ಸಾರಾಂಶ
ತಾರಾ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ನಾಯಕ ಶುಭ್‌ಮನ್ ಗಿಲ್, ಉಪ ನಾಯಕ ರಿಷಭ್ ಪಂತ್ ಸೇರಿದಂತೆ ಕೆಲ ಹಿರಿಯ ಆಟಗಾರರನ್ನು ಲಂಡನ್‌ನಲ್ಲಿರುವ ತಮ್ಮ ನಿವಾಸಕ್ಕೆ ಆಹ್ವಾನಿಸಿ, ಸಭೆ ನಡೆಸಿದ್ದಾರೆ
ನವದೆಹಲಿ: ಶುಕ್ರವಾರದಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದ್ದು ಅದಕ್ಕೂ ಮುನ್ನ ತಾರಾ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ನಾಯಕ ಶುಭ್‌ಮನ್ ಗಿಲ್, ಉಪ ನಾಯಕ ರಿಷಭ್ ಪಂತ್ ಸೇರಿದಂತೆ ಕೆಲ ಹಿರಿಯ ಆಟಗಾರರನ್ನು ಲಂಡನ್‌ನಲ್ಲಿರುವ ತಮ್ಮ ನಿವಾಸಕ್ಕೆ ಆಹ್ವಾನಿಸಿ, ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲಿರುವ ಗಿಲ್‌ಗೆ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿ ಆಟಗಾರರ ನಿವೃತ್ತಿ ಬಳಿಕ ಟೀಂ ಇಂಡಿಯಾ ಇದೇ ಮೊದಲ ಸಲ ಟೆಸ್ಟ್ ಸರಣಿಯನ್ನು ಎದುರಿಸಲಿದೆ. ಬಹುತೇಕ ಯುವ ಆಟಗಾರರೇ ತುಂಬಿರುವ ತಂಡಕ್ಕೆ ಕೊಹ್ಲಿ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಸುಮಾರು ಎರಡು ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ಕೊಹ್ಲಿ, ಗಿಲ್ ಹಾಗೂ ಪಂತ್‌ಗೆ ಯುವ ತಂಡವನ್ನು ಸಜ್ಜುಗೊಳಿಸುವಿಕೆ, ಸರಣಿ ಗೆಲುವಿನ ತಂತ್ರಗಾರಿಕೆ ಬಗ್ಗೆ ಚರ್ಚಿಸಿದರು ಎಂದು ವರದಿಯಾಗಿದೆ.
ಟೆಸ್ಟ್: 45/3ಕ್ಕೆ ಕುಸಿದಿದ್ದ ಬಾಂಗ್ಲಾಕ್ಕೆ ನಜ್ಮುಲ್, ರಹೀಂ ಆಸರೆ: 1ನೇ ದಿನಕ್ಕೆ 293/3
ಗಾಲೆ: ನಜ್ಮುಲ್ ಶಾಂಟೋ ಹಾಗೂ ಮುಷ್ಫಿಕುರ್ ರಹೀಂ ನಡುವಿನ ಅಜೇಯ 247 ರನ್‌ಗೆ ಜೊತೆಯಾಟದ ನೆರವಿನಿಂದ, ಶ್ರೀಲಂಕಾ ವಿರುದ್ಧ ಮಂಗಳವಾರ ಇಲ್ಲಿ ಆರಂಭಗೊಂಡ ಮೊದಲ ಟೆಸ್ಟ್‌ನ ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 3 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿದೆ. ಈ ಪಂದ್ಯದೊಂದಿಗೆ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಚಾಲನೆ ದೊರೆಯಿತು. 45 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಈ ಇಬ್ಬರು ಆಸೆಯಾಗಿ, ಬಾಂಗ್ಲಾ ಪರ ಟೆಸ್ಟ್‌ನಲ್ಲಿ 4ನೇ ವಿಕೆಟ್‌ಗೆ ಗರಿಷ್ಠ ರನ್ ಜೊತೆಯಾಟದ ದಾಖಲೆ ಬರೆದರು. ಶಾಂಟೋ ಔಟಾಗದೆ 136, ರಹೀಂ ಔಟಾಗದೆ 105 ರನ್ ಗಳಿಸಿ, 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಏಕದಿನ ರ್‍ಯಾಂಕಿಂಗ್: 6 ವರ್ಷ ಬಳಿಕ ಸ್ಮೃತಿ ನಂ.1
ದುಬೈ: ಭಾರತದ ಉಪನಾಯಕಿ ಸ್ಮೃತಿ ಮಂಧನಾ, 6 ವರ್ಷಗಳ ಬಳಿಕ ಐಸಿಸಿ ಮಹಿಳಾ ಏಕದಿನ ಬ್ಯಾಟರ್‌ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೂಲ್ವಾರ್ಟ್ 19 ಅಂಕ ಕಳೆದುಕೊಂಡ ಪರಿಣಾಮ ಸ್ಮೃತಿ ಮೊದಲ ಸ್ಥಾನಕ್ಕೇರಿದ್ದಾರೆ. 2019ರಲ್ಲಿ ಸ್ಮೃತಿ ಅಗ್ರಸ್ಥಾನ ಕಳೆದುಕೊಂಡಿದ್ದರು.ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ ಮಂಧನಾ 4ನೇ ಸ್ಥಾನದಲ್ಲಿದ್ದಾರೆ.
