.ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ: ಡಿಸಿ ಭೂಬಾಲನ್

| Published : Mar 19 2024, 12:53 AM IST

ಸಾರಾಂಶ

ವಿಜಯಪುರ: ಮಾ.25 ರಿಂದ ಏ.6ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ವ್ಯವಸ್ಥಿತ ಹಾಗೂ ಸೂಸೂತ್ರ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು. ಸೋಮವಾರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 127 ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು, ಒಟ್ಟು 41,749 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಾ.25 ರಿಂದ ಏ.6ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ವ್ಯವಸ್ಥಿತ ಹಾಗೂ ಸೂಸೂತ್ರ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.

ಸೋಮವಾರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 127 ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು, ಒಟ್ಟು 41,749 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸುವ ಕಾರ್ಯವಾಗಬೇಕು. ಪರೀಕ್ಷೆಯ ವೇಳೆ ಯಾವುದೇ ಲೋಪವಾಗದಂತೆ ಹಾಗೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಹಂತದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನೊಳಗೊಂಡ 8 ಜಿಲ್ಲಾಮಟ್ಟದ ಜಾಗೃತದಳ, ತಾಲೂಕು ಮಟ್ಟದಲ್ಲಿ ಪ್ರತಿ ತಾಲೂಕಿಗೂ 3 ಜಾಗೃತದಳ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಮೊಬೈಲ್ ಪೋನ್ ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್‌ ಸೇಂಟರ್, ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ಪರೀಕ್ಷೆ ಅವಧಿಯಲ್ಲಿ ತೆಗೆಯಬಾರದು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ವಿದ್ಯುತ್ ಸೌಕರ್ಯ, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳ ಇರುವ ಬಗ್ಗೆ ಮುಂಚಿತವಾಗಿ ಪರಿಶೀಲನೆ ಮಾಡಬೇಕು. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್. ನಾಗೂರ, ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ವಿಜಯಪುರ ಡಯಟ್ ಸಂಸ್ಥೆಯ ಪ್ರಾಚಾರ್ಯೆ ಉಮಾದೇವಿ ಸೊನ್ನದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಪ್ರಾಚಾರ್ಯ ಜಗದೀಶ ಇತರರು ಇದ್ದರು.