ತೂಗುವ ತೊಟ್ಟಿಲಿನಿಂದ ದೇಶದ ಆಡಳಿತ ನಡೆಸುವವರೆಗೆ ಹೆಣ್ಣು ಸಮರ್ಥವಾಗಿದ್ದಾಳೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ತೂಗುವ ತೊಟ್ಟಿಲಿನಿಂದ ದೇಶದ ಆಡಳಿತ ನಡೆಸುವವರೆಗೆ ಹೆಣ್ಣು ಸಮರ್ಥವಾಗಿದ್ದಾಳೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಹೇಳಿದರು.ಕನಕಶ್ರೀ ಮಹಿಳಾ ಸಮಾಜ ನಗರದ ಕನಕ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಕನಕಶ್ರೀ ಮಹಿಳಾ ಸಮಾಜ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಾಯಿ, ಮಡದಿ, ಅತ್ತೆ-ಸೊಸೆ ಸೇರಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣಿನ ಸಾಧನೆ ದೊಡ್ಡದಾಗಿದೆ ಎಂದರು.
ಹೆಣ್ಣು ಮಗಳು, ಮನೆಯ ಕಣ್ಣಿನಂತೆ. ಸಂಸಾರದ ಬಹುತೇಕ ಜವಾಬ್ದಾರಿಯನ್ನು ನಿರ್ವಹಿಸುವ ಕರುಣಾಮಯಿ. ತಾಯಿಯಾಗಿ ಮಕ್ಕಳನ್ನು ಸದಾಕಾಲ ಕಾಪಾಡುತ್ತಾಳೆ. ಮಡದಿ, ತಂಗಿಯಾಗಿ ಗಂಡಿನ ಶ್ರೇಯಸ್ಸನ್ನು ಬಯಸುವ ಮಹಿಳೆಯರು ಜಗತ್ತಿಗೆ ಒಂದು ಬೆಳಕಿನಂತೆ ಎಂದು ಅಭಿಪ್ರಾಯಪಟ್ಟರು.ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದ್ದು, ಶಾರದದೇವಿ, ದುರ್ಗಿ, ಚಾಮುಂಡಿ, ಕಾಳಿ ಎಂಬ ಅವತಾರದೊಂದಿಗೆ ದೇವತೆಗಳು ಹೆಣ್ಣಿನ ಸ್ವರೂಪದಲ್ಲಿವೆ. ಹೀಗಾಗಿ ಹೆಣ್ಣನ್ನು ಪೂಜನೀಯ ಭಾವದಿಂದ ನೋಡುವ, ಗೌರವಿಸುವ ಹಾಗೂ ಸತ್ಕಾರಿಸುವ ಸಂಸ್ಕೃತಿ ಇದೆ ಎಂದರು.
ಹೆಣ್ಣು ಕೇವಲ ಮನೆಗೆ ಸೀಮಿತರಾಗದೇ, ರಾಜಕೀಯ ರಂಗದಲ್ಲೂ ಛಾಪು ಮೂಡಿಸಿದ್ದಾರೆ. ಈ ಮೂಲಕ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ ಎಂದು ತಿಳಿಸಿದರು.ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಪುರುಷರಿಗಿಂತ ಮಹಿಳೆಯರು ಅತಿಹೆಚ್ಚು ಅರ್ಹತೆ, ತಿಳುವಳಿಕೆ ಹೊಂದಿರುತ್ತಾರೆ. ಕೀಳರಿಮೆ, ಹಿಂಜರಿಕೆ ತ್ಯಜಿಸಿ, ಆತ್ಮವಿಶ್ವಾಸದಿಂದ ಇಂದಿರಾಗಾಂಧಿ ಪ್ರಧಾನಿಯಾಗಿದ್ದರು. ಮತ್ತೋರ್ವರು ದೇಶದ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಅನೇಕ ವರ್ಷಗಳಿಂದ ಹೆಣ್ಣನ್ನು ಭ್ರೂಣದಲ್ಲಿ ಪತ್ತೆಹಚ್ಚಿ ನಶಿಸುವಂಥ ಕೆಲಸವಾಗುತ್ತಿತ್ತು. ಇದೀಗ ಹೆಣ್ಣು ಮಕ್ಕಳೆಂದರೆ ಅತ್ಯಂತ ಸಂಭ್ರಮದಿಂದ ಹರ್ಷಿಸುತ್ತಾರೆ. ಸಮಾಜದಲ್ಲಿ ಗಂಡಿಗಿಂತ ಹೆಣ್ಣುಮಕ್ಕಳೇ ಪಾಲಕರನ್ನು ಕಾಳಜಿಯಿಂದ ಆರೈಕೆ ಮಾಡುತ್ತಿದ್ದಾರೆ ಎಂದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ಜೀವಕ್ಕೆ ಜೀವ ಕೊಡುವಂಥ ಶಕ್ತಿ ಹೆಣ್ಣಿಗಿದೆ. ಸಮಾಜದಲ್ಲಿ ಪುರುಷರು ಹೆಣ್ಣನ್ನು ಅವಲಂಬಿಸಿಯೇ ಜೀವನ ನಡೆಸುತ್ತಿ ದ್ದಾರೆ. ಅತ್ತೆ-ಮಾವ ಕೂಡಾ ಸೊಸೆಯನ್ನು ಹೆತ್ತ ಮಗಳಂತೆ ನೋಡಿಕೊಂಡರೆ ಆ ಕುಟುಂಬವು ಸುಖಿ ಕುಟುಂಬವಾಗಲಿದೆ ಎಂದು ತಿಳಿಸಿದರು.
ಕನಕಶ್ರೀ ಮಹಿಳಾ ಸಮಾಜದ ಅಧ್ಯಕ್ಷೆ ಶಾರದಾ ಮಾಸ್ತೇಗೌಡ ಮಾತನಾಡಿದರು. ಇದೇ ವೇಳೆ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ್ಧ ಕ್ರೀಡಾಕೂಟದಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.ಸಾಮಾಜಿಕ ಚಿಂತಕಿ ಕಾವ್ಯ ಸಂತೋಷ್, ಸಮಾಜದ ಕಾರ್ಯದರ್ಶಿ ವನಜಾಕ್ಷಿ ಗೋಪಾಲೇಗೌಡ, ಖಜಾಂಚಿ ಅನ್ನಪೂರ್ಣ ಗೋಪಾಲಕೃಷ್ಣ, ನಿರ್ದೇಶಕರಾದ ಗೀತಾ ಗಂಗಾಧರ್, ಗೀತಾ ಓಂಕಾರಮೂರ್ತಿ, ರೇಖಾತಮ್ಮಯ್ಯ, ಗಾಯತ್ರಿ ಮರೀಗೌಡ, ಪ್ರೇಮಮಲ್ಲೇಶ್, ರತ್ನಾ ರಾಜೇಗೌಡ, ಕಾವ್ಯ ಕೇಶವ, ಶೃತಿ ಹರೀಶ್‌ಬಾಬು, ಮಾಲತಿ ಕುಮಾರಸ್ವಾಮಿ, ಗಂಗಮ್ಮ ಹಾಜರಿದ್ದರು.