ಸಾಫ್ಟ್‌ವೇರ್‌ ಬಳಸಿ ಆಳಂದದಲ್ಲಿ ಮತ ಅಕ್ರಮ: ರಾಹುಲ್‌

| Published : Sep 19 2025, 01:00 AM IST

ಸಾಫ್ಟ್‌ವೇರ್‌ ಬಳಸಿ ಆಳಂದದಲ್ಲಿ ಮತ ಅಕ್ರಮ: ರಾಹುಲ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಗೂ ಮುನ್ನ ಕೇಂದ್ರೀಕೃತ (ಸೆಂಟ್ರಲೈಸ್ಡ್) ಸಾಫ್ಟ್‌ವೇರ್‌ ಬಳಸಿ, ವ್ಯವಸ್ಥಿತವಾಗಿ, ಕಾಂಗ್ರೆಸ್‌ ಬೆಂಬಲಿಸುವ 6018 ಮತದಾರರ ಹೆಸರನ್ನು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ತೆಗೆದು ಹಾಕುವ ಪ್ರಯತ್ನ ನಡೆಸಲಾಗಿತ್ತು.

- ಕಾಂಗ್ರೆಸ್‌ನ 6018 ಮತದಾರರ ಡಿಲೀಟ್ ಯತ್ನ- ಈ ಬಗ್ಗೆ ಸಿಐಡಿಗೂ ಮಾಹಿತಿ ನೀಡ್ತಿಲ್ಲ ಆಯೋಗ- ಸಾಕ್ಷ್ಯ ಸಮೇತ ಲೋಕಸಭೆ ನಾಯಕ ಆರೋಪ

===

ಆರೋಪ ಏನು?- 2023ರ ವಿಧಾನಸಭೆ ಚುನಾವಣೆಗೂ ಮುನ್ನ ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಭಾರಿ ಮತಪಟ್ಟಿ ಅಕ್ರಮ- ಮತದಾರರ ಹೆಸರು ತೆಗೆಯಲು ಬಳಸುವ ಫಾರಂ 7 ಬಳಸಿ 6018 ಹೆಸರುಗಳನ್ನು ಅಳಿಸಲು ಯತ್ನ- ಇದಕ್ಕಾಗಿ ಸೆಂಟ್ರಲೈಸ್ಟ್‌ ಸಾಫ್ಟ್‌ವೇರ್‌, ಅರ್ಜಿ ಸಲ್ಲಿಸುವಾಗ ಅನ್ಯರಾಜ್ಯದ ಮೊಬೈಲ್‌ ಸಂಖ್ಯೆ ಬಳಕೆ- ಆಳಂದದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿರುವ ಟಾಪ್‌ 10 ಬೂತ್‌ಗಳನ್ನೇ ಟಾರ್ಗೆಟ್ ಮಾಡಿ ಆಪರೇಷನ್‌

- ಗೋದಾಬಾಯಿ ಎಂಬ ವೃದ್ಧೆ ಹೆಸರು ಬಳಸಿ ನಕಲಿ ಲಾಗಿನ್‌ ಸೃಷ್ಟಿ. 12 ಹೆಸರು ತೆಗೆಸಲು ಅರ್ಜಿ- ಈ ಬಗ್ಗೆ ಗೋದಾಬಾಯಿಗೆ ಗೊತ್ತಿಲ್ಲ. ಸಲ್ಲಿಸಲಾದ ಅರ್ಜಿಯಲ್ಲಿರುವ ಸಂಖ್ಯೆ ಕರ್ನಾಟಕದ್ದೇ ಅಲ್ಲ- ಸೂರ್ಯಕಾಂತ್‌ ಎಂಬ ವ್ಯಕ್ತಿಯಿಂದ 14 ನಿಮಿಷದಲ್ಲಿ 12 ಜನ ಹೆಸರು ಡಿಲೀಟ್‌. ಇದು ಆತಗೇ ಗೊತ್ತಿಲ್ಲನಾಗರಾಜು ಎಂಬ ವ್ಯಕ್ತಿ 36 ಸೆಕೆಂಡ್‌ಗಳ ಒಳಗೆ 2 ಡಿಲಿಷನ್‌ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ್ದು 4.07ಕ್ಕೆ

