2016ರಲ್ಲಿ ಕಾಣೆಯಾಗಿದ್ದ ವಾಯುಪಡೆಯ ಆ್ಯಂಟನೋವ್‌ ಯುದ್ಧ ವಿಮಾನ 8 ವರ್ಷದ ಬಳಿಕ ಚೆನ್ನೈ ಬಳಿ ಕಡಲಿನಲ್ಲಿ ಪತ್ತೆಯಾಗಿದೆ. ಇದು ಚೆನ್ನೈನಿಂದ 310 ಕಿಲೋಮೀಟರ್‌ ದೂರದಲ್ಲಿ 3.4 ಕಿಲೋಮೀಟರ್‌ ಆಳದಲ್ಲಿ ಪತ್ತೆಯಾಗಿದೆ.

ಚೆನ್ನೈ: 2016ರಲ್ಲಿ ಕಾಣೆಯಾಗಿದ್ದ ವಾಯುಪಡೆಯ ಆ್ಯಂಟೋನೋವ್‌ ಎಎನ್‌-32 ವಿಮಾನದ ಅವಶೇಷಗಳು 8 ವರ್ಷಗಳ ಬಳಿಕ ಚೆನ್ನೈ ಸಮುದ್ರತೀರದಿಂದ ಸುಮಾರು 310 ಕಿ.ಮೀ. ದೂರದ 3.4 ಕಿ.ಮೀ. ಸಮುದ್ರದಾಳದಲ್ಲಿ ದೊರೆತಿವೆ.

ಸಮುದ್ರದ ಆಳದಲ್ಲಿ ವಿಮಾನ ಮುರಿದ ಅವಶೇಷಗಳು ಇರುವ ಫೋಟೋವನ್ನು ಸರ್ಕಾರ ಬಿಡುಗಡೆ ಮಾಡಿದೆ. ಸಮುದ್ರದ ಅಧ್ಯಯನಕ್ಕಾಗಿ ಬಂಗಾಳಕೊಲ್ಲಿಯಲ್ಲಿ ಪ್ರಯಾಣಿಸುತ್ತಿರುವ ಹಡಗು ತೆಗೆದಿರುವ ಫೋಟೋದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ನಡೆದಿದ್ದೇನು?:

2016ರ ಜು.22ರಂದು ಆ್ಯಂಟೋನೋವ್‌ ಅನ್-32 ವಾಯುಪಡೆಯ ಸಾಗಣೆ ವಿಮಾನ ಚೆನ್ನೈನ ತಂಬರಮ್‌ ವಾಯುನೆಲೆಯಿಂದ 29 ಸಿಬ್ಬಂದಿಯೊಂದಿಗೆ ಅಂಡಮಾನ್‌ ನಿಕೋಬಾರ್‌ನ ಪೋರ್ಟ್‌ಬ್ಲೇರ್‌ನಲ್ಲಿರುವ ಉತ್ಕ್ರೋಶ್‌ ವಾಯುನೆಲೆಗೆ ಪ್ರಯಾಣ ಬೆಳೆಸಿತ್ತು. ಆದರೆ ಟೇಕಾಫ್‌ ಆದ ಕೆಲವು ನಿಮಿಷಗಳಲ್ಲೇ ಸಂಪರ್ಕ ಕಳೆದುಕೊಂಡ ವಿಮಾನ ರಾಡಾರ್‌ನಿಂದಲೂ ತಪ್ಪಿಸಿಕೊಂಡಿತ್ತು. ಇದಾದ ಬಳಿಕ ವಾಯುಪಡೆ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಸಹ ಯಾವುದೇ ಸುಳಿವು ಪತ್ತೆಯಾಗಲಿಲ್ಲ. ಹೀಗಾಗಿ 2016ರ ಸೆ.15ರಂದು ವಿಮಾನದಲ್ಲಿದ್ದ ಯೋಧರು ಹುತಾತ್ಮರಾಗಿದ್ದಾರೆ ಎಂದು ಅವರ ಕುಟುಂಬಗಳಿಗೆ ವಾಯುಪಡೆ ಮಾಹಿತಿ ನೀಡಿತ್ತು.