ಕ್ಷೇತ್ರ ಬಿಟ್ಟು ನಾನು ಎಲ್ಲೂ ಹೋಗಲ್ಲ ಎಂದು ಬರ್ಹಾಂಪುರದಲ್ಲಿ ಟಿಎಂಸಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿರುವ ಕ್ರಿಕೆಟಿಗ ಯೂಸುಫ್‌ ಪಠಾಣ್‌ ಸ್ಪಷ್ಟನೆ ನೀಡಿದ್ದಾರೆ.

ಕೋಲ್ಕತಾ: ಪಶ್ಚಿಮ ಬಂಗಾಳದ ಬಹ್ರಾಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್‌ ರಂಜನ್‌ ಚೌಧರಿ ವಿರುದ್ಧ ಟಿಎಂಸಿಯಿಂದ ಕಣಕ್ಕೆ ಇಳಿದಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್ ಯೂಸುಫ್‌ ಪಠಾಣ್‌, ಈ ಬಾರಿ ತಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಠಾಣ್‌, ‘ದಿನ ಕಳೆದಂತೆ ನಾನು ಕ್ಷೇತ್ರದಲ್ಲಿ ಬಲ ಮತ್ತು ವಿಶ್ವಾಸ ಹೆಚ್ಚಿಸಿಕೊಳ್ಳುತ್ತಿದ್ದೇನೆ. ನಿಮ್ಮನ್ನೂ ಇನ್ನು ಎಲ್ಲಿಗೂ ಹೋಗಲು ಬಿಡಲ್ಲ ಎಂದು ಜನರು ಹೇಳುವಂತಹ ಕ್ಷೇತ್ರಕ್ಕೆ ಬಂದಿದ್ದು ನನ್ನ ಅದೃಷ್ಟ. ಈಗಾಗಲೇ ಇಲ್ಲಿನ ಜನ ನನ್ನನ್ನು ಒಪ್ಪಿಕೊಂಡಿದ್ದಾರೆ. ಚುನಾವಣೆ ಬಳಿಕವೂ ನಾನು ಇಲ್ಲಿಯೇ ಇರುತ್ತೇನೆ. ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ. ಈ ಬಾರಿ ಅಧೀರ್‌ ರಂಜನ್‌ ಚೌಧರಿಗೆ ಸೋಲು ಖಚಿತ, ನನ್ನ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧೀರ್‌ ರಂಜನ್‌ ಚೌಧರಿ ತಳಮಟ್ಟದ ಜನರ ಸಂಪರ್ಕ ಕಳೆದುಕೊಂಡಿದ್ದಾರೆ. ಕೋವಿಡ್‌ ಸಮಯದಲ್ಲಿ ಅವರು ಜನರ ನೆರವಿಗೆ ಬರಲಿಲ್ಲ. ಕೇಂದ್ರದಿಂದ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಸ್ಥಳೀಯ ಜನರಿಗೆ ಉದ್ಯೋಗದ ಅವಕಾಶವೇ ಇಲ್ಲ. 25 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿದವರು ಈ ಬಗ್ಗೆ ಜನರಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು.