ಸಾರಾಂಶ
ನಾನು ವಿಪ್ರೋ ಸಂಸ್ಥೆಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದೆ. ಆದರೆ ಅದರ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ನನ್ನ ಕೆಲಸದ ಅರ್ಜಿ ತಿರಸ್ಕರಿಸಿದ್ದರು. ಬಳಿಕ ನಾವು ಇನ್ಸಫೋಸಿಸ್ ಸ್ಥಾಪಿಸಿದೆವು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸ್ವಾರಸ್ಯಕರ ಸಂಗತಿ ತಿಳಿಸಿದ್ದಾರೆ.
ನವದೆಹಲಿ: ವಿಪ್ರೋ ಕಂಪೆನಿಗೆ ಕೆಲಸಕ್ಕಾಗಿ ನಾನು ಸಲ್ಲಿಸಿದ್ದೆ. ಈ ಅರ್ಜಿಯನ್ನು ವಿಪ್ರೋದ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್‌ಜಿ ತಿರಸ್ಕರಿಸಿದ್ದರು. ಹೀಗಾಗಿ ಐಟಿ ವಲಯದಲ್ಲಿ ವಿಪ್ರೋ ಕಂಪೆನಿಯ ಪ್ರಬಲ ಪ್ರತಿಸ್ಪರ್ಧಿ ಇನ್ಫೋಸಿಸ್ ಹುಟ್ಟಿಕೊಳ್ಳಲು ಸಾಧ್ಯವಾಯಿತು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹೇಳಿದ್ದಾರೆ.
ಟೀವಿ ಸಂದರ್ಶನವೊಂದರಲ್ಲಿ ಶನಿವಾರ ಮಾತನಾಡಿದ ಮೂರ್ತಿ, ‘ನನ್ನನ್ನು ಅವರ ಕಂಪೆನಿಗೆ ಸೇರಿಸಿಕೊಳ್ಳದ್ದು ತಾನು ಮಾಡಿದ ಬಹುದೊಡ್ಡ ತಪ್ಪು ಎಂದು ಅಜೀಂ ಪ್ರೇಮ್‌ಜೀ ನನಗೊಮ್ಮೆ ಹೇಳಿದ್ದರು. ನನ್ನನ್ನು ವಿಪ್ರೋ ನೇಮಿಸಿಕೊಂಡಿದ್ದರೆ, ನನಗೆ ಮತ್ತು ಪ್ರೇಮ್‌ಜಿ ಅವರ ಕಂಪನಿಗೆ ಎಲ್ಲವೂ ವಿಭಿನ್ನವಾಗಿ ಪರಿಣಮಿಸುತ್ತಿತ್ತು’ ಎಂದರು.
1981ರಲ್ಲಿ ಮೂರ್ತಿ ತಮ್ಮ 6 ಮಿತ್ರರ ಜೊತೆ ಸೇರಿ ಪತ್ನಿ ಸುಧಾ ಮೂರ್ತಿ ನೀಡಿದ್ದ ₹10,000 ದುಡ್ಡು ಹಾಕಿ ಕಂಪೆನಿ ಆರಂಭಿಸಿದ್ದರು. 12ನೇ ಜನವರಿ 2024ರ ಹೊತ್ತಿಗೆ ಇನ್ಪೋಸಿಸ್ ಮೌಲ್ಯ ₹6.65 ಲಕ್ಷ ಕೋಟಿ ಹಾಗೂ ವಿಪ್ರೋ ಮೌಲ್ಯ ₹2.43 ಲಕ್ಷ ಕೋಟಿ ಆಗಿದೆ.