ಕೋಲ್ಕತಾದಲ್ಲಿ 35 ಸಾವಿರ ಜನರ ಮಧ್ಯೆ ಮೋದಿ ಯೋಗ ಪ್ರದರ್ಶನ
ಯೋಗ ಶಿಕ್ಷಕರಂತೆ ಸೂಕ್ತ ಭಂಗಿ ಹೇಳಿಕೊಟ್ಟು ಗಮನ ಸೆಳೆದ ಪ್ರಧಾನಿರಾಷ್ಟ್ರಪತಿ ಮುರ್ಮು, ರಾಧಾಕೃಷ್ಣನ್ ಕೂಡಾ ಇತರೆಡೆ ಯೋಗದ ನೇತೃತ್ವ
ವಿದೇಶಗಳ 2500 ಕಡೆ ಯೋಗ ಪ್ರದರ್ಶನ । ಆರೋಗ್ಯದ ಬಗ್ಗೆ ಜಾಗೃತಿಪಿಟಿಐ ಕೋಲ್ಕತಾ12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಭಾನುವಾರ ಯಶಸ್ವಿಯಾಗಿ ದೇಶ-ವಿದೇಶಗಳಲ್ಲಿ ಸಂಪನ್ನಗೊಂಡಿದೆ. ದಿನಾಚರಣೆ ಅಂಗವಾಗಿ ಕೋಲ್ಕತಾದ ಪ್ರಸಿದ್ಧ ರೆಡ್ ರೋಡ್‌ನಲ್ಲಿ ನಡೆದ ಭಾರತದ ಮುಖ್ಯ ಸಮಾರಂಭದಲ್ಲಿ ಭಾನುವಾರ ಸಾವಿರಾರು ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಯೋಗ ಪ್ರದರ್ಶನ ನೀಡಿದರು.
ಈ ನಡುವೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಮಧ್ಯಪ್ರದೇಶದಲ್ಲಿ ಹಾಗೂ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಲೇಹ್‌ನಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು. ಅನೇಕ ಕೇಂದ್ರ ಸಚಿವರು, ಮುಖಂಡರು ಕೂಡ ಈ ಸಲದ ‘ಆರೋಗ್ಯಕರ ಮುಪ್ಪಿಗಾಗಿ ಯೋಗ’ ಥೀಮ್ ಅಡಿಯಲ್ಲಿ ಯೋಗ ನಡೆಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಬಹುತೇಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ನಾಯಕರು ತಮ್ಮ ತಮ್ಮ ರಾಜ್ಯಗಳಲ್ಲಿ ಯೋಗ ಮಾಡಿದರು. ಇನ್ನು ಆಗ್ರಾದ ಪ್ರಸಿದ್ಧ ತಾಜ್ ಮಹಲ್ ನಿಂದ ಕರ್ನಾಟಕದ ಬೀದರ್ ಕೋಟೆಯವರೆಗೆ ಪುರಾತತ್ವ ಇಲಾಖೆಯ ಎಲ್ಲ ತಾಣಗಳಲ್ಲಿ ಯೋಗ ಆಯೋಜಿತವಾಗಿತ್ತು.
ವಿಶ್ವಾದ್ಯಂತ ಸಾವಿರಾರು ಯೋಗ ಉತ್ಸಾಹಿಗಳು ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಾಚೀನ ಅಭ್ಯಾಸದ ಪಾತ್ರವನ್ನು ಎತ್ತಿ ತೋರಿಸುವ ಕಾರ್ಯಕ್ರಮಗಳನ್ನು ವಿದೇಶಗಳ 2500 ಕಡೆ ಆಯೋಜಿಸಿದ್ದವು.
