ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮದ ಆರೋಪ ಮಾಡಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪತ್ರಿಕೆಗಳಿಗೆ ಬರೆದ ಲೇಖನಗಳಿಗೆ ಸಂಬಂಧಿಸಿ ಸ್ವಯಂಪ್ರೇರಿತವಾಗಿ ಪ್ರತಿಕ್ರಿಯಿಸದಿರಲು ಚುನಾವಣಾ ಆಯೋಗ ನಿರ್ಧರಿಸಿದಂತಿದೆ.

ಚುನಾವಣಾ ಅಕ್ರಮ ಕುರಿತು ರಾಹುಲ್‌ ಮತ್ತೆ ಆರೋಪ

ವಿವಿಧ ಪತ್ರಿಕೆಗಳಿಗೆ ಲೇಖನ ಬರೆದ ಕಾಂಗ್ರೆಸ್‌ ನಾಯಕ

ಆಯೋಗದಿಂದ ಸ್ವಯಂಪ್ರೇರಿತ ಪ್ರತಿಕ್ರಿಯೆ ಇಲ್ಲ: ಮೂಲಗಳು

ನವದೆಹಲಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮದ ಆರೋಪ ಮಾಡಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪತ್ರಿಕೆಗಳಿಗೆ ಬರೆದ ಲೇಖನಗಳಿಗೆ ಸಂಬಂಧಿಸಿ ಸ್ವಯಂಪ್ರೇರಿತವಾಗಿ ಪ್ರತಿಕ್ರಿಯಿಸದಿರಲು ಚುನಾವಣಾ ಆಯೋಗ ನಿರ್ಧರಿಸಿದಂತಿದೆ. ರಾಹುಲ್‌ ಗಾಂಧಿ ಅವರು ನೇರವಾಗಿ ಪತ್ರ ಬರೆದು ಆರೋಪ ಮಾಡಿದರಷ್ಟೇ ಅದಕ್ಕೆ ಪ್ರತಿಕ್ರಿಯಿಸುವುದಾಗಿ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಜತೆಗೆ, ರಾಹುಲ್‌ ಗಾಂಧಿಗೆ ಯಾವುದೇ ಸಮಸ್ಯೆಗಳಿದ್ದರೆ ಕೋರ್ಟ್‌ ಮೇಲೆ ವಿಶ್ವಾಸ ಇರಿಸಬೇಕು ಎಂದೂ ಅಭಿಪ್ರಾಯಪಟ್ಟಿದೆ.

ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿ ಪ್ರತಿಪಕ್ಷಗಳು ಮಾಡಿರುವ ಆರೋಪಕ್ಕೆ ಸಂಬಂಧಿಸಿ ಮೇ15 ರಂದು ಚುನಾವಣಾ ಆಯೋಗವು ಮೇ 15ರಂದು ಎಲ್ಲ ರಾಷ್ಟ್ರೀಯಪಕ್ಷಗಳ ಜತೆಗೆ ಸಭೆ ನಡೆಸಿತ್ತು. ರಾಜಕೀಯ ಪಕ್ಷಗಳ ಆಕ್ಷೇಪ, ಆತಂಕಗಳಿಗೆ ಉತ್ತರ ನೀಡುವ ಕೆಲಸ ಮಾಡಿತ್ತು. ಕಾಂಗ್ರೆಸ್‌ ಹೊರತುಪಡಿಸಿ ಉಳಿದ ಎಲ್ಲ ಐದು ಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದವು.

ಇದರ ಬೆನ್ನಲ್ಲೇ ಇದೀಗ ಕಳೆದ ವರ್ಷ ನಡೆದಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂಬಂಧಿಸಿ ಮತ್ತೊಮ್ಮೆ ಚುನಾವಣಾ ಆಯೋಗದ ಸಮಗ್ರತೆಯನ್ನು ಪ್ರಶ್ನೆ ಮಾಡಿರುವ ರಾಹುಲ್ ಗಾಂಧಿ ಅವರು, ವಿಶ್ವಕ್ಕೆ ಸತ್ಯ ಹೇಳುವುದರಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ರಕ್ಷಣೆಯಾಗುತ್ತದೆಯೇ ಹೊರತು ನೆಪ ಹೇಳುವುದರಿಂದ ಅಲ್ಲ ಎಂದು ಕುಟಕಿದ್ದಾರೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಆಗಿದೆ. ಮುಂದೆ ಇದು ಬಿಹಾರ ಚುನಾವಣೆ ಸೇರಿ ಬಿಜೆಪಿ ಸೋಲಲಿರುವ ಯಾವುದೇ ರಾಜ್ಯಗಳಲ್ಲೂ ಆಗಬಹುದು ಎಂದು ಆರೋಪಿಸಿದ್ದಾರೆ.

ಈ ನಡುವೆ ಮಹಾರಾಷ್ಟ್ರ ಚುನಾವಣೆ ಅವಧಿಯಲ್ಲಿ ಮತಗಟ್ಟೆಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗೂ ರಾಹುಲ್‌ ಗಾಂಧಿ ಬೇಡಿಕೆ ಇಟ್ಟಿರುವ ವಿಚಾರಕ್ಕೆ ಸಂಬಂಧಿಸಿ, ಆ ದೃಶ್ಯಾವಳಿಗಳನ್ನು ಹೈಕೋರ್ಟ್‌ ಅಷ್ಟೇ ಪರಿಶೀಲಿಸಬಹುದು. ಚುನಾವಣೆಯ ಸಮಗ್ರತೆ ಮತ್ತು ಮತದಾರರ ಖಾಸಗಿತನ ರಕ್ಷಿಸಲು ಈ ರೀತಿಯ ನಿಯಮವನ್ನು ರೂಪಿಸಲಾಗಿದೆ. ರಾಹುಲ್‌ ಗಾಂಧಿ ಮತದಾರರ ಖಾಸಗಿತನದ ವಿಚಾರದಲ್ಲಿ ಯಾಕೆ ಮಧ್ಯಪ್ರವೇಶಿಸಲು ಬಯಸುತ್ತಾರೆ? ಮತದಾರರ ಖಾಸಗಿತನವನ್ನು ರಕ್ಷಿಸುವುದು ಚುನಾವಣಾ ಕಾನೂನುಗಳ ಪ್ರಕಾರ ಚುನಾವಣಾ ಆಯೋಗದ ಜವಾಬ್ದಾರಿ. ರಾಹುಲ್‌ ಗಾಂಧಿ ಅವರಿಗೆ ಈ ಕುರಿತು ಯಾವುದೇ ಸಮಸ್ಯೆಗಳಿದ್ದರೆ ಹೈಕೋರ್ಟ್‌ ಮೇಲೆ ನಂಬಿಕೆ ಇಡಬೇಕು ಎಂದೂ ಅಧಿಕಾರಿಗಳ ಮೂಲಗಳು ಹೇಳಿವೆ.

ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡುವ ಮೂಲಕ ರಾಹುಲ್‌ ಗಾಂಧಿ ಅವರು, ತಮ್ಮದೇ ಪಕ್ಷದಿಂದ ಹಾಗೂ ಪಕ್ಷದ ಅಭ್ಯರ್ಥಿಯಿಂದ ನೇಮಿಸಲಾದ ಬೂತ್‌ಮಟ್ಟದ ಏಜೆಂಟರನ್ನೂ ಪ್ರಶ್ನಿಸಿದಂತಾಗಿದೆ ಎಂದೂ ಇದೇ ವೇಳೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.