ಬಿಗ್‌ಬ್ಯಾಶ್ ಟಿ20ಯಲ್ಲಿ ಆಡಲು ನೋಂದಣಿ ಮಾಡಿಕೊಂಡ ವೇಗಿ ಕೌಲ್
ಮೆಲ್ಬರ್ನ್: ಭಾರತದ ಮಾಜಿ ವೇಗಿ ಸಿದ್ಧಾರ್ಥ್ ಕೌಲ್ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಆಡಲು ಉತ್ಸುಕರಾಗಿದ್ದು, ಆಟಗಾರರ ಡ್ರಾಫ್ಟ್‌ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕೌಲ್ ಭಾರತ ಪರ 3 ಏಕದಿನ, 3 ಟಿ20 ಪಂದ್ಯಗಳನ್ನಾಡಿದ್ದು ಕಳೆದ ನವೆಂಬರ್‌ನಲ್ಲಿ ಅಂ.ರಾ. ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ಗುರುವಾರ ಬಿಬಿಎಲ್ ಡ್ರಾಫ್ಟ್ ನಡೆಯಲಿದ್ದು, ವಿಶ್ವದ ಹಲವು ದೇಶಗಳ 600ಕ್ಕೂ ಹೆಚ್ಚು ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿರುವ ಭಾರತದ ಏಕೈಕ ಪುರುಷ ಆಟಗಾರ ಕೌಲ್. ಇದೇ ವೇಳೆ ಹರ್ಮನ್‌ಪ್ರೀತ್, ಮಂಧನಾ, ಕರ್ನಾಟಕದ ನಿಕಿ ಪ್ರಸಾದ್ ಸೇರಿ 15 ಆಟಗಾರ್ತಿಯರು ಮಹಿಳಾ ಬಿಬಿಎಲ್ ಡ್ರಾಫ್ಟ್‌ಗೆ ನೋಂದಾಯಿಸಿಕೊಂಡಿದ್ದಾರೆ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಗೆಲ್ಲುವ ನಾಯಕಗೆ ಪಟೌಡಿ ಪದಕ: ಇಸಿಬಿ
ನವದೆಹಲಿ: ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಗೆಲ್ಲುವ ನಾಯಕನಿಗೆ ಪಟೌಡಿ ಪದಕ ನೀಡಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ನಿರ್ಧರಿಸಿದೆ. ಸರಣಿಗೆ ತೆಂಡುಲ್ಕರ್-ಆ್ಯಂಡರ್‌ಸನ್ ಸೀರೀಸ್ ಎಂದು ಮರುನಾಮಕರಣ ಮಾಡಲಾಗುತ್ತಿದ್ದು, ಜೂ.19ರಂದು ಅಧಿಕೃತ ಘೋಷಣೆ ಹೊರಬೀಳಲಿದೆ.
ಇಸಿಬಿ ಮರುನಾಮಕರಣಕ್ಕೆ ನಿರ್ಧರಿಸಿದ ವಿಷಯ ತಿಳಿದ ಬಳಿಕ ಸಚಿನ್ ತೆಂಡುಲ್ಕರ್, ಇಂಗ್ಲೆಂಡ್ ಕ್ರಿಕೆಟ್‌ನ ಅಧಿಕಾರಿಗಳನ್ನು ಸಂಪರ್ಕಿಸಿ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಹೆಸರಿನಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಭಾರತದ ಮಾಜಿ ನಾಯಕನ ಹೆಸರನ್ನು ಉಳಿಸಿಕೊಳ್ಳುವಂತೆ ಮನವಿ ಸಲ್ಲಿಸಿದರು.
ಐಸಿಸಿ ಅಧ್ಯಕ್ಷ ಜಯ್ ಶಾ ಕೂಡ ಇಸಿಬಿ ಅಧಿಕಾರಿಗಳ ಜೊತೆ ಮಾತನಾಡಿ, ಮನವೊಲಿಸಿದರು. ಈ ಹಿನ್ನೆಲೆಯಲ್ಲಿ ಸರಣಿ ವಿಜೇತ ನಾಯಕನಿಗೆ ಪಟೌಡಿ ಪದಕ ನೀಡಲು ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ.