ಸಾರಾಂಶ
ನವದೆಹಲಿ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ 26 ಪ್ರವಾಸಿಗರ ನರಮೇಧ ನಡೆದ ಹೊತ್ತಿನಲ್ಲೇ ನವದೆಹಲಿಯಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕೇಕ್ ಕತ್ತರಿಸಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಕೇಕ್ ಬಾಕ್ಸ್ ಹಿಡಿದುಕೊಂಡು ರಾಯಭಾರ ಕಚೇರಿಯೊಳಗೆ ತೆರಳುತ್ತಿದ್ದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವೇಳೆ ಮಾಧ್ಯಮಗಳು ಕೇಕ್ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ನೀವು ರಾಯಭಾರ ಕಚೇರಿಯ ಸಿಬ್ಬಂದಿಯೇ ಎಂದು ಪ್ರಶ್ನಿಸಿದಾಗ ಆತ ಯಾವುದೇ ಉತ್ತರ ನೀಡಿದೇ ತಪ್ಪಿಸಿಕೊಂಡು ಹೋಗಿದ್ದಾನೆ. ಭಾರತದಲ್ಲಿನ ದುರಂತದ ಹೊತ್ತಿನಲ್ಲೂ ಪಾಕ್ ಅಧಿಕಾರಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ ಬಗ್ಗೆ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಇದು ಪ್ರವಾಸಿಗರ ಹತ್ಯೆಯನ್ನು ಸಂಭ್ರಮಿಸಲು ಮಾಡಿದ್ದು ಎಂಬ ಟೀಕೆ ವ್ಯಕ್ತವಾಗಿದೆ.
ಗಡಿ ನುಸುಳಲು ಕಾಯುತ್ತಿರುವ 200 ಉಗ್ರರು
ನವದೆಹಲಿ: ಪಹಲ್ಗಾಂ ಉಗ್ರರ ದಾಳಿ ಬೆನ್ನಲ್ಲೇ ಗಡಿನಿಯಂತ್ರಣ ರೇಖೆ ಬಳಿ ಕಾರ್ಯಾಚರಿಸುತ್ತಿರುವ ಉಗ್ರರ ಅಡಗುತಾಣಗಳ ಪತ್ತೆ ಕಾರ್ಯವನ್ನು ಭಾರತ ಚುರುಕುಗೊಳಿಸಿದ್ದು, ಈ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿಯಲ್ಲಿ 42 ಉಗ್ರರ ಅಡುಗುತಾಣ ಪತ್ತೆಯಾಗಿದೆ.
ಅದರಲ್ಲಿ 150-200 ತರಬೇತಿ ಪಡೆದ ಉಗ್ರರು ಭಾರತದೊಳಗೆ ನುಸುಳಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ
60ಕ್ಕೂ ಹೆಚ್ಚು ಉಗ್ರರು: ಹಿಜ್ಬುಲ್ ಮುಜಾಹಿದೀನ್(ಎಚ್‌ಎಂ), ಜೈಶ್-ಎ-ಮೊಹಮ್ಮದ್(ಜೆಇಎಂ) ಮತ್ತು ಲಷ್ಕರ್ ಎ ತೊಯ್ಬಾ(ಎಲ್‌ಇಟಿ)ಗೆ ಸೇರಿದ 60 ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರ ಜತೆಗೆ 17 ಸ್ಥಳೀಯ ಉಗ್ರರೂ ಹಿಂಸಾಚಾರಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಹಿಂಡನ್‌ಬರ್ಗ್ ವರದಿ ಹಿಂದೆ ರಾಹುಲ್ ಕೈವಾಡ: ರಷ್ಯಾ ವರದಿ
ನವದೆಹಲಿ: ಅದಾನಿ ಗ್ರೂಪ್ ವಿರುದ್ಧ ಹಿಂಡನ್‌ಬರ್ಗ್ ವರದಿ ಪ್ರಕಟಿಸುವಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕೈವಾಡವಿದೆ ಎಂಬ ಮಾಹಿತಿಯನ್ನು ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಕಲೆಹಾಕಿರುವುದಾಗಿ ರಷ್ಯಾದ ಸುದ್ದಿಸಂಸ್ಥೆ ಸ್ಪುಟ್ನಿಕ್ ಇಂಡಿಯಾ ವರದಿ ಮಾಡಿದೆ.
ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಮತ್ತು ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ ಅವರ ಹೋಮ್ ಸರ್ವರ್‌ಗಳನ್ನು ಹ್ಯಾಕ್ ಮಾಡಿ ಮೊಸಾದ್ ಮಾಹಿತಿ ಪಡೆದಿದೆ ಎಂದು ಅದು ತಿಳಿಸಿದೆ. ಅದಾನಿ ಪೋರ್ಟ್ಸ್ ಇಸ್ರೇಲ್‌ನ ಹೈಫಾ ಬಂದರಿನಲ್ಲಿ ಪ್ರಮುಖ ಪಾಲನ್ನು ಖರೀದಿಸಲು ಸುಮಾರು 1 ಲಕ್ಷ ಕೋಟಿ ರು. ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೆ ಈ ಸುದ್ದಿ ಹೊರಬಂದಿದೆ. ಹಿಂಡನ್‌ಬರ್ಗ್ ವರದಿಯಿಂದ ಅದಾನಿಯವರ ಖ್ಯಾತಿಗೆ ಮಾತ್ರವಲ್ಲದೆ ಭಾರತ ಮತ್ತು ಇಸ್ರೇಲ್ ನಡುವಿನ ಆರ್ಥಿಕ ಪಾಲುದಾರಿಕೆಗೂ ಹಾನಿಯಾಗುತ್ತದೆ ಎಂಬ ಕಳವಳದಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೊಸಾದ್‌ಗೆ ನಿರ್ದೇಶಿಸಿದ್ದಾರೆ. ‘ಆಪರೇಷನ್ ಜೆಪ್ಪೆಲಿನ್’ ಹೆಸರಿನಲ್ಲಿ ಮೊಸಾದ್ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ.
ಏನಿದು ಪ್ರಕರಣ?:ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಶಾರ್ಟ್ ಸೆಲ್ಲರ್ ಹಿಂಡನ್‌ಬರ್ಗ್ ರಿಸರ್ಚ್ 2023ರ ಜನವರಿಯಲ್ಲಿ ಅದಾನಿ ಕಂಪನಿ ವಿರುದ್ಧ ಹಲವು ಆರೋಪಗಳನ್ನು ಮಾಡಿ ವರದಿ ಪ್ರಕಟಿಸಿತ್ತು. ಇದರಿಂದ ಭಾರತದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಯಿತು. ಅದಾನಿ ಗ್ರೂಪ್ ಷೇರುಗಳಲ್ಲಿ ತೀವ್ರ ಕುಸಿತವಾಗಿ, ಮಾರುಕಟ್ಟೆ ಮೌಲ್ಯದಲ್ಲಿ 8.5 ಲಕ್ಷ ಕೋಟಿ ರು.ಗೂ ಹೆಚ್ಚು ನಷ್ಟವಾಯಿತು. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿಗೂ ಕಾರಣವಾಯಿತು.
ಆ ಪ್ರಕರಣದಲ್ಲಿ ಕಾಂಗ್ರೆಸ್‌ನ ಕೈವಾಡವಿದೆಯೇ? ಪ್ರಧಾನಿ ಮೋದಿಯವರನ್ನು ಗುರಿಯಾಗಿಸಲು ಸಂಘಟಿತ ಪ್ರಯತ್ನ ನಡೆದಿತ್ತೇ? ಇತ್ಯಾದಿ ಮಾಹಿತಿ ಪಡೆಯಲು ಮೊಸಾದ್ ಮುಂದಾಗಿದೆ ಎಂದು ವರದಿ ಉಲ್ಲೇಖಿಸಿದೆ.