ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್

| N/A | Published : Jul 29 2025, 08:19 AM IST

KSRP
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್
Share this Article
  • FB
  • TW
  • Linkdin
  • Email

ಸಾರಾಂಶ

ವರ್ಗಾವಣೆ ಮಾಡಿದ ಹುದ್ದೆಗೆ ವರದಿ ಮಾಡಿಕೊಳ್ಳಿ, ತಪ್ಪಿದರೆ ಸಂಬಳ ಸಿಗಲ್ಲ!

ಇಂಥದ್ದೊಂದು ಖಡಕ್‌ ಮೌಖಿಕ ಆದೇಶವನ್ನು ಐಪಿಎಸ್‌ ಸೇರಿ ಎಲ್ಲಹಂತದ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಇಲಾಖೆ ನೀಡಿದೆ.

ಗಿರೀಶ್ ಮಾದೇನಹಳ್ಳಿ

  ಬೆಂಗಳೂರು :  ವರ್ಗಾವಣೆ ಮಾಡಿದ ಹುದ್ದೆಗೆ ವರದಿ ಮಾಡಿಕೊಳ್ಳಿ, ತಪ್ಪಿದರೆ ಸಂಬಳ ಸಿಗಲ್ಲ!

ಇಂಥದ್ದೊಂದು ಖಡಕ್‌ ಮೌಖಿಕ ಆದೇಶವನ್ನು ಐಪಿಎಸ್‌ ಸೇರಿ ಎಲ್ಲಹಂತದ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಇಲಾಖೆ ನೀಡಿದೆ. ಈ ರೀತಿ ಅಧಿಕಾರಿಗಳಿಗೆ ಕೇವಲ ಬಾಯ್ಮಾತಿನ ಸೂಚನೆ ಕೊಟ್ಟು ಸುಮ್ಮನಾಗದ ಇಲಾಖೆ, ಈಗಾಗಲೇ ಐಪಿಎಸ್ ಅಧಿಕಾರಿಗಳು ಸೇರಿ ಕೆಲವರ ಐದಾರು ತಿಂಗಳ ವೇತನವನ್ನೂ ತಡೆ ಹಿಡಿದು ಬಿಸಿ ಮುಟ್ಟಿಸಿದೆ. ತನ್ಮೂಲಕ ವರ್ಗಾವಣೆ ವಿಚಾರದಲ್ಲಿ ರಾಜಕೀಯ ‘ಮಿನಿಟ್’ ಲಾಬಿಗೆ ಕೊನೆಗೂ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.

ಎಕ್ಸಿಕ್ಯುಟಿವ್‌ನಿಂದ ನಾನ್ ಎಕ್ಸಿಕ್ಯುಟಿವ್‌ ಹುದ್ದೆಗಳಿಗೆ ವರ್ಗವಾದ ಬಳಿಕ ಸುದೀರ್ಘಾವಧಿಗೆ ಕರ್ತವ್ಯಕ್ಕೆ ಹಾಜರಾಗದೆ ಕೆಲ ಹಿರಿಯ-ಕಿರಿಯ ಅಧಿಕಾರಿಗಳು ವೈದ್ಯಕೀಯ ರಜೆ ಹಾಕುವ ಪರಿಪಾಟಲು ಹೆಚ್ಚಾಗಿತ್ತು. ಅಲ್ಲದೆ, ತಾವು ಬಯಸಿದ ಹುದ್ದೆ ಪಡೆಯಲು ಸಹ ಅನಾರೋಗ್ಯದ ನೆಪ ಹೇಳಿ ‘ಗಾಡ್‌ ಫಾದರ್‌’ಗಳ ಕೃಪೆಗೆ ಕೆಲವರು ಶಬರಿಯಂತೆ ಕಾಯುತ್ತಿದ್ದರು. ಇನ್ನು ಕೆಲವರು ಸಕಾರಣವಿಲ್ಲದೆ ಪ್ರಮುಖ ಸ್ಥಾನದಿಂದ ಎತ್ತಂಗಡಿ ಮಾಡಿದ ಕೋಪಕ್ಕೂ ಗೈರಾಗುತ್ತಿದ್ದರು.

ಸರ್ಕಾರದ ಇತರೆ ಇಲಾಖೆಗಳಂತೆ ಪೊಲೀಸರ ವರ್ಗಾವಣೆ ನಡೆಯಲ್ಲ. ಇಂತಿಷ್ಟು ಸಮಯಕ್ಕೆ ವರ್ಗಾವಣೆ ಮಾಡುವ ನಿಯಮವೂ ಇಲ್ಲಿಲ್ಲ. ಎಲ್ಲರಿಗೂ ಅವರು ಅಪೇಕ್ಷಿಸಿದ ಹುದ್ದೆ ನೀಡುವುದು ಇಲ್ಲಿ ಸಾಧ್ಯವಾಗುವುದೂ ಇಲ್ಲ. ಹೀಗಾಗಿ ಇಲಾಖೆ ನೀಡಿದ ಹುದ್ದೆಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

10 ದಿನದಲ್ಲಿ ವರದಿ ಮಾಡಿಕೊಳ್ಳಬೇಕು:

