ಸಾರಾಂಶ
ಚೀನಾದಲ್ಲಿ ಹೆಚ್‌ಎಂಪಿವಿ ಸೋಂಕು ಸ್ಫೋಟಗೊಂಡ ವರದಿಗಳ ಆತಂಕ ಸೃಷ್ಟಿಸಿರುವ ಹೊತ್ತಿನಲ್ಲೇ, ಅಲ್ಲಿ ಸಾಮಾನ್ಯವಾಗಿ ಚಳಿಗಾಲದ ಹೊತ್ತಿನಲ್ಲಿ ಕಂಡುಬರುವ ಸೋಂಕುಗಳು ಹರಡುತ್ತಿವೆಯಷ್ಟೇ. ಅಲ್ಲಿ ಯಾವುದೇ ಅಸಹಜ ಬೆಳವಣಿಗೆ ಕಂಡುಬಂದಿಲ್ಲ ಎಂದು ಭಾರತ ಸರ್ಕಾರ ಸಮಾಧಾನಕರ ಮಾಹಿತಿ ನೀಡಿದೆ.
ನವದೆಹಲಿ: ಕೊರೋನಾ ಜನಕ ಚೀನಾದಲ್ಲಿ ಹೆಚ್‌ಎಂಪಿವಿ ಸೋಂಕು ಸ್ಫೋಟಗೊಂಡ ವರದಿಗಳ ಆತಂಕ ಸೃಷ್ಟಿಸಿರುವ ಹೊತ್ತಿನಲ್ಲೇ, ಅಲ್ಲಿ ಸಾಮಾನ್ಯವಾಗಿ ಚಳಿಗಾಲದ ಹೊತ್ತಿನಲ್ಲಿ ಕಂಡುಬರುವ ಸೋಂಕುಗಳು ಹರಡುತ್ತಿವೆಯಷ್ಟೇ. ಅಲ್ಲಿ ಯಾವುದೇ ಅಸಹಜ ಬೆಳವಣಿಗೆ ಕಂಡುಬಂದಿಲ್ಲ ಎಂದು ಭಾರತ ಸರ್ಕಾರ ಸಮಾಧಾನಕರ ಮಾಹಿತಿ ನೀಡಿದೆ.
ಅಲ್ಲದೆ ಯಾವುದೇ ಪರಿಸ್ಥಿತಿ ಎದುರಿಸಲು ನಮ್ಮ ಆರೋಗ್ಯ ವ್ಯವಸ್ಥೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ನೇತೃತ್ವದಲ್ಲಿ ಶನಿವಾರ ದೆಹಲಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತಜ್ಞರು, ವಿಪತ್ತು ನಿರ್ವಹಣಾ ವಿಭಾಗ, ಐಸಿಎಂಆರ್, ತುರ್ತು ವೈದ್ಯಕೀಯ ಪರಿಹಾರ ವಿಭಾಗ, ಏಮ್ಸ್ ಸೇರಿದಂತೆ ಹಲವು ಆಸ್ಪತ್ರೆಗಳನ್ನೊಳಗೊಂಡ ಜಂಟಿ ಮೇಲ್ವಿಚಾರಣಾ ಸಮಿತಿ ಸಭೆ ನಡೆಸಿತ್ತು.
ಈ ವೇಳೆ, ‘ಚೀನಾದಲ್ಲಿನ ಪರಿಸ್ಥಿತಿ ಇನ್‌ಫ್ಲೂಯೆನ್ಜಾ, ಆರ್‌ಎಸ್‌ವಿ ಹಾಗೂ ಹೆಚ್‌ಎಂಪಿವಿಗಳಂತಹ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸೋಂಕಿನಿಂದ ಸೃಷ್ಟಿಯಾಗಿದೆ. ಇದು ಚಳಿಗಾಲದಲ್ಲಿ ಸಾಮಾನ್ಯ’ ಎಂದು ಘೋಷಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ಪರಿಸ್ಥಿತಿಯ ಮೇಲೆ ಭಾರತ ಸರ್ಕಾರ ಸಾಧ್ಯವಾದ ರೀತಿಯಲ್ಲಿ ನಿಗಾ ವಹಿಸಿದ್ದು, ಈ ಕುರಿತ ನಿಯಮಿತ ಮಾಹಿತಿಯನ್ನು ಒದಗಿಸಲು ವಿಶ್ವ ಆರೋಗ್ಯ ಸಂಸ್ಥೆಗೆ ಕೋರಲಾಗಿದೆ. ಜತೆಗೆ, ಹೆಚ್‌ಎಂಪಿವಿ ಸೋಂಕು ಪರೀಕ್ಷೆಗೆ ಐಸಿಎಂಆರ್ ಹೆಚ್ಚಿನ ಲ್ಯಾಬೋರೇಟರಿಗಳನ್ನು ಸ್ಥಾಪಿಸಲಿದ್ದು, ಇಡೀ ವರ್ಷ ಈ ಸೋಂಕಿನ ವರ್ತನೆಯನ್ನು ಗಮನಿಸಲಿದೆ ಎಂದು ಮಾಹಿತಿ ನೀಡಿದೆ.