---

ರಾಹುಲ್‌ ಆರೋಪ ನಿರಾಧಾರ: ಚುನಾವಣೆ ಆಯೋಗ9

---

ಆಳಂದ ಅಕ್ರಮ ತನಿಖೆಗೆ ಎಸ್‌ಐಟಿ ರಚನೆ?7

----

ಪಿಟಿಐ ನವದೆಹಲಿ

‘ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಗೂ ಮುನ್ನ ಕೇಂದ್ರೀಕೃತ (ಸೆಂಟ್ರಲೈಸ್ಡ್) ಸಾಫ್ಟ್‌ವೇರ್‌ ಬಳಸಿ, ವ್ಯವಸ್ಥಿತವಾಗಿ, ಕಾಂಗ್ರೆಸ್‌ ಬೆಂಬಲಿಸುವ 6018 ಮತದಾರರ ಹೆಸರನ್ನು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ತೆಗೆದು ಹಾಕುವ ಪ್ರಯತ್ನ ನಡೆಸಲಾಗಿತ್ತು. ಈ ಕುರಿತು ತನಿಖೆ ನಡೆಸುತ್ತಿರುವ ಕರ್ನಾಟಕದ ಸಿಐಡಿ ಪೊಲೀಸರಿಗೆ ಚುನಾವಣಾ ಆಯೋಗ ಮಾಹಿತಿಯನ್ನೇ ನೀಡುತ್ತಿಲ್ಲ. ಈ ಅಕ್ರಮ ಎಸಗಿದ ರೂವಾರಿಗಳ ಹೆಸರು ಬಯಲಿಗೆಳೆಯಲು ಇದರಿಂದ ಅಡ್ಡಿ ಆಗಿದೆ’ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಇದಲ್ಲದೆ, ‘ಈ ಅಕ್ರಮದ ತನಿಖೆ ನಡೆಸುತ್ತಿರುವ ಕರ್ನಾಟಕ ಸಿಐಡಿ ಜತೆಗೆ ಈ ಕುರಿತು ಮಾಹಿತಿ ಹಂಚಿಕೊಳ್ಳಲು ನಿರಾಕರಿಸುವ ಮೂಲಕ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್‌ ಕುಮಾರ್‌ ಅವರು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದವರ ರಕ್ಷಣೆಗೆ ನಿಂತಿದ್ದಾರೆ’ ಎಂದೂ ದೂರಿದ್ದಾರೆ.

2 ವಾರ ಹಿಂದೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಳಂದ ಚುನಾವಣಾ ಅಕ್ರಮದ ಸಿಐಡಿ ತನಿಖೆಗೆ ಚುನಾವಣಾ ಆಯೋಗ ಸಹಕರಿಸುತ್ತಿಲ್ಲ ಎಂದು ಆರೋಪ ಮಾಡಿದ್ದರು. ಇದೀಗ ಈ ಆರೋಪಕ್ಕೆ ಪೂರಕವಾಗಿ ಆಳಂದದ ಕೆಲವು ಮತದಾರರನ್ನು ಸುದ್ದಿಗೋಷ್ಠಿಯಲ್ಲೇ ಹಾಜರುಪಡಿಸಿ ರಾಹುಲ್‌ ಸಾಕ್ಷ್ಯಸಮೇತ ಆರೋಪ ಮಾಡಿದ್ದಾರೆ. ಈ ಸಂದರ್ಭದಲ್ಲಿ 2023ರಲ್ಲಿನ ಕಾಂಗ್ರೆಸ್ ವಿಜೇತ ಅಭ್ಯರ್ಥಿ, ಹಾಲಿ ಶಾಸಕ ಬಿ.ಆರ್‌. ಪಾಟೀಲ್‌ ಕೂಡ ಹಾಜರಿದ್ದರು.

