ಸಾರಾಂಶ
ಅಯೋಧ್ಯೆ: ರಾಮನವಮಿಯಂದು ವಿಶಿಷ್ಟ ತಂತ್ರಜ್ಞಾನದ ಮೂಲಕ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಹಣೆಗೆ ಸೂರ್ಯರಶ್ಮಿ ಬೀಳುವಂತೆ ಮಾಡುವಲ್ಲಿ ರೂರ್ಕಿ ಐಐಟಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಆದರೆ ವಿಶೇಷ ದಿನಗಳಂದು ಸೂರ್ಯರಶ್ಮಿ ಬೀಳುವಂತೆ ವಾಸ್ತುಶಿಲ್ಪವನ್ನು ಭಾರತೀಯ ದೇವಾಲಯಗಳಲ್ಲಿ ಬಹಳ ಹಿಂದೆಯೇ ನಿರ್ಮಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದವು ಈ ಕೆಳಗಿನಂತಿವೆ:
ಅನಂತಪದ್ಮನಾಭ ಸ್ವಾಮಿ ದೇಗುಲ
ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಅನಂತಪದ್ಮನಾಭ ಸ್ವಾಮಿ ದೇಗುಲದಲ್ಲಿ ಗೋಪುರದ ಮೂಲಕ ಉತ್ತರದಿಂದ ದಕ್ಷಿಣಾಯಣ ಪುಣ್ಯಕಾಲಕ್ಕೆ ತಿರುಗುವ ಸಂಕ್ರಮಣದ ದಿನ (ಸೆ.23) ದಂದು ಸೂರ್ಯರಶ್ಮಿ ಬೀಳುತ್ತದೆ.
ಅರಸವಳ್ಳಿ ದೇಗುಲ
ಆಂಧ್ರಪ್ರದೇಶದ ಶ್ರೀಕಾಕುಳಂ ಬಳಿಯಿರುವ ಅರಸವಳ್ಳಿ ದೇಗುಲದಲ್ಲಿ ಅತಿ ಉದ್ದದ ದಿನ(ಜೂ.21) ಮತ್ತು ಅತಿ ಗಿಡ್ಡವಾದ ದಿನದಂದು (ಡಿ.23) ದೇವರ ಮೂರ್ತಿಗೆ ಸೂರ್ಯರಶ್ಮಿ ಬೀಳುವಂತೆ ನಿರ್ಮಾಣ ಮಾಡಲಾಗಿದೆ.
ಮೋಧೇರಾ ಸೂರ್ಯ ದೇವಾಲಯ
ಮೋಧೇರಾದ ಸೂರ್ಯ ದೇವಾಲಯದಲ್ಲಿ ಮಾ.21 ಮತ್ತು ಸೆ.23ರ ಪರ್ವ ಕಾಲದಲ್ಲಿ ಸೂರ್ಯನ ಮೊದಲ ಕಿರಣಗಳು ದೇಗುಲದಲ್ಲಿರುವ ಮೂರ್ತಿಗೆ ಬೀಳುವಂತೆ ವಾಸ್ತುಶಿಲ್ಪ ಬಳಸಿ ನಿರ್ಮಾಣ ಮಾಡಲಾಗಿದೆ.
ಗವಿಗಂಗಾಧರೇಶ್ವರ ದೇಗುಲ
ಬೆಂಗಳೂರಿನಲ್ಲಿರುವ ಪುರಾತನ ಗವಿಗಂಗಾಧರೇಶ್ವರ ದೇಗುಲದಲ್ಲಿ ಪ್ರತಿಬಾರಿ ಮಕರ ಸಂಕ್ರಾಂತಿಯ ಪರ್ವ ಕಾಲದಲ್ಲಿ ದೇವರ ವಿಗ್ರಹದ ಮೇಲೆ ಸೂರ್ಯರಶ್ಮಿ ಬೀಳುವಂತೆ ದೇಗುಲವನ್ನು ವಿನ್ಯಾಸ ಮಾಡಲಾಗಿದೆ.
ಲಕ್ಷ್ಮೇಶ್ವರ ಸೋಮೇಶ್ವರ ದೇಗುಲ
ಕರ್ನಾಟಕದ ಗದಗ ಜಿಲ್ಲೆ ಲಕ್ಷ್ಮೇಶ್ವರದ ಪುರಾತನ ಸೋಮೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ವೈಶಾಖ ಕೃಷ್ಣಪಕ್ಷದಲ್ಲಿ (ಜ.25ರಿಂದ 30ರ ನಡುವೆ) ಸೂರ್ಯರಶ್ಮಿಯು ಪೂರ್ವದ್ವಾರದಿಂದ ಸೋಮೇಶ್ವರನ ಪ್ರತಿಮೆ ಮೇಲೆ ಬೀಳುತ್ತದೆ.
ವೇದನಾರಾಯಣಸ್ವಾಮಿ ದೇಗುಲ
ಆಂಧ್ರಪ್ರದೇಶದ ತಿರುಪತಿ ಬಳಿಯಿರುವ ಈ ದೇಗುಲದಲ್ಲಿ ಮತ್ಸ್ಯಾವತಾರದಲ್ಲಿರುವ ವಿಷ್ಣುವಿನ ವಿಗ್ರಹಕ್ಕೆ ಪ್ರತಿಬಾರಿ ಫಾಲ್ಗುಣ ಮಾಸದ 12, 13 ಮತ್ತು 14ನೇ ದಿನದಂದು ಸೂರ್ಯರಶ್ಮಿ ಬೀಳುವಂತೆ ವಾಸ್ತುಶಿಲ್ಪ ಬಳಸಲಾಗಿದೆ.
ಕೊನಾರ್ಕ್ ದೇಗುಲ
ಒಡಿಶಾದಲ್ಲಿರುವ ಕೊನಾರ್ಕ್ ಸೂರ್ಯ ದೇಗುಲದಲ್ಲಿ ಪ್ರತಿದಿನ ಸೂರ್ಯನ ಮೊದಲ ಕಿರಣ ದೇವಾಲಯದ ಮುಖ್ಯ ಪ್ರವೇಶದ್ವಾರದ ಮೇಲೆ ಬೀಳುವಂತೆ ಕಟ್ಟಲಾಗಿದೆ.