ಕಾಶ್ಮಿರದ ಪಹಲ್ಗಾಂನಲ್ಲಿ ಪಾಕಿಸ್ತಾನ ಪೋಷಿತ ಭಯೋತ್ಪದಕರು ೨೬ ಭಾಗತೀಯರನ್ನು ಧರ್ಮ ವಿಚಾರಿಸಿ ಹತ್ಯೆ ಮಾಡಿದ ಸೇಡನ್ನು ತೀರಿಸಿಕೊಳ್ಳಲು ಪ್ರಧಾನಿ ಸಾರಿದ ಯುದ್ಧಕ್ಕೆ ಕಾಂಗ್ರೆಸ್‌ ಸೇರಿದಂತೆ ದೇಶದ ಎಲ್ಲ ರಾಜಕೀಯ ಪಕ್ಷಗಳು ಒಮ್ಮತ ಸೂಚಿಸಿ ಸಂಪೂರ್ಣ ಸಹಕಾರ ನೀಡಿದ್ದವು. ನಮ್ಮ ಸೈನಿಕರು ಸಹ ಒಂದೇ ದಿನದಲ್ಲಿ ಪಾಕಿಸ್ತಾನ ಮುಟ್ಟಿನೋಡಿಕೊಳ್ಳುವಂತೆ ಹಾನಿ ಮಾಡಿದ್ದರು

ಕನ್ನಡಪ್ರಭ ವಾರ್ತೆ ಮಾಲೂರು

ಕೆಚ್ಚದೆಯಿಂದ ಹೋರಾಡಿ ಪಾಕಿಸ್ತಾನವನ್ನು ನಮ್ಮ ಯೋಧರು ಸದೆಬಡಿಯುತ್ತಿರುವಾಗ ಅಮೆರಿಕ ಅಧ್ಯಕ್ಷ ಟ್ರಂಪ್‌ ಮಾತಿಗೆ ತಲೆಬಾಗಿ ಕದನ ವಿರಾಮ ಘೋಷಸಿದ ಕೇಂದ್ರ ಸರ್ಕಾರದ ನಡೆ ದೇಶವಾಸಿಗಳಿಗೆ ಬೇಸರ ತರಿಸಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಮಾಜಿ ಯೋಧರ ಸಂಘ ಹಾಗೂ ದೇಶಾಭಿಮಾನಿಗಳ ಬಳಗ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 42 ವರ್ಷ ಸೇನೆಯಲ್ಲಿ ಸೇವೆ ನಂತರ ನಿವೃತ್ತಿಯಾದ ಜಯಮಂಗಲ ಗ್ರಾಮದ ಯೋಧ ವಿ.ಗುರುಮೂರ್ತಿಯನ್ನು ಅಭಿನಂದಿಸಿ ಮಾತನಾಡಿದರು.

ಯುದ್ಧಕ್ಕೆ ಬೆಂಬಲಿಸಿದ್ಜ ಪಕ್ಷಗಳು

ಕಾಶ್ಮಿರದ ಪಹಲ್ಗಾಂನಲ್ಲಿ ಪಾಕಿಸ್ತಾನ ಪೋಷಿತ ಭಯೋತ್ಪದಕರು ೨೬ ಭಾಗತೀಯರನ್ನು ಧರ್ಮ ವಿಚಾರಿಸಿ ಹತ್ಯೆ ಮಾಡಿದ ಸೇಡನ್ನು ತೀರಿಸಿಕೊಳ್ಳಲು ಪ್ರಧಾನಿ ಸಾರಿದ ಯುದ್ಧಕ್ಕೆ ಕಾಂಗ್ರೆಸ್‌ ಸೇರಿದಂತೆ ದೇಶದ ಎಲ್ಲ ರಾಜಕೀಯ ಪಕ್ಷಗಳು ಒಮ್ಮತ ಸೂಚಿಸಿ ಸಂಪೂರ್ಣ ಸಹಕಾರ ನೀಡಿದ್ದವು. ನಮ್ಮ ಸೈನಿಕರು ಸಹ ಒಂದೇ ದಿನದಲ್ಲಿ ಪಾಕಿಸ್ತಾನ ಮುಟ್ಟಿನೋಡಿಕೊಳ್ಳುವಂತೆ ಹಾನಿ ಮಾಡಿದ್ದರು. ನಮ್ಮ ಸೈನಿಕರು ಗೆಲ್ಲುವ ಹಂತ ತಲುಪಿದ್ದರು ಎಂದರು.

ಆದರೆ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಟ್ವೀಟ್‌ ಮೂಲಕ ಕದನ ವಿರಾಮ ಘೋಷಿಸಲಾಗಿದೆ ಎನ್ನುತ್ತಿದ್ದಂತೆ ಬಹಳ ತುರ್ತಾಗಿ ಕದನ ವಿರಾಮಕ್ಕೆ ನಮ್ಮ ದೇಶ ಒಪ್ಪಿಕೊಂಡಿದ್ದು ಬೇಸರ ತರಿಸಿದೆ. ಒಂದು ವೇಳೆ ಕದನ ವಿರಾಮ ಘೋಷಿಸದೆ ಯುದ್ಧ ಮುಂದುವರೆದಿದ್ದರೆ ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕರನ್ನು ಸಂಪೂರ್ಣ ಮಟ್ಟ ಹಾಕುವ ಜತೆಗೆ ಪಾಕಿಸ್ತಾನ ಮತ್ತೆ ಭಾರತದ ಕಡೆ ಕನಸಿನಲ್ಲೂ ತಿರುಗಿ ನೋಡದ ಹಾಗೆ ಮಾಡುತ್ತಿದ್ದರು ಎಂದರು.ಯೋಧರು, ಶಿಕ್ಷಕರ ಗ್ರಾಮ