ರಾಹುಲ್‌ ಆರೋಪವೇನು?:

ದೆಹಲಿಯ ಇಂದಿರಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌, ‘ಕೇಂದ್ರ ಚುನಾವಣಾ ಆಯೋಗವು ಮತಕಳವು ಮಾಡುವವರನ್ನು ರಕ್ಷಿಸುವುದನ್ನು ನಿಲ್ಲಿಸಬೇಕು. 2023ರ ವಿಧಾನಸಭೆ ಚುನಾವಣೆಗೂ ಮುನ್ನ ಆಳಂದ ಕ್ಷೇತ್ರದಲ್ಲಿ ಮತದಾರರ ಹೆಸರು ತೆಗೆದು ಹಾಕುವ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ತನಿಖೆಗೆ ಪೂರಕವಾಗಿ ವಾರದೊಳಗೆ ಸಿಐಡಿ ಕೇಳಿದ ಮಾಹಿತಿ ನೀಡಬೇಕು. ಒಂದು ವೇಳೆ ಮಾಹಿತಿ ನೀಡದೇ ಹೋದಲ್ಲಿ ಸಂವಿಧಾನದ ಹತ್ಯೆಯಲ್ಲಿ ಆಯೋಗ ಕೂಡ ಸಹಭಾಗಿ ಎಂಬುದು ಸ್ಪಷ್ಟವಾಗಲಿದೆ’ ಎಂದು ಕಿಡಿಕಾರಿದರು.

ಸೆಂಟ್ರಲೈಸ್ಡ್‌ ಸಾಫ್ಟ್‌ವೇರ್‌ ಬಳಕೆ:

‘ಆಳಂದ ಕ್ಷೇತ್ರದಲ್ಲಿ 2023ರಲ್ಲಿ ಮತದಾರರ ಹೆಸರು ತೆಗೆಯಲು ಬಳಸುವ ಫಾರಂ 7 ದುರ್ಬಳಕೆ ಮಾಡಿಕೊಂಡು 6,018 ಮತದಾರರನ್ನು ತೆಗೆದುಹಾಕಲು ಪ್ರಯತ್ನಿಸಲಾಗಿತ್ತು. ಇದಕ್ಕಾಗಿ ಸೆಂಟ್ರಲೈಸ್ಡ್‌ ಸಾಫ್ಟ್‌ವೇರ್‌ ಮತ್ತು ಅರ್ಜಿಗಳಿಗೆ ಅರ್ಜಿದಾರರ ನೈಜ ಫೋನ್‌ ನಂಬರ್‌ ಬಳಸದೇ ಕರ್ನಾಟಕದ ಹೊರಗಿನ ಫೋನ್‌ಗಳನ್ನು ಬಳಸಲಾಗಿತ್ತು. ಆಳಂದದಲ್ಲಿ ಡಿಲೀಟ್‌ ಯತ್ನ ನಡೆದರೆ, ಪಕ್ಕದ ರಾಜ್ಯ ಮಹಾರಾಷ್ಟ್ರದ ರಾಜುರಾ ಕ್ಷೇತ್ರದಲ್ಲಿ ಸ್ವಯಂಚಾಲಿತ ಸಾಫ್ಟ್‌ವೇರ್ ಬಳಸಿ ಮೋಸದ ರೀತಿಯಲ್ಲಿ 6,850 ಮತದಾರರನ್ನು ಸೇರಿಸಲಾಗಿತ್ತು’ ಎಂದರು.

‘ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರನ್ನು ಗುರಿ ಮಾಡಿ ಅವರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಲಾಗಿದೆ. ಮಹಾರಾಷ್ಟ್ರ, ಕರ್ನಾಟಕ ಅಲ್ಲದೆ ಹರ್ಯಾಣ, ಉತ್ತರಪ್ರದೇಶದಲ್ಲೂ ವ್ಯವಸ್ಥಿತವಾಗಿ ಈ ರೀತಿ ಚುನಾವಣಾ ಅಕ್ರಮಗಳು ಆಗಿವೆ. ಈ ಕುರಿತು ನಮ್ಮ ಬಳಿ ದಾಖಲೆಗಳಿವೆ’ ಎಂದು ಹೇಳಿದರು.

ಕಾಂಗ್ರೆಸ್‌ ಮತದಾರರ ಹೆಸರಿಗೆ ಕುತ್ತು:

