ಕನ್ನಡಪ್ರಭ ವಾರ್ತೆ ರಾಮದುರ್ಗ
ಯುವ ಜನಾಂಗ ಪಿಜ್ಜಾ, ಬರ್ಗರ್‌ದಂತಹ ಆಹಾರ ಸೇವನೆಯಿಂದ ಆರೋಗ್ಯನ್ನು ನಿರ್ಲಕ್ಷ ಮಾಡುತ್ತಿರುವುದು ಒಂದಡೆಯಾದರೆ, ಕಲುಷಿತ ವಾತಾವರಣ ಪರಿಣಾಮ ಆರೋಗ್ಯದಲ್ಲಿ ವ್ಯತ್ಯಾಸವಾಗುವುದನ್ನು ಸರಿಪಡಿಸಲು ಪ್ರತಿಯೊಬ್ಬರು ಯೋಗಾಸನ ಮಾಡಬೇಕೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಹೇಳಿದರು.ಪಟ್ಟಣದ ಬಸವೇಶ್ವರ ಶಾಲಾ ಮೈದಾನದಲ್ಲಿ ಪತಂಜಲಿ ಯೋಗ ಪ್ರತಿಷ್ಠಾನ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಐದು ದಿನಗಳ ಕಾಲ ನಡೆದ ಯೋಗಭ್ಯಾಸದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪ್ರತಿಯೊಬ್ಬರು ಯೋಗಭ್ಯಾಸ ಮಾಡುವ ಮೂಲಕ ಸುಖ ಜೀವನ ನಡೆಸಲು ಸಾಧ್ಯವೆಂದರು.
ವೀರಕ್ತಮಠ ಟ್ರಸ್ಟ್ ಅಧ್ಯಕ್ಷ ಪ್ರದೀಪಕುಮಾರ ಪಟ್ಟಣ ಮಾತನಾಡಿ, ಯುವಜನರು ಉತ್ತಮ ಆರೋಗ್ಯಕ್ಕಾಗಿ ಗುಟ್ಕಾ, ತಂಬಾಕುದಂತಹ ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಅವಶ್ಯವಿದೆ ಎಂದು ಹೇಳಿದರು.ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ಸಿ.ಬಿ.ಪಾಟೀಲ ಮಾತನಾಡಿ, ಯೋಗದಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗಿರಲು ಸಾಧ್ಯ. ಯೋಗಭ್ಯಾಸವನ್ನು ಅರಣ್ಯ ಪ್ರದೇಶದಲ್ಲಿ ಮಾಡಿದರೆ ಒಳ್ಳೆಯ ಗಾಳಿಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.ಈ ವೇಳೆ ಪತಂಜಲಿ ಯೋಗ ಪ್ರತಿಷ್ಠಾನದ ಅಧ್ಯಕ್ಷ ಡಾ.ಬಿ.ಎಲ್.ಸಂಕನಗೌಡ್ರ, ಚಂದ್ರು ಮಾಳದಕರ, ಗೋಪಾಲ ಬಿಂದಗಿ, ವೆಂಕಟೇಶ ಹಿರೇರಡ್ಡಿ, ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಆನಂದ ನಾಯಕ, ಡಾ.ಶಿವಲೀಲಾ ಕಂಬಿ, ಗೀತಾ ಗುರುಮಠ, ರಾಜೇಶ ಬೀಳಗಿ ಸೇರಿದಂತೆ ಹಲವರಿದ್ದರು.