- ಮಸ್ಕ್‌ ಲಕ್ಷಕೋಟಿ ಪತಿ ಆದ ಬೆನ್ನಲ್ಲೇ ಅದೃಷ್ಟ

- ಹೊಸ ಐಪಿಒನಿಂದ 4,400 ಜನ ಕೋಟಿಪತಿ

---

- ವಿಶ್ವದ ಅತಿದೊಡ್ಡ ಐಪಿಒ ಎನ್ನಿಸಿಕೊಂಡ ಸ್ಪೇಸ್‌ ಎಕ್ಸ್ ಐಪಿಒನಿಂದ ಬದಲಾದ ಭವಿಷ್ಯ

- ಮಸ್ಕ್‌ರ ಸ್ಪೇಸ್‌ ಎಕ್ಸ್‌ ಕ್ಯಾಂಟೀನ್‌ ಕಾರ್ಮಿಕರು, ಪ್ಲಂಬರ್ಸ್‌ ರಾತ್ರೋರಾತ್ರಿ ಮಿಲಿಯನೇರ್‌


- ಕಂಪನಿಯ ಷೇರು ಹೊಂದಿದ್ದ ಕೆಲಸಗಾರರಿಗೆ ಬಂಪರ್‌ ಲಾಭ, ಷೇರು ಮೌಲ್ಯ ಭಾರಿ ಹೆಚ್ಚಳ

- ಒಂದೇ ದಿನ 4400 ದಶ ಕೋಟ್ಯಧೀಶರ ಸೃಷ್ಟಿ. ಇದರಲ್ಲಿ 400 ಜನ ಶತ ಕೋಟ್ಯಧೀಶರುವಾಷಿಂಗ್ಟನ್‌: ಸ್ಪೇಸ್‌ ಎಕ್ಸ್‌ ಕಂಪನಿ ಅಮೆರಿಕ ಷೇರುಪೇಟೆ ಪ್ರವೇಶ ಬಳಿಕ ಕಂಪನಿಯ ಮಾಲೀಕ ಎಲಾನ್‌ ಮಸ್ಕ್‌ ಭೂಮಿಯ ಮೇಲಿನ ಮೊದಲ ಟ್ರಿಲಿಯನೇರ್‌ ಆದ ಜೊತೆಜೊತೆಗೇ ಅವರ ಕಂಪನಿಯ ಕ್ಯಾಂಟೀನ್‌ ಸಿಬ್ಬಂದಿ, ಪ್ಲಂಬರ್‌ ಮತ್ತು ಇತರೆ ಸಿಬ್ಬಂದಿ ಕೂಡಾ ರಾತ್ರೋರಾತ್ರಿ ಮಿಲಿಯನೇರ್‌ (1 ದಶಲಕ್ಷ ಡಾಲರ್‌- 9.5 ಕೋಟಿ ರು.) ಆಗಿ ಹೊರಹೊಮ್ಮಿದ್ದಾರೆ.

ವಿಶ್ವದ ಈ ಅತಿದೊಡ್ಡ ಐಪಿಒ ಷೇರುಮಾರುಕಟ್ಟೆಯಲ್ಲಿ ಲಿಸ್ಟ್‌ ಆಗುತ್ತಿದ್ದಂತೆ ಒಂದೇ ದಿನ 4,400 ಮಂದಿ ಕೋಟ್ಯಧೀಶರರಾಗಿದ್ದಾರೆ. ಇದರಲ್ಲಿ 400 ಮಂದಿ ತಲಾ 950 ಕೋಟಿ ರು. ಸಂಪತ್ತಿನ ಒಡೆಯರಾಗಿದ್ದಾರೆ.

ವಿಶೇಷವೆಂದರೆ ಸ್ಪೇಸ್‌ ಎಕ್ಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೆಲ್ಡರ್‌, ಟೆಕ್ನಿಷಿಯನ್‌ ಮತ್ತು ಕ್ಯಾಂಟೀನ್‌ ಸಿಬ್ಬಂದಿಯನ್ನೂ ಈ ಐಪಿಒ ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಿದೆ. ಯಾಕೆಂದರೆ ಕಳೆದೆರಡು ದಶಕಗಳಲ್ಲಿ ಸಿಬ್ಬಂದಿಗೆ ಹೆಚ್ಚಿನ ವೇತನದ ಬದಲು ಕಂಪನಿಯ ಷೇರುಗಳನ್ನು ಹಂಚಲಾಗಿತ್ತು. ಇದೀಗ ಅದೇ ಷೇರು ಅವರ ಭವಿಷ್ಯವನ್ನೇ ಬದಲಾಯಿಸಿದೆ.

ಮೆಕ್ಸಿಕೋದಿಂದ ವಲಸೆ ಬಂದಿದ್ದ ಜುವಾನ್‌ ಹರ್ನಂದೇಜ್‌ ಅವರು ಗಂಟೆಗೆ 28 ಡಾಲರ್‌ ಲೆಕ್ಕದ ಗುತ್ತಿಗೆ ವೆಲ್ಡಿಂಗ್‌ ಕೆಲಸಕ್ಕೆ 2015ರಲ್ಲಿ ಸೇರ್ಪಡೆಯಾಗಿದ್ದರು. ಆಗ ಅವರಿಗೆ ಸ್ಪೇಸ್‌ ಎಕ್ಸ್‌ ಅಂದರೆ ಏನೆಂದೇ ಗೊತ್ತಿರಲಿಲ್ಲ. ಕಂಪನಿ ಆತನಿಗೆ 10 ಸಾವಿರ ಡಾಲರ್‌ನ ಷೇರು ನೀಡಿತ್ತು. ಜತೆಗೆ ವೇತನ ಕಡಿತಕ್ಕೆ ಬದಲಾಗಿ ಹೆಚ್ಚಿನ ಷೇರು ಖರೀದಿಸಲೂ ಅವಕಾಶ ಮಾಡಿಕೊಟ್ಟಿತ್ತು. ಇದೀಗ ಆಗ ಷೇರಿನ ಮೌಲ್ಯ 8.36 ಕೋಟಿ ರು. ಆಗಿದೆ ಎಂದು ಹೇಳಿಕೊಂಡಿದ್ದಾನೆ.

ಇನ್ನು ಟ್ರೆವೋರ್‌ ಹಿಸೆ ಎಂಬಾತ 2011ರಲ್ಲಿ ಸ್ಪೇಸ್‌ ಎಕ್ಸ್‌ಗೆ ಲಾಂಚ್‌ ಎಂಜಿನಿಯರ್‌ ಆಗಿ ಇಂಟರ್ನ್‌ಶಿಪ್‌ಗೆ ಸೇರಿಕೊಂಡಿದ್ದು, ಆ ಬಳಿಕ 12 ವರ್ಷಗಳಿಂದ ಅಲ್ಲೇ ಸೇವೆಯಲ್ಲಿದ್ದಾನೆ. ಆತ ಈ ಅವಧಿಯಲ್ಲಿ 1 ಲಕ್ಷ ಷೇರುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾನೆ. ಇದೀಗ ಅದರ ಮೌಲ್ಯ 160 ಕೋಟಿ ರು. ದಾಟಿದೆ.