ಸರ್ವೇ ನಂ. 28ರ ವ್ಯಾಪ್ತಿಯಲ್ಲಿ ಅವ್ಯವಹಾರ:ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ವಿರುದ್ಧ ಸರ್ಕಾರಿ ಭೂಕಬಳಿಕೆ ಆರೋಪ

| Published : Dec 05 2024, 12:30 AM IST

ಸರ್ವೇ ನಂ. 28ರ ವ್ಯಾಪ್ತಿಯಲ್ಲಿ ಅವ್ಯವಹಾರ:ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ವಿರುದ್ಧ ಸರ್ಕಾರಿ ಭೂಕಬಳಿಕೆ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸದರಿ ಜಮೀನು ಕಂದಾಯ ಇಲಾಖೆಗೆ ಸೇರಿದ ಭೂಮಿ ಎಂದು ಆರ್.ಟಿಸಿಯಲ್ಲಿ ನಮೂದಾಗಿದ್ದರೂ ನಗರಸಭೆ ಅಧಿಕಾರಿಗಳು ಉದ್ದಿಮೆ ನಡೆಸಲು ಪರವಾನಗಿಯನ್ನು 2024ರ ಜ.1ರಂದು ನೀಡುವ ಮೂಲಕ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಕಟ್ಟಡ ಪರವಾನಗಿ ನೀಡಿಲ್ಲವೆಂದು ಮಾಹಿತಿ ಹಕ್ಕು ಕಾಯ್ದೆಯಡಿ ನಗರಸಭೆ ಉತ್ತರ ನೀಡಿದೆ. ಆದರೆ ಅಲ್ಲಿ ಬೃಹತ್ ಕಟ್ಟಡ ನಿರ್ಮಾಣಗೊಂಡಿದೆ.

