ಶುದ್ಧ ಕುಡಿಯುವ ನೀರಿನ ಕಾಮಗಾರಿಗೆ ₹ 66 ಲಕ್ಷ: ಕೆ.ಎಸ್. ಆನಂದ್

| Published : Oct 06 2024, 01:15 AM IST

ಶುದ್ಧ ಕುಡಿಯುವ ನೀರಿನ ಕಾಮಗಾರಿಗೆ ₹ 66 ಲಕ್ಷ: ಕೆ.ಎಸ್. ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಎಮ್ಮೇದೊಡ್ಡಿ ಭಾಗದ 5 ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರಿನ ಕಾಮಗಾರಿಗೆ ₹ 66 ಲಕ್ಷ ವೆಚ್ಚದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಕಡೂರು ಕ್ಷೇತ್ರದ ಎಮ್ಮೇದೊಡ್ಡಿ ಮುಸ್ಲಾಪುರದಹಟ್ಟಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ, ಕಡೂರು

ಎಮ್ಮೇದೊಡ್ಡಿ ಭಾಗದ 5 ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರಿನ ಕಾಮಗಾರಿಗೆ ₹ 66 ಲಕ್ಷ ವೆಚ್ಚದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಕಡೂರು ಕ್ಷೇತ್ರದ ಎಮ್ಮೇದೊಡ್ಡಿ ಮುಸ್ಲಾಪುರದಹಟ್ಟಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಎಲ್ಲೆಡೆ ₹462 ಕೋಟಿ ವೆಚ್ಚದಲ್ಲಿ ಜಲಜೀವನ್ ಕಾಮಗಾರಿ ನಡೆಯುತ್ತಿದ್ದು ಎಮ್ಮೇದೊಡ್ಡಿ ಭಾಗದ ಹಳೆಸಿದ್ದರಳ್ಳಿ, ಕಲ್ಲುಹೊಳೆ, ಮುಸ್ಲಾಪುರದಹಟ್ಟಿ, ಇಸ್ಲಾಂಪುರ ಮತ್ತು ಲಕ್ಕೇನಹಳ್ಳಿ ಗ್ರಾಮಗಳಲ್ಲಿ ಹೊಸ ಪೈಪ್ ಲೈನ್ ಹಾಕಿ ಕುಡಿಯುವ ನೀರು ನೀಡಲು ಲಕ್ಕವಳ್ಳಿಯ ಭದ್ರಾ ನದಿ ಬಳಿ ಜಾಕ್ ವೆಲ್ ಮತ್ತು ಪಂಪ್ ಹೌಸ್ ನಿರ್ಮಾಣವಾಗುತ್ತಿದೆ. ಎಮ್ಮೇದೊಡ್ಡಮ್ಮನ ಕೃಪೆಯಿಂದ ಒಂದೂವರೆ ವರ್ಷದಲ್ಲಿ ಎಲ್ಲ ಹಳ್ಳಿಗಳಿಗೂ ಪೈಪ್ ಲೈನ್ ಮೂಲಕ ಭದ್ರಾ ನೀರು ಕೊಡುವ ಮೂಲಕ ದೀರ್ಘ ಕಾಲದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.

ನಾವು ಸತತ ಬರಗಾಲ ಅನುಭವಿಸಿದ್ದು, ದೇವರ ಕೃಪೆಯಿಂದ ಈ ಬಾರಿ ಮಳೆ ಬಂದಿದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಳೆ ಬರುವುದಿಲ್ಲ ಎಂಬ ಬಿಜೆಪಿ- ಜೆಡಿಎಸ್ ನಾಯಕರ ಆರೋಪಕ್ಕೆ ಪ್ರಕೃತಿ ಉತ್ತರ ಕೊಟ್ಟಿದೆ. ರಾಜಕಾರಣಕ್ಕೂ ಮಳೆಗೂ ಸಂಬಂಧವಿಲ್ಲ. ನಾಡದೇವತೆ ಚಾಮುಂಡಿ ಕೃಪೆ ಯಿಂದ ಎಲ್ಲೆಡೆ ಮಳೆ ಬಂದಿದೆ ಎಂದರು.