‘ಆಳಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿರುವ ಟಾಪ್‌ 10 ಬೂತ್‌ಗಳನ್ನೇ ಟಾರ್ಗೆಟ್‌ ಮಾಡಿ ಹೆಚ್ಚಿನ ಮತದಾರರ ಹೆಸರು ಡಿಲೀಟ್‌ ಮಾಡಲು ಯತ್ನಿಸಲಾಗಿತ್ತು. ಈ ಪೈಕಿ 2018ರಲ್ಲಿ ಕಾಂಗ್ರೆಸ್‌ ಈ 10ರಲ್ಲಿ 8 ಬೂತ್‌ಗಳಲ್ಲಿ ಗೆದ್ದಿತ್ತು. ಮತದಾರರ ಹೆಸರು ಡಿಲೀಟ್‌ ಮಾಡುವ ಪ್ರಯತ್ನ ಕಾಕತಾಳೀಯವಲ್ಲ, ಇದು ಕಾಂಗ್ರೆಸ್‌ ಬಲಿಷ್ಠವಾಗಿರುವ ಬೂತ್‌ಗಳಲ್ಲಿ ನಡೆದ ಯೋಜಿತ ಕಾರ್ಯಾಚರಣೆ. ಪ್ರತಿ ಬೂತ್‌ನ ಮೊದಲ ಮತದಾರನನ್ನು ಡಿಲೀಟ್‌ ಮಾಡಲು ಯತ್ನ ನಡೆದಿತ್ತು ಎಂಬುದು ಇನ್ನೊಂದು ವಿಚಾರ’ ಎಂದರು.

ಬಯಲಿಗೆ ಬಂದಿದ್ದು ಹೇಗೆ?:

‘ಆಳಂದದಲ್ಲಿ ಮೊದಲಿಗೆ ಬೂತ್‌ ಮಟ್ಟದ ಅಧಿಕಾರಿಯೊಬ್ಬರು ತಮ್ಮ ಸಂಬಂಧಿ ಹೆಸರು ಮತಪಟ್ಟಿಯಲ್ಲಿ ರದ್ದಾಗಿರುವುದನ್ನು ಗಮನಿಸಿದರು. ನೆರೆಮನೆಯ ವ್ಯಕ್ತಿ ಹೆಸರಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಿರುವುದು ಅರಿವಿಗೆ ಬಂತು. ಆ ಕುರಿತು ನೆರೆಮನೆಯವರನ್ನು ಪ್ರಶ್ನಿಸಿದಾಗ ತಮಗೆ ಈ ಕುರಿತು ಮಾಹಿತಿಯೇ ಇಲ್ಲ ಎಂದರು. ಬಳಿಕ ಅನ್ಯಶಕ್ತಿಗಳು ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಹೈಜಾಕ್‌ ಮಾಡಿ ಮತಗಳನ್ನು ಡಿಲೀಟ್‌ ಮಾಡಿರುವುದು ಬೆಳಕಿಗೆ ಬಂತು. ಇದು ಅಚಾನಕ್‌ ಆಗಿ ಬೆಳಕಿಗೆ ಬಂದ ಪ್ರಕರಣ’ ಎಂದು ತಿಳಿಸಿದರು.

‘ಅಸಲಿ ಮತದಾರರ ಹೆಸರು ಡಿಲೀಟ್‌ ಮಾಡಲು 6,018 ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಲಾಗಿತ್ತು. ಕರ್ನಾಟಕದ ಹೊರಗಿನ ಮೊಬೈಲ್‌ ನಂಬರ್‌ಗಳನ್ನು ಬಳಸಿ, ಮ್ಯಾನ್ಯುವಲ್‌ ಬದಲು ಅಟೋಮ್ಯಾಟಿಕ್‌ ಆಗಿ ಫೈಲ್‌ ಮಾಡಲಾಗಿತ್ತು. ಈ ಕುರಿತು ಅರ್ಜಿ ಸಲ್ಲಿಸಿದವರಿಗಾಗಲಿ, ಯಾರ ಹೆಸರು ಡಿಲೀಟ್‌ ಅರ್ಜಿ ಸಲ್ಲಿಸಲಾಗಿತ್ತೋ ಅವರಿಗಾಗಲಿ ಮಾಹಿತಿಯೇ ಇರಲಿಲ್ಲ. ಇಡೀ ಮತದಾರರ ಪಟ್ಟಿ ತೆಗೆದುಹಾಕುವ ಪ್ರಕ್ರಿಯೆಗೆ ಸಾಫ್ಟ್‌ವೇರ್‌ ಬಳಸಲಾಗಿತ್ತು’ ಎಂದು ರಾಹುಲ್ ಆರೋಪಿಸಿದರು.

