(ಲೀಡ್‌) ಕಾಗೋಡು ತಿಮ್ಮಪ್ಪನವರ ಮೌಲ್ಯಕ್ಕೆ ಸಂದ ಸನ್ಮಾನ

| Published : Oct 21 2024, 12:33 AM IST

(ಲೀಡ್‌) ಕಾಗೋಡು ತಿಮ್ಮಪ್ಪನವರ ಮೌಲ್ಯಕ್ಕೆ ಸಂದ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ತಾಳಗುಪ್ಪದಲ್ಲಿ ಕಾಗೋಡು ಚಳವಳಿಯ ಹೋರಾಟಗಾರ ಕಾಗೋಡು ತಿಮ್ಮಪ್ಪ ಅವರನ್ನು ನಾಗರೀಕವಾಗಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ತಾಳಗುಪ್ಪ

ಕಾಗೋಡು ತಿಮ್ಮನವರಿಗೆ ಇಲ್ಲಿ ನಡೆಯುತ್ತಿರುವ ಸನ್ಮಾನ ಅವರ ಭೌತಿಕ ಶರೀರಕ್ಕಲ್ಲ. ಬದಲಾಗಿ ಅವರು ಪಾಲಿಸಿಕೊಂಡು ಬಂದಿರುವ ಮೌಲ್ಯಕ್ಕೆ ಎಂದು ಮಾಜಿ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದರು.

ತಾಳಗುಪ್ಪದಲ್ಲಿ ಭಾನುವಾರ ಉಳುವವನೇ ಭೂ ಒಡೆಯ ಕಾನೂನು ಜಾರಿಗೆ ಬಂದ 50 ವರ್ಷದ ಸಂದರ್ಭದಲ್ಲಿ ನಾಗರಿಕ ಸನ್ಮಾನ ಸಮಿತಿ ಅಯೋಜಿಸಿದ್ದ ಕಾಗೋಡು ತಿಮ್ಮಪ್ಪನವರಿಗೆ ಮಾಡಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತ ಇಂದು ಕವಲು ದಾರಿಯಲ್ಲಿದೆ. ಜಯಪ್ರಕಾ ಶ್‍ನಾರಾಯಣ್, ರಾಮ್ ಮನೋಹರ್ ಲೋಹಿಯಾ, ಶಾಂತವೇರಿ ಗೋಪಾಲ ಗೌಡರ ಕಾಲದ ರಾಜಕಾರಣ ಇಂದು ನಮಗೆ ಕಾಣಿಸುತ್ತಿಲ್ಲ. ಸಾರ್ವಜನಿಕರ ಅಹವಾಲನ್ನು ಆಲಿಸುವ ಜನಪ್ರತಿನಿಧಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೋರಾಟದ ಮೂಲಕ ರಾಜಕಾರಣಕ್ಕೆ ಬರುವ ಜನರ ಸಂಖ್ಯೆ ಕಡಿಮೆಯಾದಾಗ ಸಂವಿಧಾನ ನರಳುತ್ತದೆ. ಕಾಗೋಡು ತಿಮ್ಮಪ್ಪ ಸತ್ಯ ರಾಜಕಾರಣ ಮಾಡಿದ ಜನನಾಯಕ. ಆ ಕಾರಣದಿಂದ ಇಂದು ಅವರಿಗೆ ನೀಡಲಾಗುತ್ತಿರುವ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡ ಸಾವಿರಾರು ಸಂಖ್ಯೆಯ ಜನರೇ ಸಾಕ್ಷಿ ಎಂದರು.

ಇಂದಿನ ಸಭೆಗಳು ಎಂದರೆ ಹಣ, ಹೆಂಡ, ಬಿರಿಯಾನಿ ಕೊಟ್ಟು ಜನರನ್ನು ಸೇರಿಸುವ ಪರಿಸ್ಥಿತಿಗೆ ಬಂದು ತಲುಪಿದೆ. ಮೌಲ್ಯಗಳನ್ನು ಗಾಳಿಗೆ ತೂರಿದಾಗ ಇಂತಹ ಅಪಾಯಗಳು ಸಂಭವಿಸುತ್ತವೆ ಎಂದು ವಿಷಾದಿಸಿದರು.

ರಾಜಕಾರಣಿಗಳು ಹೋರಾಟ ಮಾಡದಿದ್ದರೂ ಪರವಾಗಿಲ್ಲ, ಆದರೆ ಮಾರಾಟವಾಗಬಾರದು. ಇಂದು ರಾಜಕಾರಣ, ಮಾಧ್ಯಮಗಳಾದಿಯಾಗಿ ಎಲ್ಲವೂ ಉದ್ಯಮಗಳಾಗಿವೆ. ಚುನಾವಣಾ ಆಯೋಗ ನೆಪಕ್ಕೆ ಮಾತ್ರ ಇರುವಂತೆ ನೋಡಿಕೊಳ್ಳಲಾಗಿದೆ. ಚುನಾವಣಾ ಸಂಧರ್ಭದಲ್ಲಿ ಅಭ್ಯರ್ಥಿಗಳ ಆಸ್ತಿ ವಿವರ ಕೋಟಿ ಲೆಕ್ಕದಲ್ಲಿ ಸಲ್ಲಿಕೆಯಾಗುತ್ತಿದೆ. ಮತ್ತೆ ಮುಂದಿನ ಚುನಾವಣೆಗಳಲ್ಲಿ ಅದು ದುಪ್ಪಟ್ಟಟಾಗುತ್ತದೆ. ಆಯೋಗ ಅದಕ್ಕೆ ಅಧಿಕೃತ ಮುದ್ರೆಯನ್ನೊತ್ತಿ ಸಕ್ರಮ ಮಾಡುತ್ತದೆಯೇ ಹೊರತು ಅಭ್ಯರ್ಥಿಗೆ ಆಸ್ತಿ ಬಂದಿರುವ ದಾರಿ ಹುಡುಕುವ ಕೆಲಸ ಮಾಡುತ್ತಿಲ್ಲ. ತನಿಖೆ ಮಾಡುವ ಅಧಿಕಾರ, ಅವಕಾಶ ಎರಡೂ ಇಲ್ಲದ ಹಂತಕ್ಕೆ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ ಎಂದು ನುಡಿದರು.

