ಸಾರಾಂಶ
ರೈಲ್ವೇಯಲ್ಲಿ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದ್ದು, ಎಲ್ಲರಿಗೂ ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳುವವರೆಗೂ ಪ್ರಯತ್ನ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿ : ‘ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರೈಲ್ವೇ ದೊಡ್ಡ ಪ್ರಗತಿಯನ್ನು ಸಾಧಿಸಿದೆ ಮತ್ತು ಸಮಾಜದ ಎಲ್ಲಾ ವರ್ಗದವರಿಗೆ ಆರಾಮದಾಯಕ ಪ್ರಯಾಣವು ಗ್ಯಾರಂಟಿ (ಖಾತರಿ) ಆಗುವವರೆಗೆ ವಿರಮಿಸಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಅಲ್ಲದೆ, ಕರ್ನಾಟಕಕ್ಕೆ ರೈಲ್ವೆ ಬಜೆಟ್‌ನಲ್ಲಿ ಸಾಕಷ್ಟು ನೀಡಿದ್ದೇವೆ’ ಎಂದು ಹೇಳಿದ್ದಾರೆ.
ಬೆಂಗಳೂರು-ಮದುರೈ, ಮೇರಠ್ ಸಿಟಿ- ಲಖನೌ, ಚೆನ್ನೈ ಎಗ್ಮೋರ್-ನಾಗರ್‌ಕೋಯಿಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ವರ್ಚುವಲ್ ಆಗಿ ಚಾಲನೆ ನೀಡಿ ಮಾತನಾಡಿದ ಅವರು, ‘ವರ್ಷಗಳ ಕಠಿಣ ಪರಿಶ್ರಮದ ಮೂಲಕ, ರೈಲ್ವೆಯು ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ದೊಡ್ಡ ದಾಪುಗಾಲುಗಳನ್ನು ಮಾಡಿದೆ ಮತ್ತು ಹೊಸ ಭರವಸೆಗಳು ಹುಟ್ಟು ಹಾಕಿದೆ ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದೆ. ಲ್ಲರಿಗೂ ಆರಾಮದಾಯಕ ಪ್ರಯಾಣದ ಖಾತರಿಯಾಗುವವರೆಗೆ ನಾವು ವಿರಮಿಸಲ್ಲ’ ಎಂದು ಹೇಳಿದರು.
ಅಲ್ಲದೆ, ರೈಲ್ವೆ ವಲಯದ ಹಳೆಯ ಇಮೇಜ್ ಬದಲಾವಣೆಗಾಗಿ ಈ ಬಜೆಟ್‌ನಲ್ಲಿ 2.5 ಲಕ್ಷ ಕೋಟಿ ರು. ನೀಡಲಾಗಿದೆ ಎಂದರು.
ಇತ್ತೀಚೆಗೆ ಹಲವು ಸರಣಿ ರೈಲು ಅಪಘಾತಗಳು ಸಂಭವಿಸಿ ರೈಲ್ವೆ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಮೂಡಿದ್ದವು. ಅದರ ಬೆನ್ನಲ್ಲೇ ಮೋದಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕಕ್ಕೆ 7000 ಕೋಟಿ ರು.
ಇದೇ ವೇಳೆ, ‘2047ರ ವೇಳೆಗೆ ‘ವಿಕಸಿತ ಭಾರತ್’ ಗುರಿಯನ್ನು ಸಾಧಿಸಲು ದಕ್ಷಿಣದ ರಾಜ್ಯಗಳ ತ್ವರಿತ ಬೆಳವಣಿಗೆ ಪ್ರಮುಖವಾಗಿದೆ. ಅದಕ್ಕೆಂದೇ ತಮಿಳುನಾಡಿನ ರೈಲ್ವೆ ಅಭಿವೃದ್ಧಿಗೆ ಈ ಬಜೆಟ್ನಲ್ಲಿ 6000 ಕೋಟಿ ರು. ಮತ್ತು ಕರ್ನಾಟಕಕ್ಕೆ 7000 ಕೋಟಿ ರು. ಹಂಚಿಕೆ ಮಾಡಿ ದಕ್ಷಿಣ ರಾಜ್ಯಗಳಲ್ಲಿ ರೈಲು ಸಾರಿಗೆಯನ್ನು ಬಲಪಡಿಸಲು ಆದ್ಯತೆ ನೀಡಲಾಗಿದೆ. ಕರ್ನಾಟಕ್ಕೆ ನೀಡಿದ ಅನುದಾನ, 2014ರ ಯುಪಿಎ ಸರ್ಕಾರದ ಅನುದಾನಕ್ಕೆ ಹೋಲಿಸಿದರೆ 9 ಪಟ್ಟು ಅಧಿಕ’ ಎಂದು ಹೇಳಿದರು.
ಮೇರಠ್ ಸಿಟಿ-ಲಖನೌ ವಂದೇ ಭಾರತ್ ಎಕ್ಸ್‌ಪ್ರೆಸ್ ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ 1 ತಾಸು ತಗ್ಗಿಸಲಿದೆ ಅದೇ ರೀತಿ, ಚೆನ್ನೈ ಎಗ್ಮೋರ್-ನಾಗರ್‌ಕೋಯಿಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಮದುರೈ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಕ್ರಮವಾಗಿ 2 ಗಂಟೆ ಮತ್ತು 1.5 ಗಂಟೆ ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತವೆ.