ಜಗತ್ತಿನ ಮೊದಲ ಸಲಿಂಗಿ ಇಮಾಂ ಮುಹ್ಸೀನ್‌ ಹೆನ್ರಿಕ್ಸ್‌ ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿಗೆ ಬಲಿ

| N/A | Published : Feb 17 2025, 12:30 AM IST / Updated: Feb 17 2025, 05:53 AM IST

ಜಗತ್ತಿನ ಮೊದಲ ಸಲಿಂಗಿ ಇಮಾಂ ಮುಹ್ಸೀನ್‌ ಹೆನ್ರಿಕ್ಸ್‌ ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿಗೆ ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿನ ಮೊದಲ ಸಲಿಂಗಿ ಇಮಾಂ ಮುಹ್ಸಿನ್‌ ಹೆನ್ರಿಕ್ಸ್‌ ಅವರು ಶನಿವಾರ ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿಗೆ ಹತರಾಗಿದ್ದಾರೆ.

ಕೇಪ್‌ ಟೌನ್‌: ಜಗತ್ತಿನ ಮೊದಲ ಸಲಿಂಗಿ ಇಮಾಂ ಮುಹ್ಸಿನ್‌ ಹೆನ್ರಿಕ್ಸ್‌ ಅವರು ಶನಿವಾರ ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿಗೆ ಹತರಾಗಿದ್ದಾರೆ. ಮುಹ್ಸೀನ್‌ ಮತ್ತೋರ್ವರು ಕಾರಿನಲ್ಲಿ ಸಂಚರಿಸುತ್ತಿದ್ದರು. 

ಈ ವೇಳೆ ಕಾರನ್ನು ಅಡ್ಡಹಾಕಿದ ಬಂಧೂಕುಧಾರಿಗಳು ಒಂದೇ ಸಮನೇ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಮುಹ್ಸಿನ್‌ ಅವರು ಮುಸ್ಲಿಂ ಧರ್ಮದ ಮೊದಲ ಸಲಿಂಗಿಯಾಗಿದ್ದು, ಎಲ್‌ಜಿಬಿಟಿಕ್ಯೂ ಪಂಗಡಕ್ಕಾಗಿಯೇ ಮಸೀದಿಯನ್ನು ನಿರ್ಮಿಸಿ, ಅವರಿಗಾಗಿ ಕಾನೂನು ಹೋರಾಟ ನಡೆಸುತ್ತಿದ್ದರು. ಕೆಲ ದಿನಗಳಿಂದ ಇವರಿಗೆ ಬೆದರಿಕೆ ಕರೆಗಳು ಬರುತ್ತಿದ್ದರೂ ಭದ್ರತೆ ಪಡೆಯದೇ ಹಾಗೇ ಇದ್ದರು. ಪರಿಣಾಮ ಶನಿವಾರ ಕೊಲೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಕುಂಭಮೇಳ ಅರ್ಥಹೀನ, ಕುಂಭ ಬರೀ ಓಳು: ಲಾಲು ವಿವಾದಿತ ಹೇಳಿಕೆ

ಪಟನಾ: ಕುಂಭಮೇಳ ಭಕ್ತರು ದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಘಟನೆಯನ್ನು ಖಂಡಿಸುವ ಭರದಲ್ಲಿ ಆರ್‌ಜೆಡಿ ನಾಯಕ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಕುಂಭ್‌ ಕಾ ಕಹಾಂ ಕೋಯಿ ಮತ್ಲಬ್‌ ಹೈ? ಫಾಲ್ತು ಹೈ ಕುಂಭ್‌’ (ಕುಂಭಕ್ಕೆ ಅರ್ಥ ಇದೆಯೆ? ಕುಂಭ ಎಂಬುದು ಓಳು’ ಎಂದಿದ್ದಾರೆ.  

ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಮಾಜಿ ರೈಲ್ವೆ ಸಚಿವರೂ ಆದ ಅವರು, ‘ಈ ಘಟನೆ ತುಂಬಾ ದುರದೃಷ್ಟಕರ. ಇದು ರೈಲ್ವೆಯ ದುಷ್ಕೃತ್ಯವಾಗಿದ್ದು, ಹಲವಾರು ಜೀವಹಾನಿಗೆ ಕಾರಣವಾಗಿದೆ. ರೈಲ್ವೆ ಸಚಿವರು ಇದರ ಹೊಣೆ ಹೊರಬೇಕು. ಕುಂಭಕ್ಕೆ ಅರ್ಥ ಇದೆಯೆ? ಕುಂಭ ಎಂಬುದು ಓಳು’ ಎಂದರು.

ಸೇನೆಗೆ ಅವಮಾನ ಕೇಸು: ನಿರ್ದೇಶಕಿ ಏಕ್ತಾ ಕಪೂರ್‌ ತನಿಖೆಗೆ ಕೋರ್ಟ್‌ ಆದೇಶ

ಮುಂಬೈ: ಭಾರತೀಯ ಸೇನೆಗೆ ಅವಮಾನ ಮಾಡಿದ ಆರೋಪದ ಪ್ರಕರಣದಲ್ಲಿ ಖ್ಯಾತ ಕಿರುತೆರೆ ನಿರ್ದೇಶಕಿ ಏಕ್ತಾ ಕಪೂರ್‌ ವಿರುದ್ಧ ತನಿಖೆ ನಡೆಸುವಂತೆ ಸ್ಥಳೀಯ ಕೋರ್ಟ್‌ ಆದೇಶಿಸಿದೆ. 2020ರ ಆಲ್ಟ್‌ ಬಾಲಾಜಿ ಎಂಬ ಒಟಿಟಿಯಲ್ಲಿನ ವೆಬ್‌ಸೀರೀಸ್‌ನಲ್ಲಿ ಯೋಧರು ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ರೀತಿ ಚಿತ್ರಿಸಲಾಗಿತ್ತು. ಇದರ ವಿರುದ್ಧ ಯುಟ್ಯೂಬರ್‌ ವಿಕಾಸ್‌ ಪಾಠಕ್‌ ದೂರು ದಾಖಲಿಸಿದ್ದರು. ಈ ಅರ್ಜಿ ಪರಿಗಣಿಸಿದ ಮುಂಬೈ ಕೋರ್ಟ್‌ ವಿಚಾರಣೆ ನಡೆಸುವಂತೆ ಮುಂಬೈ ಪೊಲೀಸರಿಗೆ ಸೂಚಿಸಿದೆ. ಇದೇ ಪ್ರಕರಣದಲ್ಲಿ ದೂರುದಾರರು ಏಕ್ತಾ ಅವರ ಪೋಷಕರನ್ನೂ ಆರೋಪಿಗಳಾಗಿ ಮಾಡಿದ್ದಾರೆ.

ಅಂತರ್‌ ಧರ್ಮೀಯ ಮದ್ವೆ ತಪ್ಪಲ್ಲ, ಆದರೆ ವಂಚನೆ ನಿಲ್ಲಬೇಕು: ಫಡ್ನವೀಸ್‌

ನಾಗ್ಪುರ: ಅಂತರ್‌ ಧರ್ಮಿಯ ವಿವಾಹಗಳಲ್ಲಿ ಯಾವುದೇ ತಪ್ಪಿಲ್ಲ. ಆದರೆ ವಂಚನೆ, ನಕಲಿ ಗುರುತಿನ ಮೂಲಕ ಧರ್ಮದ ಹೆಸರಲ್ಲಿ ನಡೆಯುವ ವೈವಾಹಿಕ ಒಪ್ಪಂದಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ. 

ಬಲವಂತದ ಮತಾಂತರ, ಲವ್‌ ಜಿಹಾದ್‌ ಪ್ರಕರಣಗಳ ವಿರುದ್ಧ ಹೊಸ ಕಾನೂನಿನ ಶಾಸನಬದ್ಧ ಅಂಶಗಳ ಅಧ್ಯಯನಕ್ಕೆ ರಾಜ್ಯ ಸರ್ಕಾರ ಸಮಿತಿ ರಚಿಸಿರುವ ಕುರಿತ ಪ್ರಶ್ನೆಗೆ ಫಡ್ನವೀಸ್‌ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಲವ್‌ ಜಿಹಾದ್‌ನಿಂದ ಮದುವೆಯಾಗಿ, ಮಕ್ಕಳಾದ ನಂತರ ತ್ಯಜಿಸುವ ಪ್ರಕರಣ ಹೆಚ್ಚುತ್ತಿವೆ. ಅಂತರ್‌ ಧರ್ಮೀಯ ವಿವಾಹಗಳು ತಪ್ಪಲ್ಲ. ಆದರೆ ವಂಚನೆಯ ಇಂತಹ ವಿವಾಹ ನಿದರ್ಶನಗಳು ಗಂಭೀರವಾಗಿದ್ದು, ನಿಗ್ರಹಿಸಬೇಕಿದೆ ಎಂದು ತಿಳಿಸಿದ್ದಾರೆ.

ಫೋನ್‌ ಟ್ಯಾಪಿಂಗ್‌ ಕೇಸ್‌:ತೆಲಂಗಾಣ ಮಾಜಿ ಸಚಿವ ಹರೀಶ್‌ ರಾವ್‌ ಆಪ್ತ ಸೆರೆ

ಹೈದರಾಬಾದ್‌: ತೆಲಂಗಾಣದ ಹಿಂದಿನ ಬಿಆರ್‌ಎಸ್‌ ಸರ್ಕಾರದ ಅವಧಿಯಲ್ಲಿ ನಡೆದಿತ್ತು ಎನ್ನಲಾದ ಫೋನ್‌ ಟ್ಯಾಪಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಿಆರ್‌ಎಸ್‌ ನಾಯಕ ಟಿ. ಹರೀಶ್‌ ರಾವ್‌ ಅವರ ಆಪ್ತ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಂಶಿ ಕೃಷ್ಣ ಮತ್ತು ಇಬ್ಬರು ನಕಲಿ ಸಿಮ್‌ ಪಡೆದು ವಾಟ್ಸಾಪ್ ಮತ್ತು ದೂರವಾಣಿ ಕರೆ ಮೂಲಕ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 2023ರ ವಿಧಾನಸಭೆ ಚುನಾವಣೆಗೆ ಸಿದ್ದಿಪೇಟ್‌ ಕ್ಷೇತ್ರದಿಂದ ಹರೀಶ್‌ ರಾವ್ ಎದುರು ಉದ್ಯಮಿ ಚಕ್ರಾಧರ ಗೌಡ್‌ ಅವರು ನಿಂತಿದ್ದರು. ತಮ್ಮನ್ನು ಮಣಿಸಲು ಹರೀಶ್‌ ರಾವ್‌ ಸರ್ಕಾರದ ಗುಪ್ತಚರ ಸಂಸ್ಥೆ ದುರ್ಬಳಕೆ ಮಾಡಿಕೊಂಡಿದ್ದರು ಎಂದು ಗೌಡ್‌ ದೂರು ನೀಡಿದ್ದರು.