ರೋಗಗ್ರಸ್ತ ಗ್ರಾಮೀಣ ರಸ್ತೆಗಳಿಗೆ ಚಿಕಿತ್ಸೆ ಎಂದು?

| Published : May 28 2024, 01:00 AM IST

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗಿದೆ, ಆದರೆ ಅಭಿವೃದ್ದಿ ಎಂಬುದು ಬರೀ ಮಾತಿನಲ್ಲೆ ಇದೆ ವಿನಃ ಯಾವುದೂ ಕಾರ‍್ಯಗತವಾಗುತ್ತಿಲ್ಲ, ಇದನ್ನು ತಿಳಿಯಬೇಕಾದರೆ ಒಮ್ಮೆ ಕ್ಷೇತ್ರದ ಗ್ರಾಮೀಣ ಭಾಗದ ಕಡೆ ಸಂಚರಿಸಿದರೆ ತಿಳಿಯುತ್ತದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಬಳಿಕ ಸರ್ಕಾರದ ಖಜಾನೆಯಲ್ಲಿ ಅಭಿವೃದ್ಧ ಕಾರ್ಯಗಳಿಗೆ ಹಣವಿಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡುವಂತೆ ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿ ಮುಖನವನ್ನೇ ಕಾಣದೆ ಅಧ್ವಾನ ರಸ್ತೆಗಳಾಗಿ ಪರಿವರ್ತನೆಯಾಗಿರುವುದೇ ಸಾಕ್ಷಿ.

ಹೌದು ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗಿದೆ, ಆದರೆ ಅಭಿವೃದ್ದಿ ಎಂಬುದು ಬರೀ ಮಾತಿನಲ್ಲೆ ಇದೆ ವಿನಃ ಯಾವುದೂ ಕಾರ‍್ಯಗತವಾಗುತ್ತಿಲ್ಲ, ಇದು ಸತ್ಯವೇ ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ಕ್ಷೇತ್ರದ ಗ್ರಾಮೀಣ ಕಡೆ ಅದರಲ್ಲಿಯೂ ಗಡಿ ಭಾಗದ ಗ್ರಾಮಗಳ ಕಡೆ ಒಮ್ಮೆ ಸಂಚರಿಸಿದೆ ತಿಳಿಯುತ್ತದೆ.

ಕಾಮಸಮುದ್ರ ರಸ್ತೆ ಅಪೂರ್ಣ

ಪಟ್ಟಣದಿಂದ ಕಾಮಸಮುದ್ರ ಹೋಬಳಿ ಕೇಂದ್ರಕ್ಕೆ ಸಂಪರ್ಕದ ರಸ್ತೆ ೧೫ವರ್ಷಗಳಿಂದ ಡಾಂಬರೀಕರಣ ಕಾರಣದೆ ಅವ್ಯವಸ್ಥೆಯಿಂದ ಕೂಡಿದ್ದು ವಿಧಾನಸಭೆ ಚುನಾವಣೆ ಸಮಯದಲ್ಲಿ ೧೬ ಕಿ.ಮೀ ಡಾಂಬರೀಕರಣಕ್ಕೆ ಚಾಲನೆ ನೀಡಿದರು. ಆದರೆ ೭.೫ಕಿ.ಮೀ ಹಾಕಿ ಉಳಿದ ರಸ್ತೆಯನ್ನು ಕಡೆಗಣಿಸಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.ಅದೇ ರೀತಿ ತಾಲೂಕಿನ ದೋಣಿಮಡಗು ಗ್ರಾಪಂಃಕದರಿನತ್ತ ಗ್ರಾಮ ಕಾಡಿನ ಅಂಚಿನಲ್ಲಿ,ಈ ಗ್ರಾಮಕ್ಕೆ ಹೋಗಬೇಕಾದರೆ ಮುಖ್ಯ ರಸ್ತೆಯಿಂದ ೪ಕಿ.ಮೀ ಕ್ರಮಿಸಬೇಕು,ಆದರೆ ೪ಕಿ.ಮೀ ಉದ್ದ ರಸ್ತೆಯಲ್ಲಿ ಎಲ್ಲಿಯೂ ಡಾಂಬರು ಕಾಣುವುದಿಲ್ಲ, ಬರೀ ಡಾಂಬರು ಮಾಯವಾಗಿ ಜೆಲ್ಲಿ ಹಾಗೂ ಹಳ್ಳಗಳಿಂದ ಕೂಡಿದೆ. ಮಳೆ ಬಂದರೆ ರಸ್ತೆ ಯಾವುದು ಹಳ್ಳ ಯಾವುದು ಎಂದು ದ್ವಿಚಕ್ರ ವಾಹನ ಸವಾರರು ಹುಡುಕಬೇಕು ಅಷ್ಟರ ಮಟ್ಟಿ ರಸ್ತೆ ಹದಗೆಟ್ಟಿದೆ. ರಸ್ತೆ ಉತ್ತಮವಾಗಿದ್ದರೆ ೫ ಮಿನಿಷದಲ್ಲಿ ತಲುಪಬಹುದು ಆದರೆ ಈಗ ರಸ್ತೆಯಲ್ಲಿ ಕದರಿನತ್ತ ಗ್ರಾಮಕ್ಕೆ ಹೋಗಬೇಕಾದರೆ ಅರ್ಧಗಂಟೆ ಬೇಕು.