ವರ್ಗಾವಣೆಯಾದ ದಿನದಿಂದ ಬೇರೆ ಹುದ್ದೆಗೆ 10 ದಿನಗಳಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ವರದಿ ಮಾಡಿಕೊಳ್ಳಬೇಕು. ಈ ಅವಧಿಯಲ್ಲಿ ಅವರು ವರ್ಗಾವಣೆ ಆದೇಶ ಮರು ಬದಲಾವಣೆ ಮಾಡಿಕೊಳ್ಳಬಹುದು. ಆದರೆ 10 ದಿನಗಳ ಬಳಿಕ ತಾವು ವರ್ಗವಾದ ಹುದ್ದೆಯ ಕರ್ತವ್ಯಕ್ಕೆ ಹಾಜರಾಗದಿದ್ದರೆ ‘ವೇತನ ರಹಿತ ರಜೆ’ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ ವರ್ಗಾವಣೆಯಾದ ದಿನದಿಂದ ಹೊಸ ಹುದ್ದೆಯ ಕರ್ತವ್ಯಕ್ಕೆ ಹಾಜರಾಗುವವರೆಗೆ ಅ‍ವರಿಗೆ ವೇತನ ನೀಡುವುದಿಲ್ಲ. ಇದು ಐಪಿಎಸ್ ಆದಿಯಾಗಿ ಎಲ್ಲ ಪೊಲೀಸರಿಗೂ ಅನ್ವಯವಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಪಿಇಬಿ ನಿರ್ಣಯಕ್ಕೆ ಬೆಲ ಕೊಡಬೇಕು:

ಪೊಲೀಸರ ವರ್ಗಾವಣೆ ಪಟ್ಟಿಗೆ ಪೊಲೀಸ್ ಎಸ್ಟಾಬ್ಲಿಷ್ಮೆಂಟ್‌ ಬೋರ್ಡ್ (ಪಿಇಬಿ)ನಲ್ಲಿ ಅನುಮೋದನೆ ನೀಡಿದ ಬಳಿಕ ಜಾರಿಗೆ ಬರುತ್ತದೆ. ಹೀಗಾಗಿ ವರ್ಗಾವಣೆಯಲ್ಲಿ ಕಾನೂನು ಪ್ರಕಾರ ಪಿಇಬಿ ಅಂತಿಮ ತೀರ್ಮಾನ ಮಾಡಲಿದೆ. ಪಿಇಬಿ ಸಭೆಯಲ್ಲಿ ಚರ್ಚಿಸಿದ ಬಳಿಕ ಅಧಿಕಾರಿಗಳನ್ನು ವರ್ಗಾ‍ವಣೆ ಮಾಡಲಾಗುತ್ತದೆ. ಆದರಿಂದ ಪಿಇಬಿ ನಿರ್ಧಾರಕ್ಕೆ ಗೌರವ ಕೊಟ್ಟು ಅಧಿಕಾರಿಗಳು ಶಿಸ್ತು ಪಾಲಿಸಬೇಕು. ಆಶಿಸ್ತು ತೋರುವುದು ಇಲಾಖೆಗೆ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವೈದ್ಯಕೀಯ ರಜೆಗೆ ಬ್ರೇಕ್:

ಆಸ್ಪತ್ರೆಯಲ್ಲಿ ಒಳ ರೋಗಿ ಅಥವಾ ಗಂಭೀರ ಸ್ವರೂಪದ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಮಾತ್ರ ನಿಯಮಾನುಸಾರ ಪೊಲೀಸರು ಸುದೀರ್ಘಾವಧಿಗೆ ವೈದ್ಯಕೀಯ ರಜೆ ಪಡೆಯಬಹುದು. ಇದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ ಕೆಲವರು ವರ್ಗಾವಣೆ ಸಲುವಾಗಿ ಸುಳ್ಳು ಹೇಳುವುದು ಅಧಿಕ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ರಜೆ ನೀಡಿಕೆಗೆ ಕಠಿಣ ನಿಯಮ ರೂಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಎರಡು ವರ್ಷಗಳಿಂದ ಇಲಾಖೆಯಲ್ಲಿ ವರ್ಗಾವಣೆ ವಿಚಾರವಾಗಿ ಆಕ್ಷೇಪಗಳು ವ್ಯಕ್ತವಾಗಿದ್ದವು. ಕೆಲವರು ಹುದ್ದೆ ನೀಡದೆ ಒಂದು ವರ್ಷದವರೆಗೂ ಡಿಜಿಪಿ ಕಚೇರಿಯಲ್ಲಿ ಕಾಯುತ್ತಿದ್ದರು. ಹೀಗಾಗಿ ಎಚ್ಚೆತ್ತ ಇಲಾಖೆ, ವರ್ಗಾವಣೆ ನೀತಿ ಸುಧಾರಣೆಗೆ ಮುಂದಾಗಿದೆ. ಇದಕ್ಕಾಗಿ ವರ್ಗಾವಣೆಗೊಳಿಸಿದ ಹುದ್ದೆಗಳಿಗೆ ತಕ್ಷಣ ವರದಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗದೆ ಹೋದರೆ ವೇತನ ‘ದಂಡ’ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಐಪಿಎಸ್ ಅಧಿಕಾರಿ ಸಂಬಳ ಖೋತಾ:

ಪ್ರಮುಖ ಹುದ್ದೆಗಳು ಸಿಗದ ಕಾರಣಕ್ಕೆ ಹಲವು ತಿಂಗಳು ಕರ್ತವ್ಯಕ್ಕೆ ಹಾಜರಾಗದ ಐಪಿಎಸ್‌ ಅಧಿಕಾರಿಗಳಿಗೂ ‘ವೇತನ ರಹಿತ ರಜೆ’ ನೀತಿ ಅನ್ವಯಗೊಳಿಸಲಾಗಿದೆ. ಇದರಿಂದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ವೇತನ ಖೋತಾ ಆಗಿದೆ. ಇವರು ಮಾತ್ರವಲ್ಲ ಎಸ್ಪಿ, ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್ ದರ್ಜೆಯ 40ಕ್ಕೂ ಹೆಚ್ಚಿನ ಜನರ ವೇತನಕ್ಕೆ ಕೊಕ್ಕೆ ಬಿದ್ದಿದೆ ಎಂದು ಮೂಲಗಳು ಹೇಳಿವೆ.

Read more Articles on