ಯೋಗ ಶಿಕ್ಷಕನಾದ ಮೋದಿ!:ಬಿಳಿ ಟಿ-ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದ ಮೋದಿ, ಅಲ್ಲಿ ನೆರೆದಿದ್ದ ಸುಮಾರು 35 ಸಾವಿರ ಸಾರ್ವಜನಿಕರೊಂದಿಗೆ ಯೋಗ ಮಾಡಿದರು. 40 ನಿಮಿಷಗಳ ಕಾಲ ನಡೆದ ಈ ಕಾರ್ಯಕ್ರಮದ ನಡುವೆ, ಪ್ರಧಾನಿ ಯೋಗ ಮಾಡುತ್ತಿದ್ದವರನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅವರು ತಪ್ಪಿದಲ್ಲಿ ಸರಿಪಡಿಸುತ್ತಿರುವುದು ಕಂಡುಬಂತು. ಹಲವರಿಗೆ ತಾವೇ ಸರಿಯಾದ ಭಂಗಿಗಳನ್ನು ಹೇಳಿಕೊಟ್ಟು ಗಮನ ಸೆಳೆದರು. ರಾಜ್ಯಪಾಲ ಆರ್.ಎನ್. ರವಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ದೀಪಕ್ ಬರ್ಮನ್ ಸೇರಿದಂತೆ ಹಲವಾರು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುರ್ಮು, ರಾಧಾಕೃಷ್ಣನ್ ಯೋಗ ಪ್ರದರ್ಶನ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದರು. ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಲೇಹ್‌ನ ಸ್ಪಿಟುಕ್‌ನ ಆಸ್ಟ್ರೋ ಟರ್ಫ್ ಕ್ರೀಡಾಂಗಣದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು. ಹಲವಾರು ಸಚಿವರು, ಉನ್ನತ ನಾಯಕರು ದೇಶದ ಬೇರೆ ಬೇರೆ ಕಡೆ ನಡೆದ ಕಾರ್ಮಕ್ರಮಗಳಲ್ಲಿ ಪಾಲ್ಗೊಂಡರು.
==ಆಂಧ್ರದ ಎಲ್ಲ ಗ್ರಾಮ, ವಾರ್ಡ್ ಕಚೇರಿಗಳಲ್ಲಿ ಯೋಗ ಹಾಲ್ ನಿರ್ಮಾಣ: ನಾಯ್ಡು ಘೋಷಣೆ
ಯೋಗಕ್ಕಾಗಿ ‘ಯೋಗಾಂಧ್ರ’ ವಿಶೇಷ ವೆಬ್‌ಸೈಟ್
ಯೋಗ ಮೇಲ್ವಿಚಾರಣೆಗೆ ಅಧಿಕಾರಿ ನಿಯೋಜನೆ
ಪಿಟಿಐ ವಿಜಯವಾಡಆಂಧ್ರಪ್ರದೇಶದ ಎಲ್ಲಾ ಸ್ವರ್ಣ ಗ್ರಾಮ (ಗ್ರಾಮ ಪಂಚಾಯತ್) ಮತ್ತು ವಾರ್ಡ್ ಸೆಕ್ರೆಟರಿಯಟ್ ಕಚೇರಿಗಳಲ್ಲಿ ಶಾಶ್ವತ ಯೋಗ ಭವನಗಳನ್ನು ತೆರೆಯಲಾಗುವುದು. ಜಿಲ್ಲೆ ಮತ್ತು ಮಂಡಲ ಮಟ್ಟದ ಅಧಿಕಾರಿಗಳನ್ನು ನೇಮಿಸಿ ಯೋಗ ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭಾನುವಾರ ಘೋಷಿಸಿದ್ದಾರೆ.ವಿಜಯವಾಡದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಯೋಗಕ್ಕಾಗಿ ‘ಯೋಗಾಂಧ್ರ’ ಎಂಬ ವಿಶೇಷ ವೆಬ್‌ಸೈಟ್ ತೆರೆಯಲಾಗುತ್ತದೆ. ಸ್ವರ್ಣ ಗ್ರಾಮ ಮತ್ತು ವಾರ್ಡ್ ಸೆಕ್ರೆಟರಿಯಟ್ ಕಚೇರಿಗಳಲ್ಲಿ ಯೋಗ ಹಾಲ್‌ಗಳನ್ನು ನಿರ್ಮಿಸುತ್ತೇವೆ. ಯೋಗ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಲು ಜಿಲ್ಲೆ ಮತ್ತು ಮಂಡಲ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ತಜ್ಞರ ಸಮಿತಿ ರಚಿಸಿ ಎಲ್ಲರಿಗೂ ಒಂದೇ ರೀತಿಯ ಯೋಗ ನಿಯಮಗಳನ್ನು ತಯಾರಿಸುತ್ತೇವೆ’ ಎಂದು ತಿಳಿಸಿದರು.
