ಸಾರಾಂಶ
ಸರಿಯಾದ ಕಟ್ಟಡ, ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಡೆಸ್ಕ್, ಕುಡಿಯುವ ನೀರು, ಶೌಚಾಲಯಗಳು, ಇಲ್ಲದೆ ಸಾಕಷ್ಟು ಸರ್ಕಾರಿ ಶಾಲೆಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ, ಅಥರ್ಗಾ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹೈಟೆಕ್ ಸ್ಪರ್ಶ ಪಡೆದು ಖಾಸಗಿಶಾಲೆಗಳಿಗೆ ಸ್ಪರ್ಧೆ ನೀಡುವಂತಿದೆ.
ಕನ್ನಡಪ್ರಭ ವಾರ್ತೆ ಇಂಡಿ
ಸರಿಯಾದ ಕಟ್ಟಡ, ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಡೆಸ್ಕ್, ಕುಡಿಯುವ ನೀರು, ಶೌಚಾಲಯಗಳು, ಆಟದ ಮೈದಾನ ಇಲ್ಲದೆ ಸಾಕಷ್ಟು ಸರ್ಕಾರಿ ಶಾಲೆಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ, ಅಥರ್ಗಾ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹೈಟೆಕ್ ಸ್ಪರ್ಶ ಪಡೆದು ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವಂತಿದೆ. ಇದಕ್ಕೆ ಕಾರಣ ಸಂಸದ ರಮೇಶ ಜಿಗಜಿಣಗಿ.
ತಾಲೂಕಿನ ಅಥರ್ಗಾ ಗ್ರಾಮದಲ್ಲಿನ ಶಾಲೆ 1953-54ರಲ್ಲಿ ಪ್ರಾರಂಭವಾಗಿತ್ತು. ಈ ಶಾಲೆಯಲ್ಲಿ ಸಂಸದ ರಮೇಶ್ ಜಿಗಜಿಣಗಿ ಸೇರಿದಂತೆ ಸಾಕಷ್ಟು ಜನರು ಅಕ್ಷರ ಕಲಿತಿದ್ದಾರೆ. ಹಲವು ವರ್ಷಗಳಿಂದ ಶಾಲಾ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದವು.
ಛಾವಣಿ ಹಾಳು ಬಿದ್ದು ಮಳೆ ಬಂದರೆ ಶಾಲೆಗೆ ರಜೆ ಕೊಡುವ ಪರಿಸ್ಥಿತಿ ಇತ್ತು. ಈ ಹಿಂದೆ ಒಮ್ಮೆ ಶಾಲೆಗೆ ಭೇಟಿ ನೀಡಿದ್ದ ಸಂಸದರು, ಶಾಲಾ ಅಭಿವೃದ್ಧಿ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ₹1 ಕೋಟಿ ಅನುದಾನ ರೂಜ ಒದಗಿಸಿದರು.
2018-19ರಲ್ಲಿ ಈ ಶಾಲೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿತ್ತು. ಇಂದು ಕಟ್ಟಡ ಸಂಪೂರ್ಣ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿಯಲ್ಲಿ ₹40 ಲಕ್ಷ ವೆಚ್ಚದಲ್ಲಿ ಶಾಲಾ ಕಾಂಪೌಂಡ್, ಶಾಲಾ ಮೈದಾನ, ಫ್ಲವರ್ ಬಾಕ್ಸ, ಹೈಟೆಕ್ ಶೌಚಾಲಯ, ಬಾಸ್ಕೆಟ್ ಬಾಲ್ ಮೈದಾನ ಅಭಿವೃದ್ಧಿ ಪಡಿಸಿದ್ದು, ಖಾಸಗಿ ಶಾಲೆಗಳಿಗೆ ಮೀರಿಸುವಂತೆ ಅಭಿವೃದ್ದಿ ಮಾಡಲಾಗಿದೆ.
