ಸಾರಾಂಶ
ನವದೆಹಲಿ: ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದಕ್ಕೂ ಮುನ್ನವೇ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಒಂದಾದ ಯಮುನಾ ನದಿ ಶುದ್ಧೀಕರಣಕ್ಕೆ ಚಾಲನೆ ಸಿಕ್ಕಿದೆ. ನದಿಯಿಂದ ಕಸ ತೆಗೆಯುವ ಯಂತ್ರಗಳು, ಕಳೆ ಕೊಯ್ಲು ಯಂತ್ರಗಳು, ಹೂಳೆತ್ತುವ ಸಾಧನಗಳು ಮತ್ತು ಡ್ರೆಡ್ಜರ್‌ನೊಂದಿಗೆ ನದಿಯನ್ನು ಸ್ವಚ್ಛಗೊಳಿಸುವ ಕೆಲಸ ಪ್ರಾರಂಭವಾಗಿದೆ ಎಂದು ರಾಜ್ಯಪಾಲರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಫೆ.8ರಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ, ಮಾಲಿನ್ಯಮುಕ್ತ ಯಮುನಾಗೆ ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು. ಅದರ ಬೆನ್ನಲ್ಲೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ. ಕೆ. ಸಕ್ಸೇನಾ ಅವರು ಶನಿವಾರ ದೆಹಲಿ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಯಮುನಾ ನದಿ ಶುಚಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸಿದ್ದರು.
4 ಹಂತದ ಕಾರ್ಯತಂತ್ರ:
ನದಿ ಶುದ್ಧೀಕರಣವನ್ನು 4 ಹಂತಗಳಲ್ಲಿ ನಿರ್ವಹಿಸಲಾಗುತ್ತದೆ. ಮೊದಲಿಗೆ ನದಿಯಲ್ಲಿನ ಕಸ, ಹೂಳು ತೆಗೆಯಲಾಗುವುದು, ನಂತರ ನಜಾಫ್‌ಗಢ ಚರಂಡಿ, ಉಪ ಚರಂಡಿ ಮತ್ತು ಇತರ ಎಲ್ಲ ಪ್ರಮುಖ ಚರಂಡಿಗಳನ್ನು ಶುಚಿಗೊಳಿಸುವ ಕಾರ್ಯಗಳು ಪ್ರಾರಂಭವಾಗುತ್ತದೆ ಎಂದು ಲೆಫ್ಟಿನೆಂಟ್ ಗೌರ್ನರ್ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೈಗಾರಿಕಾ ಘಟಕಗಳಿಂದ ಸಂಸ್ಕರಿಸದ ತ್ಯಾಜ್ಯವನ್ನು ಚರಂಡಿಗಳಿಗೆ ಬಿಡುವುದರ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವಂತೆ ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಗೆ ನಿರ್ದೇಶನ ನೀಡಿದ್ದಾರೆ.