ಪಾಕಿಸ್ತಾನದಲ್ಲಿ ಯೋಗಕ್ಕೆ ಅಂತೂ ಮಾನ್ಯತೆ

| Published : May 05 2024, 02:05 AM IST / Updated: May 05 2024, 05:06 AM IST

ಸಾರಾಂಶ

ಯೋಗಕ್ಕೆ ವಿಶ್ವಮಾನ್ಯತೆ ಸಿಕ್ಕು ಈಗ 10 ವರ್ಷ ಆಗುತ್ತ ಬಂದರೂ ನೆರೆ ದೇಶ ಪಾಕಿಸ್ತಾನದಲ್ಲಿ ಈವರೆಗೂ ಮನ್ನಣೆ ಸಿಕ್ಕಿರಲಿಲ್ಲ.

ಇಸ್ಲಾಮಾಬಾದ್‌: ಯೋಗಕ್ಕೆ ವಿಶ್ವಮಾನ್ಯತೆ ಸಿಕ್ಕು ಈಗ 10 ವರ್ಷ ಆಗುತ್ತ ಬಂದರೂ ನೆರೆ ದೇಶ ಪಾಕಿಸ್ತಾನದಲ್ಲಿ ಈವರೆಗೂ ಮನ್ನಣೆ ಸಿಕ್ಕಿರಲಿಲ್ಲ. ಆದರೆ ಇದೇ ಮೊದಲ ಬಾರಿ ಅಧಿಕೃತವಾಗಿ ನೆರೆಯ ಪಾಕಿಸ್ತಾನಕ್ಕೂ ಯೋಗ ಪ್ರವೇಶಿಸಿದೆ. ಪಾಕಿಸ್ತಾನದ ಸರ್ಕಾರಿ ಸಂಸ್ಥೆಯೊಂದು ಇದೇ ಮೊದಲ ಬಾರಿ ಯೋಗ ಕಲಿಸುವುದಕ್ಕೆ ಮುಂದಾಗಿದೆ.

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಗರ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ ( ಸಿಡಿಎ), ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಜನರು ಯೋಗ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡು ಈ ಬಗ್ಗೆ ಮಾಹಿತಿ ನೀಡಿದೆ.

ಇಸ್ಲಾಮಾಬಾದ್‌ ಮೆಟ್ರೋಪೊಲಿಟಿಯನ್ ಕಾರ್ಪೋರೆಷನ್ ಎಫ್-9 ಪಾರ್ಕ್‌ನಲ್ಲಿ ಉಚಿತ ಯೋಗ ತರಬೇತಿ ಶಿಬಿರವನ್ನು ಪ್ರಾಧಿಕಾರ ಪ್ರಾರಂಭಿಸಿದೆ. ಈಗಾಗಲೇ ಹಲವರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಈ ತರಗತಿಗೆ ಸೇರಿಕೊಂಡಿದ್ದಾರೆ’ ಎಂದು ಬರೆದು ಕೊಂಡಿದೆ. ಯೋಗ ತರಬೇತಿ ಪ್ರಾರಂಭಗೊಂಡಿರುವುದನ್ನು ಅಲ್ಲಿನ ಸ್ಥಳೀಯರು ಕೂಡ ಸ್ವಾಗತಿಸಿದ್ದಾರೆ.

ಪ್ರಾಚೀನ ಯೋಗ ಪದ್ಧತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ದೃಷ್ಟಿಯಿಂದ 2014ರಿಂದ ಪ್ರತಿವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಭಾರತದ ಒತ್ತಾಯದ ಮೇರೆಗೆ ವಿಶ್ವಸಂಸ್ಥೆಯೇ ಯೋಗ ದಿನಾಚರಣೆ ಘೋಷಣೆ ಮಾಡಿತ್ತು, ಇದಕ್ಕೆ ಜಗತ್ತಿನ ಸುಮಾರು 175 ದೇಶಗಳಿಂದ ಅನುಮೋದನೆಯೂ ಸಿಕ್ಕಿತ್ತು. ಆದರೆ ನಮ್ಮ ನೆರೆಯ ರಾಷ್ಟ್ರಪಾಕಿಸ್ತಾನದಲ್ಲಿ ಯಾವುದೇ ಸರ್ಕಾರಿ ಸಂಸ್ಥೆಗಳಲ್ಲಿ ಈವರೆಗೂ ಯೋಗಕ್ಕೆ ಅಧಿಕೃತ ಮನ್ನಣೆ ದೊರೆತಿರಲಿಲ್ಲ.