ಕನ್ನಡಪ್ರಭ ವಾರ್ತೆ ಹುಣಸೂರುಪಟ್ಟಣದ ದೊಡ್ಡ ಹುಣಸೂರು ಸರ್ವೇ ನಂ. 28ರ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿಯ ಕೆಲ ಭಾಗವನ್ನು ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರ ನಾದಿನಿಗೆ ಸ್ವಿಮ್ಮಿಂಗ್ ಪೂಲ್ ನಿರ್ಮಾಣಕ್ಕೆ ಬಾಡಿಗೆ ನೀಡುವ ಮೂಲಕ ಅಕ್ರಮ ವ್ಯವಹಾರ ನಡೆದಿದ್ದು, ಹುಣಸೂರಿನ ಈ ಭೂ ಅಕ್ರಮ ಪ್ರಕರಣದ ವಿರುದ್ಧ ಜಿಲ್ಲಾಡಳಿತ ಕ್ರಮವಹಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಒತ್ತಾಯಿಸಿದರು.ಸದರಿ ಸರ್ವೇ ನಂಬರಿನಲ್ಲಿ ಒಟ್ಟು 7.10 ಎಕರೆ ಭೂಮಿ ಇದ್ದು, ಈ ಪೈಕಿ 3 ಎಕರೆ ಭೂಮಿ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಮಾಲೀಕತ್ವದಲ್ಲಿರುವುದು ನಿಜ. ಆದರೆ ಮಿಕ್ಕ 4.10 ಎಕರೆ ಭೂಮಿ ಬಿ. ಖರಾಬು ಎಂದು ಪಹಣಿಯಲ್ಲಿ ಸ್ಪಷ್ಟವಾಗಿ ನಮೂದಾಗಿದೆ. ಹೀಗಿದ್ದರೂ ಕೊಡಗು ಕಾಫಿ ಬೆಳೆಗಾರರ ಸಂಘ ಮತ್ತು ಮಾಜಿ ಶಾಸಕರ ಪ್ರಭಾವದಿಂದ ಒಟ್ಟು 30,540 ಚದರ ಅಡಿ ಭೂಮಿಯನ್ನು ಮಾಸಿಕ 36,038 ರು. ಬಾಡಿಗೆಗೆ ಕರಾರು ಒಪ್ಪಂದವನ್ನು 2023ರ ನ. 10 ರಂದು ಮಾಜಿ ಶಾಸಕರ ನಾದಿನಿ ಡಾ. ಪುಷ್ಪ ಅಮರನಾಥ್ ಅವರ ಮಾಲೀಕತ್ವದಡಿ ಸಂಭ್ರಮ ಆಡ್ಸ್ ಅಂಡ್ ಈವೆಂಟ್ಸ್ ಸಂಸ್ಥೆಯಡಿ ಮಾಡಿಕೊಳ್ಳಲಾಗಿದೆ.ಇಲ್ಲಿ ಕೊಡಗು ಕಾಫಿ ಸಂಸ್ಥೆಯು ಭೂಮಿಯ ಒಡೆಯನಲ್ಲ. ಹಾಗಿರುವಾಗ ಅವರು ಒಪ್ಪಂದ ಪತ್ರ ಮಾಡಿಕೊಂಡಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ, ಇದು ಸರ್ಕಾರಿ ಭೂಮಿಯ ಕಬಳಿಕೆ ಮತ್ತು ಅಕ್ರಮವೆಂದು ದೂರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಅಕ್ರಮಗಳ ದಾಖಲೆಗಳನ್ನು ಬಿಡುಗಡೆಗೊಳಿಸಿದರು.ಇಷ್ಟೆಲ್ಲ ಅಕ್ರಮಗಳನ್ನು ಮಾಡಿರುವ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ 6 ತಿಂಗಳ ಹಿಂದೆ ಹುಣಸೂರು ಉಪವಿಭಾಗ ವ್ಯಾಪ್ತಿಯ ಬಡಜನರ ಅನುಕೂಲಕ್ಕಾಗಿ ನಿರ್ಮಾಣಗೊಂಡಿದ್ದ ಕಾವೇರಿ ಆಸ್ಪತ್ರೆಯ ಆರಂಭಕ್ಕೆ ಹಲವಾರು ಬಾರಿ ಇಲ್ಲಸಲ್ಲದ ಕಾರಣವೊಡ್ಡಿ ಕಿರುಕುಳ ನೀಡಿದ್ದರು. ಉದ್ಘಾಟನೆಗೆ ಅಡಚಣೆ ಉಂಟು ಮಾಡಿದ್ದರು. ಇದೀಗ ಇವರ ಬಣ್ಣ ಬಯಲಾಗಿದೆ.ಏ ಮಂಜುನಾಥ್ ನೀನು ಹುಣಸೂರಿಗೆ ಮಾಲೀಕನಲ್ಲ, ಬದಲಾಗಿ ನಮ್ಮಂತೆಯೇ ಸೇವಕ, ಮಾಲೀಕರಂತೆ ಮಾತಾಡಬಾರದು. ಎಲ್ಲ ಜಾತಿಯವರಿಗೆ ನೀನು ಕಿರುಕುಳ ನೀಡುತ್ತಿದ್ದೀಯ. ನಿನ್ನನ್ನು ಸತತವಾಗಿ ಗೆಲ್ಲಿಸಿದ ಕುರುಬ ಮತ್ತು ನಾಯಕ ಸಮುದಾಯ ಸೇರಿದಂತೆ ಎಲ್ಲರಿಗೂ ಕಿರುಕುಳ ನೀಡುತ್ತಿದ್ದೀಯ. ನಾನು ಸಿದ್ದರಾಮಯ್ಯನ ಆಪ್ತ ಎನ್ನುತ್ತಿಯ. ಬಹಳ ದಿನ ಇದು ನಡೆಯೋಲ್ಲ ಮಂಜುನಾಥ್ ಎಂದು ತರಾಟೆಗೆ ತೆಗೆದುಕೊಂಡು, ಈ ಜಾಗ ಕೂಡಲೇ ಕ್ಲಿಯರ್ ಆಗುವ ಕುರಿತು ಜಿಲ್ಲಾಧಿಕಾರಿ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.ನಗರಸಭಾ ಸದಸ್ಯ ಸತೀಶ್ ಕುಮಾರ್ ಮಾತನಾಡಿ, ಸದರಿ ಜಮೀನು ಕಂದಾಯ ಇಲಾಖೆಗೆ ಸೇರಿದ ಭೂಮಿ ಎಂದು ಆರ್.ಟಿಸಿಯಲ್ಲಿ ನಮೂದಾಗಿದ್ದರೂ ನಗರಸಭೆ ಅಧಿಕಾರಿಗಳು ಉದ್ದಿಮೆ ನಡೆಸಲು ಪರವಾನಗಿಯನ್ನು 2024ರ ಜ.1ರಂದು ನೀಡುವ ಮೂಲಕ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಕಟ್ಟಡ ಪರವಾನಗಿ ನೀಡಿಲ್ಲವೆಂದು ಮಾಹಿತಿ ಹಕ್ಕು ಕಾಯ್ದೆಯಡಿ ನಗರಸಭೆ ಉತ್ತರ ನೀಡಿದೆ. ಆದರೆ ಅಲ್ಲಿ ಬೃಹತ್ ಕಟ್ಟಡ ನಿರ್ಮಾಣಗೊಂಡಿದೆ. ಪರವಾನಗಿ ಪಡೆಯಲು ಬೇರೆ ಕಟ್ಟಡದ ಕಂದಾಯ ರಸೀತಿಯನ್ನು ಅಕ್ರಮವಾಗಿ ನೀಡಿ ಮೋಸ ಮಾಡಿದ್ದಾರೆ. ಅಂತೆಯೇ ಮಾಜಿ ಶಾಸಕರ ತಂದೆಯ ಹೆಸರಿನಲ್ಲಿರುವ ಪವನ್ ಜಲ್ ಕಾರ್ಖಾನೆ ಕೂಡ ವಸತಿ ಉದ್ದೇಶಕ್ಕೆ ಬಳಸುವ ಜಾಗವೆಂದು ನಮೂದಾಗಿದ್ದರೂ ಕಾರ್ಖಾನೆ ನಡೆಸಲಾಗುತ್ತಿದೆ. ಇದೇ ರೀತಿ ಕಾನೂನಿನ ಸ್ಪಷ್ಟ ಉಲ್ಲಂಘನೆ ಅವ್ಯಹತವಾಗಿ ನಡೆದಿದೆ ಎಂದು ಅವರು ಆರೋಪಿಸಿದರು.ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಅಕ್ರಮ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಅವರು ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮತ್ತು ಕಾನೂನಾತ್ಮಕ ಹೋರಾಟಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.ಮುಖಂಡರಾದ ಶಿವಶೇಖರ್, ಫಜಲ್ ವುಲ್ಲಾ, ಎಂ. ಶಿವಕುಮಾರ್, ಗಣೇಶ್, ಕುಮಾರಸ್ವಾಮಿ ಇದ್ದರು.