ರೈಸಿ ಸಾವು ಭಾರತಕ್ಕೆ ದೊಡ್ಡ ನಷ್ಟ?

| Published : May 21 2024, 01:50 AM IST / Updated: May 21 2024, 05:20 AM IST

ಸಾರಾಂಶ

ರೈಸಿ ಸಾವು ಭಾರತಕ್ಕೆ ದೊಡ್ಡ ನಷ್ಟವಾಗುವ ಸಾಧ್ಯತೆಯಿದ್ದು, ಚಾಬಹಾರ್‌, ಕಾಶ್ಮೀರ ಕುರಿತು ಭಾರತದ ಪರ ರೈಸಿ ನಿಲುವು ಹೊಂದಿದ್ದರು ಎಂಬುದು ಗಮನಾರ್ಹ.

ನವದೆಹಲಿ: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಅಕಾಲಿಕ ಸಾವು ಭಾರತದ ಪಾಲಿಗೆ ಆದ ದೊಡ್ಡ ನಷ್ಟ ಎಂದೇ ಬಣ್ಣಿಸಲಾಗಿದೆ. ಕಾರಣ ಹಲವು ಮಹತ್ವದ ವಿಷಯಗಳಲ್ಲಿ ರೈಸಿ ಭಾರತ ಪರ ನಿಲುವುಗಳನ್ನು ವ್ಯಕ್ತಪಡಿಸಿದ್ದರು. 

ಜೊತೆಗೆ ಅವರ ಅವಧಿಯಲ್ಲಿ ಉಭಯ ದೇಶಗಳ ಸಂಬಂಧ ಸಾಕಷ್ಟು ಸುಧಾರಣೆಯಾಗಿತ್ತು.ಇತ್ತೀಚೆಗಷ್ಟೇ ಭಾರತ ಮತ್ತು ಇರಾನ್‌ ದೇಶಗಳು ಚಾಬಹಾರ್‌ ಬಂದರು ನಿರ್ವಹಣೆ ಸಂಬಂಧ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದವು. ಪಾಕಿಸ್ತಾನವನ್ನು ಬಳಸದೆಯೇ ಭಾರತಕ್ಕೆ ಆಫ್ಘಾನಿಸ್ತಾನ ಮತ್ತು ಇತರೆ ಕೇಂದ್ರ ಏಷ್ಯಾ ದೇಶಗಳಿಗೆ ಸಂಪರ್ಕ ಕಲ್ಪಿಸಲು ಚಾಬಹಾರ್‌ ಅತ್ಯಂತ ಮಹತ್ವದ್ದಾಗಿತ್ತು. 

ಇರಾನ್‌ ಕಟ್ಟರ್‌ ಇಸ್ಲಾಮಿಕ್‌ ದೇಶವಾಗಿದ್ದರೂ ಪಾಕಿಸ್ತಾನದ ಪ್ರತಿರೋಧವನ್ನು ಬದಿಗೊತ್ತಿ, ತನ್ನ ದೇಶದ ಚಾಬಹಾರ್‌ ಬಂದರಿನ ಒಂದು ಟರ್ಮಿನಲ್‌ ಅನ್ನು ಮುಂದಿನ 10 ವರ್ಷಗಳ ಕಾಲ ಭಾರತದ ನಿರ್ವಹಣೆ ಒಪ್ಪಿಸಲು ಮುಂದಾಗಿತ್ತು. ಇದರಲ್ಲಿ ರೈಸಿ ಅವರ ಪಾತ್ರ ಮಹತ್ವದ್ದಾಗಿತ್ತು.

ಕಾಶ್ಮೀರ ಬಗ್ಗೆ ತಟಸ್ಥ:

ಇನ್ನು ಇರಾನ್‌ಗೆ ಪಾಕಿಸ್ತಾನ ಅತ್ಯಾಪ್ತ ದೇಶವಾದರೂ ಕಾಶ್ಮೀರ ವಿಷಯದಲ್ಲಿ ಇರಾನ್‌ ತಟಸ್ಥ ಧೋರಣೆ ತಾಳುವ ಮೂಲಕ ಪರೋಕ್ಷವಾಗಿ ಭಾರತದ ನೈತಿಕ ಬಲ ಹೆಚ್ಚಿಸಿತ್ತು.

ಕಳೆದ ಏ.22ರಿಂದ-24ರವರೆಗೆ ರೈಸಿ ಪಾಕಿಸ್ತಾನಕ್ಕೆ ದೊಡ್ಡ ಮಟ್ಟದ ನಿಯೋಗದೊಂದಿಗೆ ಭೇಟಿ ಕೊಟ್ಟಿದ್ದರು. 2 ದಿನಗಳ ಭೇಟಿ ಬಳಿಕ ಉಭಯ ದೇಶಗಳು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಕಾಶ್ಮಿರ ವಿಷಯವನ್ನು ಪ್ರಸ್ತಾಪಿಸುವ ಪಾಕಿಸ್ತಾನದ ಕೋರಿಕೆಯನ್ನು ರೈಸಿ ಸ್ಪಷ್ಟವಾಗಿ ತಳ್ಳಿಹಾಕಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಜಂಟಿ ಹೇಳಿಕೆಯಲ್ಲಿ ಇಸ್ರೇಲ್‌- ಪ್ಯಾಲೆಸ್ತೀನ್‌ ವಿಷಯ ಪ್ರಸ್ತಾಪವಾದರೂ ಕಾಶ್ಮೀರ ವಿಷಯ ಪ್ರಸ್ತಾಪವಾಗಲಿಲ್ಲ.