ಸಾರಾಂಶ
ನವದೆಹಲಿ : ಭಾರತವನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಅನೇಕ ಯೋಜನೆಗಳನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದ ಉದ್ಯೋಗಸೃಷ್ಟಿ, ಹೂಡಿಕೆಗೆ ಉತ್ತೇಜನ ಹಾಗೂ ಇತರ ವಲಯಗಳಿಗೆ ಆರ್ಥಿಕ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕಾಶಿ ವಿಶ್ವನಾಥ ಮಾದರಿಯಲ್ಲಿ ವಿಷ್ಣುಪಾದ ದೇವಸ್ಥಾನ ಹಾಗೂ ಮಹಾಬೋಧಿ ಕಾರಿಡಾರ್ ಅಭಿವೃದ್ಧಿ: ಬಿಹಾರದಲ್ಲಿರುವ ಗಯಾದ ವಿಷ್ಣುಪಾದ ದೇವಸ್ಥಾನ ಮತ್ತು ಬೋಧ ಗಯಾದ ಮಹಾಬೋಧಿ ದೇವಸ್ಥಾನ ಕಾರಿಡಾರ್ ಅಭಿವೃದ್ಧಿಗೆ ಯೋಜನೆ ಹಾಕಿಕೊಂಡಿದ್ದು, ಅವುಗಳನ್ನು ವಿಶ್ವದರ್ಜೆಯ ಯಾತ್ರಾಸ್ಥಳ ಮತ್ತು ಪ್ರವಾಸಿ ತಾಣಗಳಾಗಿ ಮಾಡುವ ಗುರಿ ಸರ್ಕಾರದ ಮುಂದಿದೆ. ಇವುಗಳನ್ನು ಕಾಶಿ ವಿಶ್ವನಾಥ ದೇವಸ್ಥಾನ ಕಾರಿಡಾರ್ ಮಾದರಿಯಲ್ಲಿ ನಿರ್ಮಿಸಲಾಗುವುದು.
ರಾಜ್‌ಗಿರ್ ಹಾಗೂ ನಳಂದಾ ಅಭಿವೃದ್ಧಿ:ರಾಜ್‌ಗಿರ್ ಹಿಂದೂ, ಬೌದ್ಧ ಮತ್ತು ಜೈನರ ಪಾಲಿಗೆ ಪವಿತ್ರ ಸ್ಥಳವಾಗಿದೆ. ಇಲ್ಲಿ ಪುರಾತನ ಜೈನ ದೇವಸ್ಥಾನಗಳ ಸಂಕೀರ್ಣ ಹಾಗು ಬ್ರಹ್ಮ ಕುಂಡದ ಬಿಸಿನೀರಿನ ಬುಗ್ಗೆಗಳ ಸಪ್ತರಿಷಿಗಳಿದ್ದು, ಇದನ್ನು ಸರ್ಕಾರ ಅಭಿವೃದ್ಧಿಪಡಿಸಲಿದೆ.
ನಳಂದ ವಿಶ್ವವಿದ್ಯಾಲಯದ ಪುನರುಜ್ಜೀವನದೊಂದಿಗೆ ಅದನ್ನು ಪ್ರವಾಸಿ ತಾಣವಾಗಿ ರೂಪಿಸಲಾಗುವುದು.
ಒಡಿಸ್ಸಾದ ಪ್ರವಾಸಿ ತಾಣಗಳ ಅಭಿವೃದ್ಧಿ:ಪ್ರಾಕೃತಿಕ ಸೌಂದರ್ಯ, ದೇವಸ್ಥಾನಗಳು, ಕಲೆ, ವನ್ಯಜೀವಿ ಅಭಯಾರಣ್ಯ, ನೈಸರ್ಗಿಕ ಭೂದೃಶ್ಯಗಳು ಮತ್ತು ಪ್ರಾಚೀನ ಕಡಲತೀರಗಳಿಂದ ಸಮೃದ್ಧವಾಗಿರುವ ಒಡಿಸ್ಸಾವನ್ನೂ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.