1 ರಿಂದ 7ನೇ ತರಗತಿ ವರೆಗೆ ಶಿಕ್ಷಣ ನಡೆಯುತ್ತಿದ್ದು, ಕೋಣೆಗಳು ಶಿಥಿಲಗೊಂಡಿದ್ದರಿಂದ ಪಾಲಕರು ಭಯದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದರು.ಆದರೆ, ಶಾಲೆಯ ಸಂಪೂರ್ಣ ಚಿತ್ರಣ ಬದಲಾಗಿದ್ದು, ಪಕ್ಕದಲ್ಲಿ ಎರಡು ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದರೂ ಸರ್ಕಾರಿ ಶಾಲೆಯಲ್ಲಿ 130 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, 6 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 12 ಕೋಣೆಗಳು ನಿರ್ಮಾಣ ಮಾಡಲಾಗಿದೆ. ಎಲ್ಲಾ ಕೋಣೆಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ.
ನಾನು ಕಲಿತ ನನ್ನೂರು ಅಥರ್ಗಾ ಗ್ರಾಮದಲ್ಲಿನ ಸರ್ಕಾರಿ ಶಾಲೆ ಅಭಿವೃದ್ಧಿ ಪಡಿಸಬೇಕೆನ್ನುವ ಬಹಳ ದಿನಗಳಿಂದ ಕನಸು ನನಸಾಗಿದೆ. ಶಾಲಾ ಕೋಣೆಗಳ ನಿರ್ಮಾಣಕ್ಕೆ ₹1 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಇಂದು ಶಾಲಾ ಕಟ್ಟಡ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಸುಂದರವಾಗಿ ನಿರ್ಮಾಣ ಮಾಡಿದ್ದಾರೆ. ಕಲಿತ ಶಾಲೆಗೆ, ಕಲಿಸಿದ ಶಿಕ್ಷಕರಿಗೆ ಎಷ್ಟು ಸ್ಮರಿಸಿದರೂ ಕಡಿಮೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸಂಸದ ರಮೇಶ ಜಿಗಜಿಣಗಿ ನಮ್ಮೂರ ಸರ್ಕಾರಿ ಶಾಲೆ ಕಟ್ಟಡ ನವೀಕರಣಕ್ಕೆ ಅನುದಾನ ನೀಡಿದ್ದರಿಂದ ಶಾಲೆ ಸಂಪೂರ್ಣ ಹೊಸ ಸ್ವರೂಪ ಪಡೆದಿದೆ. ನರೇಗಾ ಯೋಜನಯಡಿ ₹40 ಲಕ್ಷ ವೆಚ್ಚದಲ್ಲಿ ಶಾಲಾ ಕಾಂಪೌಂಡ್ ಸೇರಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ನಾಗುಗೌಡ ಪಾಟೀಲ ತಿಳಿಸಿದರು.
ಅಥರ್ಗಾ ಗ್ರಾಮದಲ್ಲಿನ ಸರ್ಕಾರಿ ಶಾಲೆ ಅಭಿವೃದ್ಧಿಗೆ ₹1 ಕೋಟಿ ಅನುದಾನ ಮಂಜೂರು ಮಾಡಿಸುವುದರ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದ ಕೇಂದ್ರ ಸರ್ಕಾರದಿಂದ ₹1ಲಕ್ಷ ಕೋಟಿ ಅನುದಾನ ತಂದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಅಭಿನಂದಿಸುತ್ತೇವೆ ಎಂದು ಅಥರ್ಗಾ ತಾಪಂ ಸದಸ್ಯ ಗಣಪತಿ ಬಾಣಿಕೋಲ ಹೇಳಿದರು.
ಪ್ರಧಾನಿ ಮೋದಿ ನೇತ್ರತ್ವದ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಅಪಾರ ಅನುದಾನ ತಂದಿರುವುದಲ್ಲದೆ, ಜಿಲ್ಲೆಯ ಮುತ್ಸದ್ದಿ ರಾಜಕೀಯ ನಾಯಕರಾಗಿ, ಸರ್ವ ಜನಾಂಗದೊಂದಿಗೆ ಪ್ರೀತಿ, ವಾತ್ಸಲ್ಯದೊಂದಿಗೆ ಬೆರೆತು, ಸರ್ವರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿರುವ ಸಂಸದ ರಮೇಶ ಜಿಗಜಿಣಗಿ ಅವರು, ತಾವು ಕಲಿತ ಶಾಲೆ ನವೀಕರಣ ಮಾಡಿ ಮಾದರಿಯಾಗಿದ್ದಾರೆ ಎಂದು ಅನೀಲಗೌಡ ಬಿರಾದಾರ ಹೇಳಿದರು.