ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ವಳಲಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರು ಕಾಮಗಾರಿ ಹೆಸರಿನಲ್ಲಿ ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಹಣ ಮಂಜೂರು ಮಾಡಿಸಿಕೊಂಡಿದ್ದು, ಇದು ಸಾಬೀತಾಗಿದೆ. ಹಾಗಾಗಿ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಸದಸ್ಯರೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಗ್ರಾ.ಪಂ ಸದಸ್ಯ ವಳಲಹಳ್ಳಿ ಸುದರ್ಶನ್ ಹೇಳಿದರು.ತಾಲೂಕಿನ ವಳಲಹಳ್ಳಿ ಗ್ರಾ.ಪಂ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಳಲಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ಶೀಲ ಮಹೇಂದ್ರರವರು, ಪಿಡಿಒ ಧರ್ಮಪ್ಪರವರು ಕಾಮಗಾರಿಯೊಂದರ ಬಿಲ್‌ವೊಂದನ್ನು ಅಧ್ಯಕ್ಷರ ಪತಿ ಹಾಗೂ ಅವರ ತಮ್ಮನ ಹೆಸರಿನಲ್ಲಿ ಚೆಕ್ ನೀಡಿದ್ದಾರೆ. ಇದು ಬ್ಯಾಲೆನ್ಸ್ ಶೀಟ್‌ನಲ್ಲಿ ಬಂದಿದ್ದು ಹಾಗೂ ಪಾಸ್‌ಬುಕ್‌ನಲ್ಲಿ ಸಹ ಎಂಟ್ರಿ ಆಗಿದೆ. ಕೆಲಸ ಮಾಡಿದಕ್ಕೆ ಬೇರೆಯವರಿಗೆ ಹಾಕಿದ್ದರೆ ನಾವು ಸುಮ್ಮನಾಗುತ್ತಿದ್ದೆವು. ಆದರೆ ನೇರವಾಗಿ ಅಧ್ಯಕ್ಷರ ಕುಟುಂಬದವರ ಖಾತೆಗೆ ಹಾಕಿರುವುದು ಸರಿಯಲ್ಲ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಅಧ್ಯಕ್ಷರಾದ ಶೀಲ ಮಹೇಂದ್ರರವರಿಗೆ ರಾಜೀನಾಮೆ ನೀಡಿ ಆರೋಪದಿಂದ ಹೊರಬರುವಂತೆ ಹಾಗೂ ಒಂದು ವೇಳೆ ಆರೋಪ ಸಾಬೀತಾಗದಿದಲ್ಲಿ ಪುನಃ ಅಧಿಕಾರದಲ್ಲಿ ಮುಂದುವರಿಯಲು ಹೇಳಿದ್ದೆವು. ಆ ಸಂದರ್ಭದಲ್ಲಿ ರಾಜೀನಾಮೆ ನೀಡಲು ಒಪ್ಪಿಕೊಂಡ ಅಧ್ಯಕ್ಷರು ಇದೀಗ ಸುಮಾರು ೨೦ ದಿನ ಆದರೂ ರಾಜೀನಾಮೆ ನೀಡಿಲ್ಲ. ಇದರಿಂದ ಗ್ರಾ.ಪಂಯಲ್ಲಿ ಗ್ರಾಮಸಭೆಗಳು ನಡೆಯದೆ ಅಭಿವೃದ್ಧಿ ಕಾರ್ಯಗಳು ನಡೆಯದಂತಾಗಿದೆ. ಅಧ್ಯಕ್ಷರ ಈ ನಡವಳಿಕೆಯಿಂದ ನಮಗೆ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಸಾರ್ವಜನಿಕರಿಗೆ ಉತ್ತರ ಕೊಡಲು ಮುಜುಗರ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನೊಂದು ವಾರದ ಒಳಗೆ ಅಧ್ಯಕ್ಷರು ರಾಜೀನಾಮೆ ಕೊಡದಿದ್ದಲ್ಲಿ ನಾವೇ ರಾಜೀನಾಮೆ ಕೊಡುತ್ತೇವೆ ಎಂದರು.
ಗ್ರಾ.ಪಂ ಸದಸ್ಯ ಆನಂದ್ ಮಾತನಾಡಿ, ಗ್ರಾ.ಪಂ ಸಮಸ್ಯೆ ಏನೆಂದರೆ, ಕಳೆದ ಬಾರಿ ಗ್ರಾಮ ಸಭೆ ಮಾಡಿದಾಗ ಗ್ರಾಮ ಪಂಚಾಯತಿಯ ನಿಧಿಯೊಂದು ದುರ್ಬಳಕೆಯಾಗಿದೆ ಎಂದು ಗ್ರಾಮಸ್ಥರು ಅಧ್ಯಕ್ಷರ ಮೇಲೆ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮ ಸಭೆ ಮಾಡಲು ಅವಕಾಶ ನೀಡಿರಲಿಲ್ಲ. ಆದ್ದರಿಂದ ಎಲ್ಲಾ ನಾಯಕರ ಸಮ್ಮುಖದಲ್ಲಿ ಅಧ್ಯಕ್ಷರಿಗೆ ರಾಜೀನಾಮೆ ನೀಡಲು ಒತ್ತಾಯಿಸಿದ್ದೆವು. ಗ್ರಾ.ಪಂಯಲ್ಲಿ ನರೇಗಾ, ೧೫ನೇ ಹಣಕಾಸು ಕ್ರಿಯಾ ಯೋಜನೆ, ಬೀದಿದೀಪ ಅಳವಡಿಕೆ ಸೇರಿದಂತೆ ಹಲವು ಕಾಮಗಾರಿಗಳು ಬಾಕಿ ಉಂಟಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಅಧ್ಯಕ್ಷರು ರಾಜೀನಾಮೆ ನೀಡಿ ಗ್ರಾ.ಪಂ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.ಗ್ರಾ.ಪಂ ಉಪಾಧ್ಯಕ್ಷೆ ರೂಪ ಮಾತನಾಡಿ, ಅಧ್ಯಕ್ಷರಿಂದ ನಮಗೆ ತೊಂದರೆಯಾಗುತ್ತಿದೆ. ಗ್ರಾಮ ಪಂಚಾಯತ್‌ನಲ್ಲಿ ಕೆಲಸಗಳು ಮುಂದಕ್ಕೆ ಹೋಗಿದ್ದು, ಇದರಿಂದ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅಧ್ಯಕ್ಷರು ರಾಜೀನಾಮೆ ನೀಡುವ ಮುಖಾಂತರ ನಮಗೆ ಸಹಕರಿಸಲಿ ಎಂದರು. ಈ ಸಂದರ್ಭದಲ್ಲಿ ವಳಲಹಳ್ಳಿ ಗ್ರಾ.ಪಂ ಮಾಜಿ ಅಧಕ್ಷ ಹಾಗೂ ಸದಸ್ಯ ರೇಣುಕಾ, ಸದಸ್ಯರುಗಳಾದ ಸುಧಾಕರ್, ಶೀಲಾ, ಭವಾನಿ, ಶಾರದಾ ಹಾಜರಿದ್ದರು.