‘ಈ ಅಕ್ರಮದ ಕುರಿತು ತನಿಖೆ ನಡೆಯುತ್ತಿದೆ. ಆನ್‌ಲೈನ್‌ನಲ್ಲಿ ಹೆಸರು ಡಿಲೀಟ್‌ ಮಾಡಲು ಬಳಸಿದ ಐಪಿ ನಂಬರ್‌, ಒಟಿಪಿ ಕುರಿತು ಮಾಹಿತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಕರ್ನಾಟಕದ ಸಿಐಡಿ 18 ತಿಂಗಳಲ್ಲಿ 18 ಪತ್ರ ಬರೆದಿದೆ. ಆದರೆ ಅವರು ಈ ಕುರಿತು ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿಲ್ಲ. ಅವರೇನಾದರೂ ಮಾಹಿತಿ ನೀಡಿದರೆ ಈ ಕಾರ್ಯಾಚರಣೆಯ ಹಿಂದಿರುವವರ ಹೆಸರು ಬೆಳಕಿಗೆ ಬರಲಿದೆ’ ಎಂದರು.

‘ಯಾರೋ ಒಬ್ಬರು ವ್ಯವಸ್ಥಿತವಾಗಿ ದೇಶಾದ್ಯಂತ ಲಕ್ಷಾಂತರ ಮಂದಿ ಮತದಾರರ ಹೆಸರನ್ನು ತೆಗೆದು ಹಾಕುವ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ಯಾರು ಈ ರೀತಿ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಭಾರತದ ಪ್ರತಿಯೊಬ್ಬ ಯುವಜನರೂ ಇದನ್ನು ತಿಳಿದುಕೊಳ್ಳಬೇಕು ಎಂದು ನಾನೂ ಬಯಸುತ್ತೇನೆ’ ಎಂದರು.---

ಹೈಡ್ರೋಜನ್‌ ಬಾಂಬ್‌ಗೂ ಇದಕ್ಕೂ ಸಂಬಂಧ ಇಲ್ಲ: ರಾಗಾ

‘ಮತದಾರರ ಪಟ್ಟಿಯ ಹಿಂದಿರುವ ಮಾಸ್ಟರ್‌ ಮೈಂಡ್‌ಗಳು ಯಾರು ಎಂಬುದನ್ನೂ ನಾನು ಜನರ ಮುಂದಿಡುತ್ತೇನೆ. ನನ್ನ ಹೈಡ್ರೋಜನ್‌ ಬಾಂಬ್‌ ಎಲ್ಲವನ್ನೂ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ರೂಪದಲ್ಲಿ ಬಹಿರಂಗಪಡಿಸಲಿದೆ. ನಾನು ಈ ಹಿಂದೆ ಹೈಡ್ರೋಜನ್‌ ಬಾಂಬ್‌ ಹಾಕುವುದಾಗಿ ಹೇಳಿದ್ದೆ. ಆ ಹೈಡ್ರೋಜನ್‌ ಬಾಂಬ್‌ಗೂ ಈ ಆರೋಪಕ್ಕೂ ಯಾವುದೇ ಸಂಬಂಧ ಇಲ್ಲ. ಹೈಡ್ರೋಜನ್‌ ಬಾಂಬ್‌ ಶೀಘ್ರದಲ್ಲೇ ಬಿಡುಗಡೆಯಾಗಲಿದೆ’ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.ಗೊತ್ತಾಗಿದ್ದು ಹೇಗೆ?- ಆಳಂದದ ಬೂತ್‌ ಮಟ್ಟದ ಅಧಿಕಾರಿಯೊಬ್ಬರ ಸಂಬಂಧಿ ಹೆಸರು ಮತಪಟ್ಟಿಯಿಂದ ರದ್ದಾಗಿತ್ತು- ಆ ರದ್ದತಿ ಕೋರಿ ನೆರೆಮನೆಯ ವ್ಯಕ್ತಿ ಹೆಸರಲ್ಲಿ ಅರ್ಜಿಯನ್ನು ಸಲ್ಲಿಕೆಯಾಗಿರುವುದು ಗೊತ್ತಾಯಿತು- ಈ ಬಗ್ಗೆ ನೆರೆಮನೆಯವರನ್ನು ಪ್ರಶ್ನಿಸಿದಾಗ ಅವರು ತಮಗೆ ಮಾಹಿತಿಯೇ ಇಲ್ಲ ಎಂದು ಹೇಳಿದ್ದರು