==ಯೋಗದಿಂದ ವಿಶ್ವ ಶಾಂತಿ ಸಾಧ್ಯ: ಮೋದಿ
ಕೋಲ್ಕತಾದಲ್ಲಿ ನಡೆದ ವಿಶ್ವ ಯೋಗ ದಿನದಲ್ಲಿ ಮಾತುಯೋಗ ನಮ್ಮ ಜೀವನದ ಭಾಗವಾಗಲಿ: ಪ್ರಧಾನಿ ಕರೆ
ಪ್ರಪಂಚದ ಉತ್ತಮವಾದ ಭವಿಷ್ಯಕ್ಕೆ ಯೋಗ ಆವಶ್ಯಕ
ಪಿಟಿಐ ಕೋಲ್ಕತಾ‘ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ಗುರುತಿಸುವ ಪ್ರಜ್ಞೆಯು ಆಂತರಿಕ ಶಾಂತಿಯನ್ನು ತರುವುದಲ್ಲದೆ, ವಿಶ್ವ ಶಾಂತಿಯ ಹಾದಿಯನ್ನೂ ತೆರೆಯುತ್ತದೆ. ಅದಕ್ಕಾಗಿಯೇ ಯೋಗವು ನಮ್ಮ ವೈಯಕ್ತಿಕ ಜೀವನಶೈಲಿಗೆ ಮಾತ್ರವಲ್ಲ, ಪ್ರಪಂಚದ ಉತ್ತಮ ಭವಿಷ್ಯಕ್ಕೂ ಆವಶ್ಯಕವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಭಾನುವಾರ ಕೋಲ್ಕತಾದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಮಾತನಾಡಿದ ಅವರು, ‘ಕೆಲಸ, ಪೋಷಣೆ ಮತ್ತು ನಿದ್ರೆಯನ್ನು ಒಳಗೊಂಡ ಸಮತೋಲಿತ ಜೀವನಶೈಲಿಯು ದುಃಖವನ್ನು ನಿರ್ಮೂಲನೆ ಮಾಡುತ್ತದೆ. ಹೆಚ್ಚಿನ ಜನರು ತಮ್ಮ ಆಧುನಿಕ ಜೀವನಶೈಲಿಯಲ್ಲಿ ಆ ಸಮತೋಲನವನ್ನು ಕಾಯ್ದುಕೊಳ್ಳಲು ಹೆಣಗಾಡುತ್ತಿದ್ದಾರೆ. ಯೋಗವು ನಮ್ಮ ಜೀವನವನ್ನು ಸಮತೋಲಿತ ರೀತಿಯಲ್ಲಿ ನಡೆಸುವ ಕಲೆಯನ್ನು ಕಲಿಸುತ್ತದೆ. ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ತಿಳಿಸಿಕೊಡುತ್ತದೆ’ ಎಂದರು.ಯೋಗ ಬದುಕಿನ ಭಾಗವಾಗಲಿ:‘ಮಾಡಬೇಕಾದದ್ದು ಮತ್ತು ಮಾಡಬಾರದ್ದನ್ನು ಗುರುತಿಸುವ ಪ್ರಜ್ಞೆಯು ಆಂತರಿಕ ಶಾಂತಿಯನ್ನು ತರುತ್ತದೆ. ಜತೆಗೆ, ವಿಶ್ವಶಾಂತಿಯ ಹಾದಿಯನ್ನೂ ತೆರೆಯುತ್ತದೆ. ಅದಕ್ಕಾಗಿಯೇ ಯೋಗವು