₹ 20 ಕೋಟಿ ವೆಚ್ಚದಲ್ಲಿ ಪ್ರತಿ ಮನೆಗೂ ನಳ ಜೋಡಣೆ

| Published : Jan 12 2025, 01:15 AM IST

ಸಾರಾಂಶ

ಪ್ರತಿ ಮನೆಗೂ ಅಮೃತ ಯೋಜನೆಯಡಿ ಕುಡಿಯುವ ನೀರು ಪೂರೈಸಲಾಗುವುದು. ಈ ಯೋಜನೆಯೂ ಮುಂದಿನ 30 ವರ್ಷದ ಜನಸಂಖ್ಯೆಗೆ ಅನುಗುಣವಾಗಿದೆ

ರೋಣ: ಅಮೃತ ಯೋಜನೆಯಡಿ ರೋಣ ಪಟ್ಟಣಕ್ಕೆ ಸಮರ್ಪಕ ನೀರು ಪೂರೈಸಲು ₹20 ಕೋಟಿ ವೆಚ್ಚದಲ್ಲಿ ಪ್ರತಿ ಮನೆಗೂ ನಳ ಹಾಗೂ ಪೈಪ್ ಲೈನ್ ಜೋಡಣೆ ಮಾಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಶನಿವಾರ ಪಟ್ಟಣದ ಪುರಸಭೆ ಆವರಣದಲ್ಲಿ ಪೌರಾಡಳಿತ ಇಲಾಖೆ, ಪುರಸಭೆ ಕಾರ್ಯಲಯದಿಂದ 2024-25 ನೇ ಸಾಲಿನ ಎಸ್‌ಎಫ್‌ಸಿ ಪುರಸಭೆ ನಿಧಿ ಹಾಗೂ 2021-22 ಸಾಲಿನ 15 ನೇ ಹಣಕಾಸು ಎನ್.ಎಂ.ಪಿ.ಸಿ, 2023-24 ನೇ ಸಾಲಿನ 15ನೇ ಹಣಕಾಸು ಮುಕ್ತ ಹಾಗೂ ನಿರ್ಬಂಧಿತ ಅನುದಾನ ಹಾಗೂ 2023 -24 ನೇ ಸಾಲಿನ (2 ಕಂತು) ಕುಡಿವ ನೀರಿನ ಸಮಸ್ಯೆ ಪರಿಹರಿಸುವ ನಿಧಿ ಯೋಜನೆಯಡಿಗಳಲ್ಲಿ ಒಟ್ಟು ₹1 ಕೋಟಿಯ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಪ್ರತಿ ಮನೆಗೂ ಅಮೃತ ಯೋಜನೆಯಡಿ ಕುಡಿಯುವ ನೀರು ಪೂರೈಸಲಾಗುವುದು. ಈ ಯೋಜನೆಯೂ ಮುಂದಿನ 30 ವರ್ಷದ ಜನಸಂಖ್ಯೆಗೆ ಅನುಗುಣವಾಗಿದೆ. ರೋಣದಲ್ಲಿ ಒಂದು ಮನೆ ಬಿಡದೇ ನಳ‌ ಜೋಡಣೆ ಮಾಡಲಾಗುವುದು. ಪಟ್ಟಣದ ಕೆರೆಯನ್ನು ಪ್ರವಾಸಿ ತಾಣವಾಗಿಸಲು 2018-19 ರಲ್ಲಿ ₹2 ಕೋಟಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ₹1.60 ಕೋಟಿ ಖರ್ಚಾಗಿದ್ದು, ಉಳಿದ ₹40 ಲಕ್ಷದಲ್ಲಿ ಹಾಗೂ ಖನಿಜ ಅಭಿವೃದ್ಧಿ ನಿಗಮದಿಂದ ಬಿಡುಗಡೆಯಾದ ₹ 50 ಲಕ್ಷ ಸೇರಿದಂತೆ ಒಟ್ಟು ₹90 ಲಕ್ಷದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗುವುದು. ಜಿಗಳೂರ ಬೃಹತ್ ಕೆರೆ ಹತ್ತಿರ ಪ್ರವಾಸೋದ್ಯಮ ಇಲಾಖೆಯಿಂದ ₹ 50 ಲಕ್ಷ ಹಾಗೂ ಖನಿಜ ಅಭಿವೃದ್ಧಿ ನಿಗಮದಿಂದ ₹ 20 ಲಕ್ಷ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲಾಗುವುದು ಎಂದರು.