೨೦ ವರ್ಷಗಳಿಗೆ ಸೈನ್ಯದಿಂದ ಸ್ವಯಂ ನಿವೃತ್ತಿ ಹೊಂದುವುದು ಹೆಚ್ಚಾಗುತ್ತಿದೆ. ನಮ್ಮ ತಾಲೂಕಿನ ಜಯಮಂಗಲದ ಗುರುಮೂರ್ತಿ ೪೨ ವರ್ಷ ಯೋಧನಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದುತ್ತಿರುವುದು ಗಮನಿಸಿದರೆ ಅವರಲ್ಲಿರುವ ದೇಶ ಪ್ರೇಮ ಎಲ್ಲರಿಗೂ ಮಾದರಿ. ದಲಿತ ಚಳವಳಿಗಳ ತವರೂರಾಗಿದ್ದ ಜಯಮಂಗಲದಲ್ಲಿ ದೇಶ ಕಾಯುತ್ತಿರುವ ಇನ್ನೂ ಐದು ಸೈನಿಕರು ಇದ್ದಾರೆ. ಅಲ್ಲದೆ ಇದೇ ಗ್ರಾಮದ ೬೦ ಕ್ಕೂ ಹೆಚ್ಚು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವುದು ಆ ಗ್ರಾಮದ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದರು.ಸೈನಿಕ ವೃತ್ತಿಗೆ ಹೋಗುವವರು ಕಷ್ಟದ ತೀರ್ಮಾನ ಕೈಗೊಳ್ಳುತ್ತಾರೆ. ಜೀವದ ಹಂಗು ತೊರೆದು ದೇಶವನ್ನು ಕಾಪಾಡುತ್ತಾರೆ. ನಿವೃತ್ತಿ ನಂತರದ ಅವರ ಜೀವನ ಕಷ್ಟವಾಗಿದ್ದು, ಅವರಿಗೆ ಸರ್ಕಾರದಿಂದ ಸಿಗುವ ಸೌವಲತ್ತು ಗಳನ್ನು ಕೊಡಿಸಲು ಪ್ರಾಮಾಣೀಕ ಪ್ರಯತ್ನ ಮಾಡಲಾಗುವುದು. ನಿವೃತ್ತ ಯೋಧರು ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದರೆ ತಾಲೂಕು ಆಡಳಿತ ವತಿಯಿಂದ ಮಂಜೂರು ಮಾಡಿಸಲಾಗುವುದು ಎಂದರು.ನಿವೃತ್ತ ಯೋಧಗೆ ಭವ್ಯ ಸ್ವಾಗತ

ನಿವೃತ್ತ ಯೋಧ ಗುರುಮೂರ್ತಿ ಹಾಗೂ ಅವರ ಕುಟುಂಬದವರನ್ನು ಪಟ್ಟಣದಲ್ಲಿ ಅತ್ಮೀಯವಾಗಿ ಸ್ವಾಗತಿಸಲಾಯಿತು, ಬಸ್‌ ನಿಲ್ದಾಣದ ಡಾ.ಬಿ.ಆರ್.ಅಂಬೇಡ್ಕರ್‌ ಉದ್ಯಾನವನದಲ್ಲಿ ಅಂಬೇಡ್ಕರ್‌ ಹಾಗೂ ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಹಾರಾಜ ವೃತ್ತದಿಂದ ಕೋಲಾರ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್‌ ಭವನದ ವರೆಗೆ ಭವ್ಯ ಮೆರವಣಿಗೆಯಲ್ಲಿ ನಿವೃತ್ತ ಯೋಧನನ್ನು ಕರೆ ತರಲಾಯಿತು.ಪುರಸಭೆ ಅಧ್ಯಕ್ಷೆ ವಿಜಯಲಕ್ಷಿ,ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್‌ ,ಡಾ.ಕಿರಣ್‌ ಸೋಮಣ್ಣ,ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಂಜಿನಪ್ಪ ,ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಯೀಂ ಖಾನ್‌ ,ಕಸಪಾ ಅಧ್ಯಕ್ಷ ಹನುಮಂತಯ್ಯ,ಪುರಸಭೆ ಸದಸ್ಯ ಭಾನುತೇಜಾ,ಎಸ್‌.ಎಂ.ರಾಜು, ಸಂಪಂಗೆರೆ ಮುನಿರಾಜು,ಸಾಹಿತಿ ಡಾ.ಜಯಮಂಗಲ ಚಂದ್ರಶೇಖರ್‌ ,ದೇಶಾಭಿಮಾನಿ ಬಳಗ ಸಂಘದ ಅಧ್ಯಕ್ಷ ರೇವಣ್ಣ ,ನಿವೃತ್ತ ಯೋಧರ ಸಂಘದ ಅಧ್ಯಕ್ಷ ಗಣೇಶ,ಗಂಗರಾಜು ಇನ್ನಿತರರು ಇದ್ದರು.