ನಮ್ಮ ವೈಯಕ್ತಿಕ ಜೀವನಶೈಲಿಗೆ ಮಾತ್ರ ಅಗತ್ಯವಾಗಿಲ್ಲ, ಈ ಪ್ರಪಂಚದ ಉತ್ತಮ ಭವಿಷ್ಯಕ್ಕೂ ಆವಶ್ಯಕವಾಗಿದೆ. ಯೋಗವನ್ನು ಕೇವಲ ಒಂದು ನಿರ್ದಿಷ್ಟ ದಿನಕ್ಕೆ ಅಥವಾ ಒಂದು ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಅದನ್ನು ನಮ್ಮ ಜೀವನದ ಭಾಗವನ್ನಾಗಿ ಮಾಡಲು ಪ್ರತಿಜ್ಞೆ ಮಾಡೋಣ’ ಎಂದು ಮೋದಿ ಕರೆ ನೀಡಿದರು.
‘ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ. ಇದು ಯಾವುದೇ ವಯೋಮಾನದವರಿಗೆ ಸೀಮಿತವಾಗಿಲ್ಲ. ಇದು ಮಾನವ ಚೈತನ್ಯದ ಅಭಿವ್ಯಕ್ತಿಯಾಗಿದೆ. ಯೋಗದ ಮೂಲಭೂತ ಕಲ್ಪನೆಯೇ ಸಂಪರ್ಕ. ಮಹರ್ಷಿ ಅರವಿಂದರು ಯೋಗವು ನಮ್ಮ ಜೀವನದಲ್ಲಿದೆ ಎಂದು ಹೇಳಿದ್ದರು. ನಾವು ಅದನ್ನು ಅರಿತುಕೊಳ್ಳುತ್ತೇವೆಯೋ ಇಲ್ಲವೋ. ಆದರೆ ಯೋಗವು ನಮ್ಮ ಜೀವನದ ಭಾಗವಾದಾಗ, ಅದು ಮಾನವ ಏಕತೆಯ ತೊಟ್ಟಿಲಂತೂ ಆಗುತ್ತದೆ’ ಎಂದರು.ಯೋಗದಿಂದ 20 ವರ್ಷ ಹಿಂದಿನ ತಾರುಣ್ಯ :‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ದ (ಈ ವರ್ಷದ ಥೀಂ) ಬಗ್ಗೆ ತಿಳಿದುಕೊಂಡರೆ, ವಯಸ್ಸು ಮಾನವನ ಸಾಮರ್ಥ್ಯವನ್ನು ಕಡಿಮೆ ಮಾಡದಂತೆ ನಾವು ಕೆಲಸ ಮಾಡಬಹುದು. ನಮ್ಮ ಗುರಿ 40ರ ವಯಸ್ಸಿನಲ್ಲಿ 20 ವರ್ಷದವರಿಗಿಂತ ಹೆಚ್ಚು ಚುರುಕಾಗಿರುವುದು, 50 ವರ್ಷದಲ್ಲಿ 30 ವರ್ಷಕ್ಕಿಂತ ಶಕ್ತಿಯುತವಾಗಿರುವುದು, 70 ವರ್ಷ ವಯಸ್ಸಿನಲ್ಲಿ 50 ವರ್ಷಕ್ಕಿಂತಲೂ ಹೆಚ್ಚು ರೋಗ ನಿರೋಧಕವಾಗಿರುವುದು. ಹೀಗಾಗಲು ಯೋಗ ನಮಗೆ ಸಹಾಯ ಮಾಡುತ್ತದೆ’ ಎಂದು ಜನರನ್ನು ಹುರಿದುಂಬಿಸಿದರು.