ಎಂಎಂಎಲ್ ನಿಗಮದಿಂದ ₹ 50 ಲಕ್ಷ ಹಾಗೂ ಮುಖ್ಯಮಂತ್ರಿಗಳ ಅನುದಾನದಿಂದ ₹ 50 ಲಕ್ಷ ಬಿಡುಗಡೆ ಮಾಡಲಾಗಿದೆ. ರೋಣ ತಾಲೂಕಿನಲ್ಲಿರುವ ಶಾಲೆಗಳ ಅಭಿವೃದ್ಧಿ ಹಾಗೂ ದುರಸ್ಥಿಗಾಗಿ ₹3 ಕೋಟಿ ಬಿಡುಗಡೆ ಮಾಡಲಾಗಿದೆ. ವಕ್ಫ್‌ ಬೋರ್ಡ್‌ನಿಂದ ಸವಡಿ ಗ್ರಾಮದಲ್ಲಿ ₹1ಕೋಟಿ ವೆಚ್ಚದಲ್ಲಿ ಶಾದಿಮಹಲ್ ನಿರ್ಮಿಸಲಾಗುವುದು ಎಂದರು.

₹10 ಕೋಟಿ ವೆಚ್ಚದಲ್ಲಿ ಶಿಥಿಲೀಕರಣ ಘಟಕ:

ರೈತರು ಬೆಳೆದ ಬೆಳೆ ದಾಸ್ತಾನು ಮಾಡಲು ರೋಣ ಎಪಿಎಂಸಿ ಹತ್ತಿರ 2 ಎಕರೆ ಪ್ರದೇಶದಲ್ಲಿ ₹10 ಕೋಟಿ ವೆಚ್ಚದಲ್ಲಿ ಶಿಥಿಲೀಕರಣ ಘಟಕ ನಿರ್ಮಿಸಲಾಗುವದು‌. ರೋಣ ಪಟ್ಟಣದ ಹಳೆ ಸಂತೆ ಬಜಾರ ಹಾಗೂ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಕಳೆದ‌ 30ಕ್ಕೂ ಹೆಚ್ಚು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ವಾಣಿಜ್ಯ ಮಳಿಗೆ ದುಸ್ಥಿತಿ ಹಂತಕ್ಕೆ ಬಂದಿದ್ದು, ಅವುಗಳನ್ನು ಕೆಡವಿ ಮರು ನಿರ್ಮಿಸಲಾಗುದು. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಹಳೆ ವಾಣಿಜ್ಯ ಮಳಿಗೆಗಳ ಗುಣಮಟ್ಟ ಪರೀಕ್ಷಿಸಲು ತಿಳಿಸಲಾಗಿದೆ. ಅವರ ವರದಿಯನ್ವಯ ಹೊಸ ಮಳಿಗೆ ಕಟ್ಟಲು ತೀರ್ಮಾನಿಸಲಾಗಿದೆ. ಈ ಕುರಿತು ಯೋಜನೆ ರೂಪಿಸಲಾಗಿದೆ. ಕರ ವಸೂಲಿ ಅತೀ ಮುಖ್ಯವಾಗಿದೆ. ರೋಣ ಪಟ್ಟಣದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲು ₹13 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ಸಿದ್ದಪಡಿಸಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಒದಗಿಸಲು ಆಗ್ರಹಿಸಲಾಗುವದು. ಈಗಾಗಲೇ ರೋಣದಲ್ಲಿ ಪ್ರಮುಖ ರಸ್ತೆಯಲ್ಲಿನ ಅತೀಕ್ರಮಣ ಜಾಗೆ ತೆರವು ಮಾಡಿದ್ದು, ಶೀಘ್ರದಲ್ಲಿ ₹20 ಕೋಟಿ ವೆಚ್ಚದಲ್ಲಿ ಕುರಹಟ್ಟಿ ಕ್ರಾಸ್ ನಿಂದ ಗದಗ ರಸ್ತೆಯ ರೋಣ ಹದ್ದು ಮುಗಿಯುವರೆಗೂ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಸದಸ್ಯ ಮಿಥುನ.ಜಿ. ಪಾಟೀಲ, ಬಸವರಾಜ ನವಲಗುಂದ, ವಿ. ಆರ್. ಗುಡಿಸಾಗರ, ಯೂಸೂಫ್‌ ಇಟಗಿ, ಸಂತೋಷ ಕಡಿವಾಲ, ಮಲ್ಲಯ್ಯ ಮಹಾಪುರುಷಮಠ, ಅಂದಪ್ಪ ಗಡಗಿ, ಬಾವಾಸಾಬ ಬೇಟಗೇರಿ, ಗದಿಗೆಪ್ಪ ಕಿರೇಸೂರ, ದಾವಲಸಾಬ್‌ ಬಾಡಿನ, ವಿದ್ಯಾ ದೊಡ್ಡಮನಿ, ಬಸಮ್ಮ ಹಿರೇಮಠ, ನಾಜಬೇಗಂ ಯಲಿಗಾರ, ಕುಬೇರಗೌಡ ಪರಡ್ಡಿ ಮುಂತಾದವರು ಉಪಸ್ಥಿತರಿದ್ದರು. ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ನಿರೂಪಿಸಿ ಸ್ವಾಗತಿಸಿದರು.