ಸಮುದ್ರದಲ್ಲಿ ಸುನಾಮಿ ಸೃಷ್ಟಿಸಬಲ್ಲ ಅಣುಚಾಲಿತ ಡ್ರೋನ್‌ ಪರೀಕ್ಷೆ: ರಷ್ಯಾ

| N/A | Published : Oct 31 2025, 02:15 AM IST

Russia Drone
ಸಮುದ್ರದಲ್ಲಿ ಸುನಾಮಿ ಸೃಷ್ಟಿಸಬಲ್ಲ ಅಣುಚಾಲಿತ ಡ್ರೋನ್‌ ಪರೀಕ್ಷೆ: ರಷ್ಯಾ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗಷ್ಟೇ ವಿಶ್ವದ ಯಾವುದೇ ಮೂಲೆಯನ್ನು ತಲುಪಬಲ್ಲ ವಿಶ್ವದ ಮೊದಲ ಅಣುಚಾಲಿತ ಕ್ಷಿಪಣಿಯ ಪರೀಕ್ಷೆ ನಡೆಸಿದ್ದ ರಷ್ಯಾ ಇದೀಗ ಸಮುದ್ರದೊಳಗೆ ಸಾಗಿ ಸುನಾಮಿಯನ್ನೇ ಸೃಷ್ಟಿಸಬಲ್ಲ ಪರಮಾಣು ಚಾಲಿತ ‘ಪೊಸೈಡನ್‌’ ಡ್ರೋನ್‌ಅನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.  

ಮಾಸ್ಕೋ: ಇತ್ತೀಚೆಗಷ್ಟೇ ವಿಶ್ವದ ಯಾವುದೇ ಮೂಲೆಯನ್ನು ತಲುಪಬಲ್ಲ ವಿಶ್ವದ ಮೊದಲ ಅಣುಚಾಲಿತ ಕ್ಷಿಪಣಿಯ ಪರೀಕ್ಷೆ ನಡೆಸಿದ್ದ ರಷ್ಯಾ ಇದೀಗ ಸಮುದ್ರದೊಳಗೆ ಸಾಗಿ ಸುನಾಮಿಯನ್ನೇ ಸೃಷ್ಟಿಸಬಲ್ಲ ಪರಮಾಣು ಚಾಲಿತ ‘ಪೊಸೈಡನ್‌’ ಡ್ರೋನ್‌ಅನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಈ ವಿಚಾರವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಖಚಿತಪಡಿಸಿದ್ದಾರೆ.

ವಾರದ ಹಿಂದೆಯಷ್ಟೇ ಪುಟಿನ್‌ ಅವರು ಪರಮಾಣು ಚಾಲಿತ ಬ್ಯೂರೆವೆಸ್ಟ್ನಿಕ್ ಕ್ಷಿಪಣಿಯ ಅಂತಿಮ ಪರೀಕ್ಷೆಯ ಕುರಿತು ಘೋಷಿಸಿದ್ದರು. ಈ ಬಗ್ಗೆ ಬಹಿರಂಗವಾಗಿಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಶಸ್ತ್ರಾಸ್ತ್ರ ಪರೀಕ್ಷೆ ಬದಲು ಉಕ್ರೇನ್‌ ಯುದ್ಧ ಕೊನೆಗಾಣಿಸಲು ರಷ್ಯಾ ಆದ್ಯತೆ ನೀಡಬೇಕು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಅಣುಚಾಲಿತ ಅಸ್ತ್ರದ ಪರೀಕ್ಷೆ ನಡೆಸಲಾಗಿದೆ.

ಏನಿದರ ವಿಶೇಷತೆ?:

ಈ ಡ್ರೋನ್‌ ಸಾಂಪ್ರದಾಯಿಕ ಸಬ್‌ಮರೀನ್‌ಗಿಂತಲೂ ವೇಗವಾಗಿ ಚಲಿಸಿ ವಿಶ್ವದ ಯಾವುದೇ ಮೂಲೆಯನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದ್ದು, ಸಮುದ್ರದಲ್ಲಿ ಸುನಾಮಿಯನ್ನೇ ಸೃಷ್ಟಿಸುತ್ತದೆ ಎಂದು ಪುಟಿನ್‌ ಹೇಳಿದ್ದಾರೆ. ಈ ಡ್ರೋನ್‌ಗೆ ಸರಿಸಾಟಿ ಯಾವುದೂ ಇಲ್ಲ. ಸದ್ಯೋ ಭವಿಷ್ಯದಲ್ಲಿ ಇಂಥ ಡ್ರೋನ್‌ ಯಾರೂ ಅಭಿವೃದ್ಧಿಪಡಿಸಲು ಸಾಧ್ಯವೂ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಇದೊಂದು ಅತ್ಯಾಧುನಿಕ ಡ್ರೋನ್‌ ಆಗಿದ್ದು, ಮುಂದಿನ ತಲೆಮಾರಿನ ಯುದ್ಧಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.

1 ಕಿ.ಮೀ.ಗಿಂತಲೂ ಹೆಚ್ಚಿನ ಆಳದಲ್ಲಿ ಕಾರ್ಯ

ಈ ಡ್ರೋನ್‌ ನೀರಿನಡಿ 1 ಕಿ.ಮೀ.ಗಿಂತಲೂ ಹೆಚ್ಚಿನ ಆಳದಲ್ಲಿ ಕಾರ್ಯನಿರ್ವಹಿಸಬಲ್ಲುದಾಗಿದೆ ಹಾಗೂ ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಸದ್ಯದ ಪರಿಸ್ಥಿತಿಯಲ್ಲಿ ಈ ಡ್ರೋನ್‌ಅನ್ನು ಪತ್ತೆಹಚ್ಚುವ ಸಾಮರ್ಥ್ಯ ಯಾವುದೇ ದೇಶಕ್ಕಿಲ್ಲ. ಇದು ಸುಮಾರು 2 ಮೆಗಾ ಟನ್‌ನಷ್ಟು ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲದು.

2018ರಲ್ಲಿ ಪುಟಿನ್‌ ಅವರು ಪಾಶ್ಚಿಮಾತ್ಯ ದೇಶಗಳ ವಿರುದ್ಧ ಮಾಡಿದ್ದ ಭಾಷಣದಲ್ಲಿ ಪೊಸೈಡನ್‌ ಮತ್ತು ಬ್ಯೂರೆವೆಸ್ಟ್ನಿಕ್ ಬಗ್ಗೆ ಪ್ರಸ್ತಾಪಿಸಿದ್ದರು.

Read more Articles on