡುವುದಾಗಿ ಬರವಸೆ ನೀಡಿದ್ದಾರೆ. ಅಲ್ಲದೇ, ಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವುದಕ್ಕೆ ಜೆಡಿಎಸ್‌ನವರು ಸೇರಿದಂತೆ ರೈತ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪ್ರಸ್ತುತ ನಾವೇನು ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಶಿಕ್ಷಕರಿಗೆ ತಿಳಿಸಿದರು.

ಮೈಷುಗರ್ ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಶಾಲೆಗೆ ಯಾವುದೇ ಹಣ ಬಿಡುಗಡೆ ಮಾಡದಂತೆ ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ನಡೆದ ವಿವಿಧ ಸಂಘಟನೆಗಳು ಮತ್ತು ರೈತ ಮುಖಂಡರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯ ಆ ನಿಧಿಯಿಂದ ಹಣ ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ನೇರವಾಗಿ ಹೇಳಿದರು.

ಕೇಂದ್ರ ಸಚಿವರು 5 ಕೋಟಿ ರು. ಹಣದ ಭರವಸೆ ನೀಡಿ ಎರಡು ತಿಂಗಳಾಗಿದೆ. ಇದುವರೆಗೆ ಯಾವುದೇ ಹಣ ಬಂದಿಲ್ಲ. ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಅವರು ಕೂಡ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಅಧ್ಯಕ್ಷನಾಗಿ ಕಾರ್ಖಾನೆ ನಡೆಸುವುದಷ್ಟೇ ನನ್ನ ಕೆಲಸ. ಶಾಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಸಂಬಳಕ್ಕೆ ನೀವು ಕುಮಾರಸ್ವಾಮಿ ಅಥವಾ ಜೆಡಿಎಸ್ ಪಕ್ಷದವರ ಬಳಿ ಹೋಗುವುದೇ ಸೂಕ್ತ ಎಂದು ಸ್ಪಷ್ಟವಾಗಿ ತಿಳಿಸಿದರು ಎನ್ನಲಾಗಿದೆ.

ನಮ್ಮ ಆಲೋಚನೆಯಂತೆ ಖಾಸಗಿ ಗುತ್ತಿಗೆ ನೀಡಿ ಶಾಲೆಯನ್ನು ಮುಂದುವರೆಸಿದ್ದರೆ ಶಿಕ್ಷಕರಿಗೆ ಸಂಬಳದ ಸಮಸ್ಯೆ ಎದುರಾಗುತ್ತಿರಲಿಲ್ಲ. ಸಂಬಳಕ್ಕೆ ಬೇಕಾಗಿದ್ದ 18 ಲಕ್ಷ ರು. ಹಣವನ್ನು ಸಚಿವರಿಗೆ ಹೇಳಿ ಹೇಗಾದರೂ ಹೊಂದಿಸಬಹುದಾಗಿತ್ತು. ಆದರೆ, ಶಿಕ್ಷಕರಿಗೆ ಸಂಬಳ ಪಾವತಿಸುವಷ್ಟು ಹಣ ನಮ್ಮ ಬಳಿ ಇಲ್ಲ. ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದಲೂ ಹಣ ತೆಗೆಯುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಸಂಬಳ ಪಾವತಿಸುವುದು ಅಸಾಧ್ಯದ ಮಾತಾಗಿದೆ. ಜೆಡಿಎಸ್ ನಾಯಕರು ಮತ್ತು ಕೇಂದ್ರ ಸಚಿವರು ಆದ ಎಚ್.ಡಿ.ಕುಮಾರಸ್ವಾಮಿ ಅವರು ಐದು ಕೋಟಿ ರು. ಹಣವನ್ನು ಬೇಗನೆ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಿದರೆ ಸಂಬಳ ಪಾವತಿ ಸಾಧ್ಯವಾಗಲಿದೆ. ಆ ಹಣವನ್ನು ಯಾರ ಮುಖಾಂತರವಾದರೂ ತಲುಪಿಸಲಿ ಅಥವಾ ಹಿರಿಯ ವಿದ್ಯಾರ್ಥಿಗಳ ಸಂಘಕ್ಕೆ ಕೊಡಲಿ. ನಮ್ಮ ಅಭ್ಯಂತರವೇನು ಇಲ್ಲ. ಅಲ್ಲಿಂದಲೇ ನೇರವಾಗಿ ಸಂಬಳ ಪಾವತಿಸಿಕೊಳ್ಳಿ. ಸದ್ಯ ನಾವು ಶಾಲೆ ವಿಚಾರದಲ್ಲಿ ದೂರ ಉಳಿದಿದ್ದೇವೆ ಎಂದು ಶಿಕ್ಷಕರಿಗೆ ಮನದಟ್ಟು ಮಾಡಿಕೊಟ್ಟರು.

ಜೆಡಿಎಸ್ ಮುಖಂಡರು ಶಾಲೆ ಜವಾಬ್ದಾರಿ ವಹಿಸಿಕೊಂಡ ನಂತರ ತಮ್ಮ ನಾಯಕರು ಹೇಳಿದಂತೆ ಹಣವನ್ನು ತರುವ ಪ್ರಯತ್ನ ಮಾಡಬೇಕಿತ್ತು. ಆದರೆ, ಇದುವರೆಗೂ ಅಂತಹ ಪ್ರಯತ್ನಗಳು ನಡೆದಂತೆ ಕಂಡುಬಂದಿಲ್ಲ. ಸುಮ್ಮನೆ ಪ್ರಚಾರಕ್ಕಾಗಿ ಆ ಮಾತುಗಳನ್ನು ಹೇಳಿದರು ಅಥವಾ ನಿಜಕ್ಕೂ ಶಾಲೆ ಉಳಿವಿಗಾಗಿ ಹಣವನ್ನು ಬಿಡುಗಡೆ ಮಾಡುವರೋ ಗೊತ್ತಿಲ್ಲ. ಹಣ ನೀಡುವುದಾದರೆ ಬೇಗನೆ ಬಿಡುಗಡೆ ಮಾಡಿಸಲಿ. ಸುಮ್ಮನೆ ಗೊಂದಲ ಸೃಷ್ಟಿಸುವುದು ಬೇಡ.

ಸಂಬಳವಿಲ್ಲದೆ ಪರದಾಡುತ್ತಿರುವ ನಿಮ್ಮ ಕಷ್ಟ ನಮಗೂ ಅರ್ಥವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನಾವೇನು ಮಾಡುವ ಸ್ಥಿತಿಯಲ್ಲಿಲ್ಲ. ಹಣ ಕೊಡುವುದಾಗಿ ಹೇಳಿ ಮೌನ ವಹಿಸಿರುವ ಜೆಡಿಎಸ್ ಪಕ್ಷದವರನ್ನು ಒಮ್ಮೆ ಕೇಳಿ ನೋಡಿ. ಹಣ ಯಾವಾಗ ಬರುತ್ತದೆ ಎಂಬ ಸ್ಪಷ್ಟನೆ ಸಿಕ್ಕರೂ ಸಿಗಬಹುದು. ಆ ಹಣ ಶಾಲೆಗೆ ಬರುವುದಾದರೆ ನಮಗೂ ಸಂತೋಷ. ಅದರಿಂದ ಶಾಲೆಯೂ ಉಳಿದರೆ ಜೆಡಿಎಸ್ ಪಕ್ಷದವರಿಗೆ ಹೆಸರು ಬರುತ್ತದೆ. ಆ ಕೆಲಸವನ್ನು ಮೊದಲು ಮಾಡಲಿ ಎಂದು ಶಿಕ್ಷಕರಿಗೆ ಹೇಳಿ ಕಳುಹಿಸಿದರು.

ಹಣ ತರುವುದು ಶತಸಿದ್ದ:

ಮೈಷುಗರ್ ಪ್ರೌಢಶಾಲೆ ಮತ್ತು ಐಟಿಐ ಕಾಲೇಜಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು 8.28 ಕೋಟಿ ರು. ಹಣ ಬಿಡುಗಡೆ ಮಾಡುವುದು ನಿಶ್ಚಿತ. ಈಗಾಗಲೇ ಶಾಲೆ ಮತ್ತು ಐಟಿಐ ಕಾಲೇಜಿನ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದ ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಶೀಘ್ರದಲ್ಲೆ ಹಣ ಬಿಡುಗಡೆಯಾಗಲಿದೆ. ಈಗಾಗಲೇ ಪ್ರೌಢಶಾಲೆಗೆ ಮೂವರು ಶಿಕ್ಷಕರನ್ನು ಸರ್ಕಾರವೇ ನಿಯೋಜನೆ ಮಾಡಿದೆ. ಹೀಗಾಗಿ ಶಾಲೆಯ ಮೇಲಿನ ಶಿಕ್ಷಕರ ಹೊರೆ ಕಡಿಮೆಯಾಗಿದೆ. ಶಾಲೆ ಮತ್ತು ಕಾಲೇಜಿನ ಅಭಿವೃದ್ಧಿ ಕಾಂಗ್ರೆಸ್ ನವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಅವರು ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್ ನಿಂದ ಶಿಕ್ಷಕರಿಗೆ ನೀಡುತ್ತಿದ್ದ ಸಂಬಂಳವನ್ನು ಬಿಡುಗಡೆ ಮಾಡಲಿ. ಅದಕ್ಕಾಗಿ ಜೆಡಿಎಸ್ ನವರ ಮೇಲೆ ಗೂಬೆ ಕೂರಿಸುವ ಅಗತ್ಯವಿಲ್ಲ. ಪ್ರೌಢಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಬಾರದು ಎಂಬ ಉದ್ದೇಶ ನಮ್ಮದಾಗಿದ್ದು, ಅದನ್ನು ಸಹಿಸದೆ ಹೀಗೆ ರಾಜಕೀಯ ಮಾಡುತ್ತಿದ್ದಾರೆ. ಇವರಿಗೆ ಶಾಲೆ ನಡೆಸುವ ಶಕ್ತಿ ಇಲ್ಲದಿದ್ದರೆ ಒಂದು ಸಮಿತಿ ರಚನೆ ಮಾಡಿ ನನ್ನನ್ನೆ ಸಮಿತಿ ಅಧ್ಯಕ್ಷನನ್ನಾಗಿ ಮಾಡಲಿ. ಶಾಲೆ ಹೇಗೆ ನಡೆಸಬೇಕು ಎಂಬುದನ್ನು ನಾನು ಮಾಡಿ ತೋರಿಸುತ್ತೇನೆ.

-ಕೆ.ಟಿ.ಶ್ರೀಕಂಠೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರು