ಆರು ತಿಂಗಳ ಸೆರೆವಾಸ ಮುಗಿಸಿ ಬಿಡುಗಡೆಯಾದ ಎರಡೇ ದಿನಕ್ಕೆ ದಿಲ್ಲಿ ಸಿಎಂ ಕೇಜ್ರಿವಾಲ್‌ ದಿಢೀರ್‌ ರಾಜೀನಾಮೆ!

| Published : Sep 16 2024, 01:49 AM IST / Updated: Sep 16 2024, 04:54 AM IST

ಆರು ತಿಂಗಳ ಸೆರೆವಾಸ ಮುಗಿಸಿ ಬಿಡುಗಡೆಯಾದ ಎರಡೇ ದಿನಕ್ಕೆ ದಿಲ್ಲಿ ಸಿಎಂ ಕೇಜ್ರಿವಾಲ್‌ ದಿಢೀರ್‌ ರಾಜೀನಾಮೆ!
Share this Article
  • FB
  • TW
  • Linkdin
  • Email

ಸಾರಾಂಶ

ಅಬಕಾರಿ ಹಗರಣದ ಆರೋಪ ಹೊತ್ತು ಆರು ತಿಂಗಳ ಸೆರೆಮನೆವಾಸ ಮುಗಿಸಿ ಜಾಮೀನಿನ ಮೇಲೆ ಬಿಡುಗಡೆಯಾದ ಎರಡೇ ದಿನಕ್ಕೆ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್‌ ಹಠಾತ್‌ ರಾಜೀನಾಮೆ ಘೋಷಿಸಿದ್ದಾರೆ.

 ನವದೆಹಲಿ :  ಅಬಕಾರಿ ಹಗರಣದ ಆರೋಪ ಹೊತ್ತು ಆರು ತಿಂಗಳ ಸೆರೆಮನೆವಾಸ ಮುಗಿಸಿ ಜಾಮೀನಿನ ಮೇಲೆ ಬಿಡುಗಡೆಯಾದ ಎರಡೇ ದಿನಕ್ಕೆ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್‌ ಹಠಾತ್‌ ರಾಜೀನಾಮೆ ಘೋಷಿಸಿದ್ದಾರೆ.

‘ಸಿಎಂ ಸ್ಥಾನಕ್ಕೆ ಇನ್ನೆರಡು ದಿನದಲ್ಲಿ ರಾಜೀನಾಮೆ ಸಲ್ಲಿಸುತ್ತೇನೆ. ನಾನು ಪ್ರಾಮಾಣಿಕ ಎಂದು ದೆಹಲಿ ಜನರು ಪ್ರಮಾಣಪತ್ರ ನೀಡುವವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವುದಿಲ್ಲ. ದೆಹಲಿ ವಿಧಾನಸಭೆಗೆ ಫೆಬ್ರವರಿಯಲ್ಲಿ ಚುನಾವಣೆ ನಿಗದಿಯಾಗಿದೆ. ಜಾರ್ಖಂಡ್‌ ಹಾಗೂ ಮಹಾರಾಷ್ಟ್ರದಲ್ಲಿ ನವೆಂಬರ್‌ಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆಗಲೇ ದೆಹಲಿಗೂ ಅವಧಿಪೂರ್ವ ಚುನಾವಣೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ಜೈಲಿನಿಂದ ಹೊರ ಬಂದ ಬಳಿಕ ಅಗ್ನಿಪರೀಕ್ಷೆಗೆ ಒಳಗಾಗಲು ಬಯಸಿದ್ದೇನೆ. ನಾವು ಪ್ರಾಮಾಣಿಕರು ಎಂದು ಜನರು ಹೇಳಿದ ಬಳಿಕವಷ್ಟೇ ನಾನು ಸಿಎಂ ಹಾಗೂ ಮನೀಶ್‌ ಸಿಸೋಡಿಯಾ ಅವರು ಡಿಸಿಎಂ ಆಗುತ್ತೇವೆ’ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ:

ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಪಕ್ಷದ ಸಭೆಯಲ್ಲಿ ಭಾನುವಾರ ಮಾತನಾಡಿದ ಅವರು ರಾಜೀನಾಮೆ ನಿರ್ಧಾರ ಘೋಷಣೆ ಮಾಡುವ ಜತೆಗೇ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಬಿಜೆಪಿಗೆ ಉತ್ತಮ ಶಾಲೆಗಳು ಹಾಗೂ ಉಚಿತ ವಿದ್ಯುತ್ ಅನ್ನು ಕೊಡಲು ಆಗಲಿಲ್ಲ. ಏಕೆಂದರೆ, ಆ ಪಕ್ಷದ ನಾಯಕರು ಭ್ರಷ್ಟರು. ನಾವು ಪ್ರಾಮಾಣಿಕರು. ಬಿಜೆಪಿಯೇತರ ಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತಾರೆ. ನನ್ನ ಮೇಲೆ ಅಬಕಾರಿ ಅಕ್ರಮದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದರೂ ರಾಜೀನಾಮೆ ನೀಡಲಿಲ್ಲ. ನಾನು ಪ್ರಜಾಪ್ರಭುತ್ವವನ್ನು ಗೌರವಿಸುತ್ತೇನೆ’ ಎಂದರು.--

ಮುಂದೇನು?

- ಶೀಘ್ರದಲ್ಲೇ ಕೇಜ್ರಿವಾಲ್‌ ಅವರು ಆಪ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಿದ್ದಾರೆ

- ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಆ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತದೆ

- ಅದಕ್ಕೆ ಮುನ್ನ ಅಥವಾ ನಂತರ ಕೇಜ್ರಿವಾಲ್‌ ಅವರು ರಾಜೀನಾಮೆ ಸಲ್ಲಿಸಬಹುದು

- ಅವಧಿಪೂರ್ವ ಚುನಾವಣೆಗೆ ಒತ್ತಾಯಿಸಿದ್ದರೂ ವಿಧಾನಸಭೆ ವಿಸರ್ಜನೆಯಾಗಿಲ್ಲ

- ಹೀಗಾಗಿ ಕೇಜ್ರಿ ಸಲಹೆ ಬಗ್ಗೆ ಚುನಾವಣೆ ಆಯೋಗ ಏನು ಮಾಡುತ್ತೆ ನೋಡಬೇಕು