ಇಂದು ಪ್ರಮುಖವಾಗಿ ಮೌಢ್ಯ, ಭ್ರಷ್ಟಾಚಾರದ ವಿರುದ್ಧ ಮತ್ತು ಸಂವಿಧಾನ ಉಳಿಸುವ ಹೋರಾಟಗಳು ಆಗಬೇಕಾಗಿದೆ. ವಿಪರ್ಯಾಸವೆಂದರೆ ಸಂವಿಧಾನವನ್ನು ತಮ್ಮ ಚುನಾವಣಾ ಭಾಷಣದಲ್ಲಿ ನೇರವಾಗಿ ವಿರೋಧಿಸಿ, ಅದೇ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸಂಖ್ಯಾ ಬಲದ ಮೇಲೆ ಅಧಿಕಾರ ಏರಲಾಗುತ್ತಿದೆ. ಸ್ಥಾಪಿತ ಹಿತಾಸಕ್ತಿ ಹಾಗೂ ಪಟ್ಟ ಭದ್ರರು ಚುನಾವಣೆಯನ್ನೇ ದುರ್ಬಲಗೊಳಿಸಿದ್ದಾರೆ. ಇದು ಕೇವಲ ರಾಜಕೀಯ ಮಾತ್ರವಲ್ಲ, ಎಲ್ಲಾ ರಂಗದಲ್ಲಿಯೂ ಇದೇ ರೀತಿಯ ವ್ಯತ್ಯಯವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಇದು ಭೂಮಿ ಕೊಟ್ಡ ದೇವರಿಗೆ ಸಲ್ಲಬೇಕಾದ ಸನ್ಮಾನ. ಕಾಗೋಡು ತಿಮ್ಮಪ್ಪನವರ ಹೋರಾಟದ ಫಲವಾಗಿ ಸಾವಿರಾರು ಕುಟುಂಬಗಳು ಬೆಳಕು ಕಂಡಿವೆ. ಏಡಿ, ಹೊಳೆ ಮೀನು ಹಿಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಜನರು ಇಂದು ಸ್ವಾವಲಂಬಿಗಳಾಗಿ, ರಾಜಕೀಯದಲ್ಲಿಯೂ ಹಾಗೂ ಸಮಾಜದಲ್ಲಿಯೂ ಉನ್ನತ ಸ್ಥಾನ ಕಂಡಿದ್ದಾರೆ. ಇದಕ್ಕೆ ಈ ನಾಯಕರ ಹೋರಾಟ ಕಾರಣ ಎಂದು ಗುಣಗಾನ ಮಾಡಿದರು. ಈ ಸನ್ಮಾನದ ಜೊತೆಗೆ ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ಸಿಗುವಂತೆ ನಾವು ಪ್ರಯತ್ನಿಸಬೇಕಿದೆ ಎಂದರು.

ಬಿ.ಆರ್, ಜಯಂತ್ ಮಾತನಾಡಿ, ಮೌಲ್ಯಗಳು ಎಂದರೆ ಕಾಗೋಡು ತಿಮ್ಮಪ್ಪನವರು. ಇವರು ಹೋರಾಡಿದ ಅರಣ್ಯ ಹಕ್ಕು ಜನರಿಗೆ ಆಶ್ರಯ ನೀಡಿದೆ, ಆದರೂ ಚುನಾವಣೆಯಲ್ಲಿ ಸತ್ಯಕ್ಕೆ ಸೋಲಾಯಿತು. ಇದರ ಪರಿಣಾಮವಾಗಿ ರೈತರು ಮತ್ತೆ ಸಂಕಷ್ಟ ಅನುಭವಿಸುವಂತಾಯಿತು, ಎಂದರು.

ಈ ವೇಳೆ ಸಿಗಂದೂರು ಧರ್ಮಕ್ಷೇತ್ರದ ಧರ್ಮದರ್ಶಿ ಡಾ.ರಾಮಪ್ಪ, ಅಂಕರವಳ್ಳಿ ಕೆರಿಯಪ್ಪ, ಶಿವಮೂರ್ತಿ, ದಿವಾಕರ್ , ಹುಚ್ಚಪ್ಪ ಮಂಡಗಳಲೆ ಶ್ರೀಧರ ಮೂರ್ತಿ, ಹುಚ್ಚಪ್ಪ ಹುಣಸೂರು ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ನಾಗರೀಕ ಸನ್ಮಾನ ಸಮಿತಿ ವತಿಯಿಂದ ‘ಭೂ ಹಕ್ಕಿಲ್ಲದವರ ಶೋಷಿತರ ಸರ್ವೋದಯದ ಹೊಂಬೆಳಕು’ ಅಭಿನಂದನಾ ಗ್ರಂಥ ಹಾಗೂ ಕಾಗೋಡು ತಿಮ್ಮಪ್ಪನವರ ಚುಕ್ಕಿ ಚಿತ್ರ ಬಿಡುಗಡೆ ಮಾಡಲಾಯಿತು.