ಸಾರಾಂಶ
ನವದೆಹಲಿ: ಕುಸ್ತಿಪಟುಗಳಾದ ವಿನೇಶ್ ಫೋಗಟ್ ಹಾಗೂ ಭಜರಂಗ್ ಪೂನಿಯಾ ಬುಧವಾರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದು, ಅದರ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಇಬ್ಬರೂ ಮುಂದಿನ ತಿಂಗಳು ನಡೆಯಲಿರುವ ಹರ್ಯಾಣದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಇತ್ತೀಚಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದರೂ ನಿಯಮಗಳ ಕಾರಣ ಅನರ್ಹಗೊಂಡಿದ್ದ ವಿನೇಶ್ (30) ಜನನಾಯಕ ಜನತಾ ಪಕ್ಷದ ಅಮರ್ಜೀತ್ ಧಂಡಾ ವಿರುದ್ಧ ಜುಲಾನಾದಲ್ಲಿ ಸ್ಪರ್ಧಿಸಲಿದ್ದು, ಭಜರಂಗ್ (30) ಬದ್ಲಿ ಕ್ಷೇತ್ರದಲ್ಲಿ ಸೆಣಸಲಿದ್ದಾರೆ. ಇಂಡಿಯಾ ಕೂಟದ ಭಾಗವಾಗಿರುವ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ರಾಜ್ಯದಲ್ಲಿ ಒಟ್ಟಾಗಿ ಚುನಾವಣೆ ಎದುರಿಸಲು ಮಾತುಕತೆ ನಡೆಸುತ್ತಿರುವ ಹೊತ್ತಿನಲ್ಲೇ ಇಬ್ಬರೂ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ರೈತ ಮತ ಸೆಳೆಯಲು ಸಹಕಾರಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ನಡೆದ ರೈತ ಪ್ರತಿಭಟನೆ ವೇಳೆ ವಿನೇಶ್ ಮತ್ತು ಭಜರಂಗ್ ಭಾಗಿಯಾಗಿದ್ದರು. ಹೀಗಾಗಿ ಈ ಅಂಶಗಳು ಮುಂಬರುವ ಚುನಾವಣೆಯಲ್ಲಿ ಈ ಇಬ್ಬರ ಜೊತೆಗೆ ಕಾಂಗ್ರೆಸ್‌ಗೂ ಸಾಕಷ್ಟು ನೆರವು ನೀಡಲಿದೆ ಎನ್ನಲಾಗಿದೆ. ಕಳೆದ ವಾರ ರೈತರ ಹೋರಾಟ 200 ದಿನ ಪೂರ್ಣಗೊಳಿಸಿದ ಸಂದರ್ಭದಲ್ಲಿ ಶಂಭು ಗಡಿಗೆ ಭೇಟಿಯಿತ್ತಿದ್ದ ವಿನೇಶ್ ತಮ್ಮನ್ನು ತಾವು ‘ರೈತರ ಮಗಳು’ ಎಂದು ಕರೆದುಕೊಂಡಿದ್ದು, ಅವರ ದನಿಗೆ ಕಿವಿಗೊಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಈ ಮೊದಲು ಬಿಜೆಪಿ ಸಂಸದ ಹಾಗೂ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿ ಬೆದರಿಸಿದ ಆರೋಪ ಕೇಳಿಬಂದಾಗ ನಡೆದ ಹೋರಾಟದಲ್ಲೂ ವಿನೇಶ್ ಹಾಗೂ ಪೂನಿಯಾ ಮುಂಚೂಣಿಯಲ್ಲಿದ್ದರು.