ಮತದಾರಗೆ ಶಾಸಕ ಕಪಾಳಮೋಕ್ಷ, ತಿರುಗಿ ಬಾರಿಸಿದ ಮತದಾರ!

| Published : May 14 2024, 01:14 AM IST / Updated: May 14 2024, 04:41 AM IST

ಸಾರಾಂಶ

ಇಲ್ಲಿನ ಮತಗಟ್ಟೆಯೊಂದರಲ್ಲಿ ಸೋಮವಾರ ಸರದಿ ಸಾಲು ತಪ್ಪಿಸಿ ಮತ ಹಾಕಲು ಹೊರಟ ಶಾಸಕನೊಬ್ಬ, ತನ್ನನ್ನು ಪ್ರಶ್ನಿಸಿದ ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.

  ತೆನಾಲಿ :  ಇಲ್ಲಿನ ಮತಗಟ್ಟೆಯೊಂದರಲ್ಲಿ ಸೋಮವಾರ ಸರದಿ ಸಾಲು ತಪ್ಪಿಸಿ ಮತ ಹಾಕಲು ಹೊರಟ ಶಾಸಕನೊಬ್ಬ, ತನ್ನನ್ನು ಪ್ರಶ್ನಿಸಿದ ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಇದಕ್ಕೆ ಪ್ರತಿಯಾಗಿ ಮತದಾರನೂ ಶಾಸಕನಿಗೆ ಕಪಾಳಕ್ಕೆ ತಿರುಗಿ ಬಾರಿಸಿದ್ದಾನೆ. ಆಗ ಶಾಸಕನ ಬೆಂಬಲಿಗರು ಮತದಾರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ವೈಎಸ್‌ಆರ್‌ಸಿಪಿ ಶಾಸಕ ಎ ಶಿವಕುಮಾರ್ ಮೇಲೆ ತೆಲುಗುದೇಶಂ ಪಕ್ಷ ನೀಡಿದ ದೂರಿನ ಮೇರೆಗೆ ಈಗ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯು ಅಧಿಕಾರದ ದರ್ಪ ಇರುವ ರಾಜಕಾರಣಿಯ ಪ್ರತೀಕದಂತೆ ಗೋಚರಿಸಿದೆ.

ಆಗಿದ್ದೇನು?:  ತೆನಾಲಿಯಲ್ಲಿ ಮತದಾರರು ಸರದಿ ಸಾಲಿನಲ್ಲಿ ಮತ ಹಾಕಲು ಕಾಯುತ್ತಿದ್ದರು. ಆಗ ಸರತಿ ಸಾಲು ತಪ್ಪಿಸಿ ಶಾಸಕ ಶಿವಕುಮಾರ್‌ ನೇರವಾಗಿ ಮತಗಟ್ಟೆಗೆ ನುಗ್ಗಿ ಮತ ಹಾಕಲು ಯತ್ನಿಸಿದ್ದಾರೆ. ಇದನ್ನು ಮತದಾರರೊಬ್ಬರು ಪ್ರಶ್ನಿಸಿದ್ದಾರೆ.

ಆವೇಶದ ಭರದಲ್ಲಿ ಶಾಸಕರು ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆದರೆ ಇದರಿಂದ ಎದೆಗುಂದದ ಮತದಾರ ಶಾಸಕನಿಗೆ ಪ್ರತಿಯಾಗಿ ಕಪಾಳಮೋಕ್ಷ ಮಾಡಿದ್ದಾನೆ.ಇದರಿಂದ ಕ್ರುದ್ಧರಾದ ಶಾಸಕನ ಬೆಂಬಲಿಗರು, ಆ ವ್ಯಕ್ತಿಯ ಮೇಲೆ ಆಕ್ರೋಶಭರಿತರಾಗಿ ಥಳಿಸಿದ್ದಾರೆ. ಅಲ್ಲೇ ಇದ್ದ ಪೊಲೀಸರು ಮೂಕಪ್ರೇಕ್ಷಕರಂತೆ ಘಟನೆಯನ್ನು ನೋಡುತ್ತ ನಿಂತಿದ್ದರು.