ಬೈಕ್‌ಗಿಂತ ಕಾರೇಕೆ ಹೆಚ್ಚು ಭಾರ?: ಎಂಜಿನಿಯರ್‌ಗಳಿಗೇ ರಾಗಾ ಪ್ರಶ್ನೆ

| N/A | Published : Oct 04 2025, 05:09 AM IST

rahul gandhi pulsar
ಬೈಕ್‌ಗಿಂತ ಕಾರೇಕೆ ಹೆಚ್ಚು ಭಾರ?: ಎಂಜಿನಿಯರ್‌ಗಳಿಗೇ ರಾಗಾ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಲಾಭಗಳ ಕುರಿತು ಕೊಲಂಬಿಯಾ ವಿವಿಯ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಗೆ ವಿವರಿಸಲು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಳಸಿದ ಉದಾಹರಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ನಗೆಪಾಟಲಿಗೆ ಈಡಾಗಿದೆ.

ನವದೆಹಲಿ: ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಲಾಭಗಳ ಕುರಿತು ಕೊಲಂಬಿಯಾ ವಿವಿಯ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಗೆ ವಿವರಿಸಲು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಳಸಿದ ಉದಾಹರಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ನಗೆಪಾಟಲಿಗೆ ಈಡಾಗಿದೆ.

‘ರಾಹುಲ್‌ರ ಎಂಜಿನಿಯರಿಂಗ್‌ ಜ್ಞಾನವನ್ನು ಕೇಳಿದ ಬಳಿಕ ಹಾರ್ಲೆ ಡೇವಿಡ್ಸ್‌ಸನ್‌ನಿಂದ ಹಿಡಿದು ಟೊಯೋಟಾದವರೆಗೆ ಎಂಜಿನಿಯರ್‌ಗಳು ಎದೆ ಚಚ್ಚಿಕೊಳ್ಳುತ್ತಿದ್ದಾರೆ. ರಾಹುಲ್‌ ಹೇಳಿಕೆ ಮೂರ್ಖತನದ್ದು. ಇನ್ನೂ ಯಾರಿಗಾದರೂ ರಾಹುಲ್ ಜ್ಞಾನದ ಬಗ್ಗೆ ಅನುಮಾನ ಇದ್ದರೆ ಇಂದಿಗೆ ಅದು ಪೂರ್ಣ ಅಳಿಸಿ ಹೋಗಿರುತ್ತದೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಬೈಕ್‌- ಕಾರ್‌:

ಮೆಡಿಲ್ಲೆನ್‌ ನಗರದ ಇಐಎ ವಿವಿಯಲ್ಲಿ ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿದ ರಾಹುಲ್‌, ‘ಮೋಟಾರ್‌ ಸೈಕಲ್‌ ಏಕೆ 100 ಕೆಜಿ ಭಾರವಿರುತ್ತದೆ? ಕಾರು ಏಕೆ 3000 ಕೆಜಿ ತೂಕವಿರುತ್ತದೆ? ಒಬ್ಬ ವ್ಯಕ್ತಿ ಚಲಾಯಿಸುವ ಕಾರಿಗೆ ನಿಮಗೆ 3000 ಕೆಜಿ ಲೋಹ ಬೇಕು. ಮತ್ತೊಂದೆಡೆ 100 ಕೆಜಿ ತೂಕವಿರುವ ಬೈಕ್‌ನಲ್ಲಿ ಇಬ್ಬರು ಪ್ರಯಾಣಿಕರು ಸಂಚರಿಸುತ್ತಾರೆ. ಹಾಗಿದ್ದರೆ ಇಬ್ಬರು ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಬೈಕ್‌ಗೆ 150 ಕೆಜಿ ಲೋಹ ಸಾಕಾಗಿದ್ದರೆ, ಕಾರಿಗೇಕೆ 3000 ಕೆಜಿ ಲೋಹ ಬೇಕು? ಎಂದು ಪ್ರಶ್ನಿಸುತ್ತಾರೆ. ಜೊತೆಗೆ ನನ್ನ ಪ್ರಶ್ನೆಗೆ ಉತ್ತರ ಸಾಂಪ್ರದಾಯಿಕ ಇಂಧನದಿಂದ ಎಲೆಕ್ಟ್ರಿಕ್‌ಗೆ ಬದಲಾವಣೆಯಲ್ಲಿ ಅಡಗಿದೆ ಎನ್ನುತ್ತಾರೆ.

ಬಳಿಕ ತಮ್ಮ ಪ್ರಶ್ನೆಗೆ ತಾವೇ ಉತ್ತರ ನೀಡುವ ರಾಹುಲ್‌, ‘ಇದಕ್ಕೆ ಉತ್ತರವೆಂದರೆ ಎಂಜಿನ್‌! ಯಾಕೆಂದರೆ ಅಪಘಾತವಾದಾಗ ನಿಮ್ಮನ್ನು ಕೊಲ್ಲುವುದು ಎಂಜಿನ್‌. ಸರಿ ತಾನೇ? ಮೋಟಾರ್‌ ಸೈಕಲ್‌ ಹಗುರವಾಗಿರುತ್ತದೆ. ಬೈಕ್‌ ಅಪಘಾತವಾದಾಗ ಎಂಜಿನ್‌ ನಿಮ್ಮಿಂದ ದೂರವಾಗುತ್ತದೆ. ಅಂದರೆ ಎಂಜಿನ್‌ನಿಂದ ನಿಮ್ಮ ಜೀವಕ್ಕೆ ಯಾವುದೇ ಅಪಾಯವಿಲ್ಲ.

ಆದರೆ ಕಾರು ಅಪಘಾತವಾದಾಗ ಅದರ ಎಂಜಿನ್‌ ಕಾರಿನೊಳಗೆ ನುಗ್ಗಿ ನಿಮಗೆ ಗಾಯ ಮಾಡುತ್ತದೆ. ಹೀಗಾಗಿ ಇಡೀ ಕಾರನ್ನು ಎಂಜಿನ್ ನಿಮ್ಮನ್ನು ಕೊಲ್ಲದಂತೆ ರೂಪಿಸಲಾಗಿರುತ್ತದೆ’ ಎಂದು ರಾಹುಲ್‌ ಗಾಂಧಿ ವಿವರಣೆ ನೀಡುತ್ತಾರೆ.

ಬಳಿಕ, ಎಲೆಕ್ಟ್ರಿಕ್‌ ಮೋಟಾರ್‌ಗಳು ಕೇಂದ್ರೀಕೃತ ಇಂಧನ ವ್ಯವಸ್ಥೆ ಹೊಂದಿಲ್ಲ. ಬದಲಾಗಿ ಅದು ಬೇರೆ ಬೇರೆ ಸ್ಥಳಗಳಲ್ಲಿ ಮೋಟಾರ್‌ಗಳನ್ನು ಹೊಂದಿದೆ. ಅದರರ್ಥ, ಎಲೆಕ್ಟ್ರಿಕ್‌ ಮೋಟಾರ್‌ ಎಂದರೆ ಅಧಿಕಾರದ ವಿಕೇಂದ್ರೀಕರಣ ಮತ್ತು ಅದು ಹೆಚ್ಚು ಪರಿಣಾಮಕಾರಿ’ ಎಂದು ಪರೋಕ್ಷವಾಗಿ ಭಾರತದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡುತ್ತಿಲ್ಲ. ರಾಜ್ಯಗಳ ಮೇಲೆ ಕೇಂದ್ರ ಅಧಿಕಾರ ಚಲಾಯಿಸುತ್ತಿದೆ ಎಂದು ವಿಶ್ಲೇಷಿಸುವ ಯತ್ನ ಮಾಡಿದ್ದಾರೆ.

ಬಿಜೆಪಿ ವ್ಯಂಗ್ಯ:

ರಾಹುಲ್‌ ಹೇಳಿಕೆ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ನಾಯಕ ಅಮಿತ್‌ ಮಾಳವೀಯ, ಒಂದೇ ಏಟಿಗೆ ಇಷ್ಟೊಂದು ದೊಡ್ಡ ಮೂರ್ಖತನದ ಮಾತುಗಳನ್ನು ನಾನು ಎಂದಿಗೂ ಕೇಳಿಲ್ಲ. ಯಾರಾದರೂ ಇದನ್ನು ವಿಶ್ಲೇಷಿಸಿದರೆ ನಾನು ನನ್ನ ಜ್ಞಾನಭಂಡಾರ ಹೆಚ್ಚಿಸಿಕೊಳ್ಳುತ್ತೇನೆ ಎಂದಿದ್ದಾರೆ.

Read more Articles on