ಮದಗದ ಕೆರೆ ಏರಿಯ ಕಾಮಗಾರಿ ನಡೆಯುತ್ತಿದ್ದು, 2018ರಲ್ಲಿ ತಾವು ಸೋತಾಗಲೂ ಮದಗದ ಕೆರೆಗೆ ಈ ಭಾಗದ ಜನರೊಂದಿಗೆ ಭಾಗಿನ ಅರ್ಪಿಸುತ್ತಿದ್ದೇನೆ. ಈ ಭಾರಿ ತಡವಾಗಿದ್ದು ಶೀಘ್ರದಲ್ಲೇ ಗ್ರಾಮಗಳ ಮುಖಂಡರ ಜೊತೆ ಚರ್ಚಿಸಿ ತಾಲೂಕು ಆಡಳಿತದಿಂದ ಬಾಗಿನ ಅರ್ಪಿಸುವ ಬಗ್ಗೆ ತಿಳಿಸಲಾಗುವುದು. ಗ್ರಾಪಂನವರು ಉತ್ತಮ ಕೆಲಸ ಮಾಡುತ್ತಿದ್ದು ಅವರ ಅಭಿವೃದ್ಧಿ ಶ್ರಮಕ್ಕೆ ನಾನು ಕೂಡ ಕೈಜೋಡಿಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ದಾಸಯ್ಯನಗುತ್ತಿ ಚಂದ್ರಪ್ಪ, ಡಿ. ಎಸ್. ಉಮೇಶ್, ಅಣ್ಣಪ್ಪ. ಗ್ರಾಪಂ ಅಧ್ಯಕ್ಷ ಶಶಿಕುಮಾರ್, ರಮೇಶ್, ಹೊಗರೇಹಳ್ಳಿ ಶಶಿ, ನವೀನ್, ರವಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ್, ಎಇಇ ಮೇಘನಾಥ್, ಸೋಮೇಶ್ ಹಾಗು ಎಮ್ಮೇದೊಡ್ಡಿ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರಿದ್ದರು.

5ಕೆಕೆಡಿಯು1.

ಕಡೂರು ಕ್ಷೇತ್ರದ ಎಮ್ಮೇದೊಡ್ಡಿಯ ಮುಸ್ಲಾಪುರದಹಟ್ಟಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಶಾಸಕ ಕೆ.ಎಸ್. ಆನಂದ್ ಚಾಲನೆ ನೀಡಿದರು.

--- ಬಾಕ್ಸ್‌----

ಮುಂದಿನ ವರ್ಷದೊಳಗೆ ಮದಗದ ಕೆರೆಗೆ ಪೈಪ್ ಲೈನ್ ಮುಖಾಂತರ ನೀರು ನೀಡುವ ಆಶಾಭಾವನೆ ಇದೆ. ದೇವನಕೆರೆ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಪಾಯಿಂಟ್ 12 ನೀರನ್ನು ದಾಸ್ತಾನು ಮಾಡಿ ಅಲ್ಲಿಂದ ಮದಗದ ಕೆರೆಗೆ ಅದರ ಸಾಮರ್ಥ್ಯದ ಅರ್ಧದಷ್ಟು ನೀರು ಹರಿಸುವುದರಿಂದ ಅದರ ಸರಣಿ ಕೆರೆಗಳಿಗೂ ನೀರು ಸಿಗಲಿದೆ. ಇದು ನಮ್ಮ ಸರ್ಕಾರದ ಕೊಡುಗೆ ನಾವು ಶಾಸಕರಾದ ನಂತರ ಶ್ರಮ ಹಾಕುವ ಮೂಲಕ ಕಾಮಗಾರಿಗೆ ವೇಗ ನೀಡಲಾಗಿದೆ.

--- ಕೆ.ಎಸ್‌.ಆನಂದ್, ಶಾಸಕ.