ವಾಹನ ಸಂಚಾರ ದುಸ್ತರ

ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಗೆ ಆಹಾರ ಧಾನ್ಯಗಳನ್ನು ತೆಗೆದುಕೊಂಡು ಹೋಗುವ ಲಾರಿ ಸಹ ಪ್ರತಿ ತಿಂಗಳು ಹರಸಾಹಸ ಮಾಡಿಕೊಂಡೇ ಹೋಗುವಂತಾಗಿದೆ. ಗ್ರಾಮ ಕಾಡಂಚಿನಲ್ಲಿರುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಕಡೆ ಚುನಾವಣೆ ಸಮಯದಲ್ಲಿ ಮಾತ್ರ ಬಂದು ಹೋದರೆ ಮತ್ತೆ ೫ವರ್ಷಕ್ಕೆ ಮುಖ ದರ್ಶನ ನೀಡುವುದು. ಈ ಬಗ್ಗೆ ರೈತ ಸಂಘ ಹೋರಾಟ ಮಾಡಿದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ .ರಸ್ತೆ ಸರಿಯಿಲ್ಲದ ಕಾರಣ ಬಸ್ ಸಂಚಾರ ಸಹ ಸ್ಥಗಿತವಾಗಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳ ವಕ್ರದೃಷ್ಟಿಗೆ ಗ್ರಾಮಸ್ಥರು ತುತ್ತಾಗಿರುವುದರಿಂದ ಗ್ರಾಮಮಸ್ಥರು ಪಟ್ಟಣಕ್ಕೆ ಬರದೆ ಅಗತ್ಯ ವಸ್ತುಗಳ ಖರೀದಿಗೆ ಗ್ರಾಮಕ್ಕೆ ಸಮೀಪದಲ್ಲೆ ಇರುವ ತಮಿಳುನಾಡಿನ ಯಾಪನಪಲ್ಲಿ ಇಲ್ಲವೆ ಕೃಷ್ಣಗಿರಿಗೆ ಹೋಗಿಬರುವಂತಾಗಿದೆ. ಆದರೂ ಚುನಾಯಿತ ಪ್ರತಿನಿಧಿಗಳಾಗಲೀ ಅಥವಾ ತಾಲೂಕು ಆಡಳಿತವಾಗಲಿ ಗ್ರಾಮಸ್ಥರ ಸಮಸ್ಯೆಗಳಿಗೆ ಕಿವಿ ಕೊಡದಿರುವುದು ವಿಪರ್ಯಾಸವಾಗಿದೆ.