ನೀಟ್‌ - ಯುಜಿ ಪರೀಕ್ಷೆ ಸುಧಾರಣೆಗೆ ತಜ್ಞರ ಸಮಿತಿ ಶಿಫಾರಸು ಜಾರಿ : ಕೇಂದ್ರ ಸರ್ಕಾರ

| Published : Jan 03 2025, 12:31 AM IST / Updated: Jan 03 2025, 04:51 AM IST

ಸಾರಾಂಶ

 ಕಳೆದ ವರ್ಷದ ನೀಟ್‌-ಯುಜಿ ಪರೀಕ್ಷೆ ವಿವಾದದ ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯ ಕಾರ್ಯನಿರ್ವಹಣೆ ಕುರಿತು ಏಳು ಮಂದಿ ತಜ್ಞರನ್ನೊಳಗೊಂಡ ಪರೀಕ್ಷಾ ಸುಧಾರಣಾ ಸಮಿತಿ ಮಾಡಿರುವ ಎಲ್ಲಾ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನವದೆಹಲಿ: ಕಳೆದ ವರ್ಷದ ನೀಟ್‌-ಯುಜಿ ಪರೀಕ್ಷೆ ವಿವಾದದ ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯ ಕಾರ್ಯನಿರ್ವಹಣೆ ಕುರಿತು ಏಳು ಮಂದಿ ತಜ್ಞರನ್ನೊಳಗೊಂಡ ಪರೀಕ್ಷಾ ಸುಧಾರಣಾ ಸಮಿತಿ ಮಾಡಿರುವ ಎಲ್ಲಾ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕಳೆದ ವರ್ಷ ನಡೆದ ನೀಟ್‌ ಯುಜಿ ಪರೀಕ್ಷೆ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರೂ ಸುಪ್ರೀಂ ಕೋರ್ಟ್‌ ಆ.2ರ ವಿಚಾರಣೆ ವೇಳೆ ಈ ರಾಷ್ಟ್ರಮಟ್ಟದ ಪರೀಕ್ಷೆಯನ್ನು ರದ್ದು ಮಾಡಲು ನಿರಾಕರಿಸಿತ್ತು. ಈ ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಅಥ‍ವಾ ವ್ಯವಸ್ಥಿತವಾಗಿ ಪ್ರಶ್ನೆಪತ್ರಿಕೆ ಲೀಕ್‌ ಮಾಡುವಂಥ ಅಕ್ರಮ ನಡೆದಿರುವ ಕುರಿತು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು ಆ ಸಂದರ್ಭದಲ್ಲಿ ನೀಟ್‌ ರದ್ದತಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಹೆ ಸಂಬಂಧಿಸಿದ ವಿಚಾರಣೆ ವೇಳೆ ಹೇಳಿತ್ತು.

ಜತೆಗೆ, ಇಸ್ರೋ ಮಾಜಿ ಅಧ್ಯಕ್ಷ ಕೆ.ರಾಧಾಕೃಷ್ಣನ್‌ ನೇತೃತ್ವದಲ್ಲಿ ರಚಿಸಲಾಗಿರುವ ಏಳು ಮಂದಿ ತಜ್ಞರಿಗೆ ಎನ್‌ಟಿಎಯ ಕಾರ್ಯನಿರ್ವಹಣೆಯನ್ನು ಪುನರ್‌ ಪರಿಶೀಲಿಸಿ ನೀಟ್‌-ಯುಜಿ ಪರೀಕ್ಷೆಯು ಪಾರದರ್ಶಕ ಮತ್ತು ಅಕ್ರಮಗಳಿಂದ ಮುಕ್ತವಾಗಿ ನಡೆಸಲು ಸಲಹೆ-ಸೂಚನೆಗಳನ್ನು ನೀಡುವಂತೆಯೂ ಸೂಚಿಸಿತ್ತು.

ಸ್ಪಷ್ಟ ಭರವಸೆ: ಈ ಕುರಿತು ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಮತ್ತು ನ್ಯಾ.ಮನೋಜ್‌ ಮಿಶ್ರಾ ಅವರಿದ್ದ ಪೀಠದ ಮುಂದೆ ಗುರುವಾರ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ತಜ್ಞರ ಸಮಿತಿ ತನ್ನ ವರದಿಯನ್ನು ಈಗಾಗಲೇ ಸಲ್ಲಿಸಿದ್ದು, ಆ ಸಮಿತಿ ಮಾಡಿರುವ ಎಲ್ಲಾ ಶಿಫಾರಸುಗಳನ್ನು ಸರ್ಕಾರ ಅನುಷ್ಠಾನಕ್ಕೆ ತರಲಿದೆ ಎಂದು ಭರವಸೆ ನೀಡಿದರು. ಉತ್ತರ ಆಲಿಸಿದ ಪೀಠ, ಅರ್ಜಿಯ ಮುಂದಿನ ವಿಚಾರಣೆಯನ್ನು ಏಪ್ರಿಲ್‌ಗೆ ಮುಂದೂಡಿತು.

ಎಂಬಿಬಿಎಸ್‌, ಬಿಡಿಎಸ್‌, ಆಯುಷ್‌ ಮತ್ತಿತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಳೆದ ವರ್ಷ 23 ಲಕ್ಷ ವಿದ್ಯಾರ್ಥಿಗಳು ಎನ್‌ಟಿಎ ನಡೆಸಿದ ರಾಷ್ಟ್ರೀಯ ಮಟ್ಟದ ನೀಟ್‌-ಯುಜಿ ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಯಲ್ಲಿ ಸಾಕಷ್ಟು ಗೊಂದಲಗಳಾಗಿವೆ, ಅಕ್ರಮಗಳಾಗಿವೆ ಎಂದು ಆರೋಪಿಸಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.