ಸಾರ್ವಜನಿಕರನ್ನು ಕಚೇರಿಗಳ ಮೆಟ್ಟಿಲೇರಿಸಿ ಅಲೆದಾಡಿಸುವುದು ಅಧಿಕಾರಿಗಳ ಅಸಡ್ಡೆ ಮತ್ತು ಅಧಿಕಾರ ದುರುಪಯೋಗದ ಪರಾಕಾಷ್ಠೆ ಎಂದು ಅವರು ಆರೋಪಿಸಿದರು. ಇದೇ ವೇಳೆ ಸಕಲೇಶಪುರ ಕಂದಾಯ ಅಧಿಕಾರಿ ಪ್ರಕಾಶ್ ಅವರು ಖಾತೆ ಬದಲಾವಣೆ ಮಾಡಿಕೊಡಲು ಒಂದು ಗುಂಟೆಗೆ ಒಂದು ಲಕ್ಷ ರು. ಗಳಂತೆ ೨೯ ಗುಂಟೆಗೆ ಒಟ್ಟು ೨೯ ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಲಂಚ ನೀಡಲು ನಿರಾಕರಿಸಿದ ಕಾರಣದಿಂದಲೇ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲಾಗುತ್ತಿದೆ. ಇಂತಹ ಭ್ರಷ್ಟ ಅಧಿಕಾರಿಗಳಿಂದ ಸಾಮಾನ್ಯ ನಾಗರಿಕರಿಗೆ ನ್ಯಾಯ ಸಿಗದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರೂ ಖಾತೆ ಬದಲಾವಣೆ ಮಾಡಿಕೊಡದೆ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಸಕಲೇಶಪುರದ ಸಾಮಾಜಿಕ ಹೋರಾಟಗಾರ ಅಭಿಜ್ಞಾನ್ ಮತ್ತು ಪ್ರೀತಂ ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ದಾಖಲೆಗಳನ್ನು ಎಸೆದು ವಿನೂತನವಾಗಿ ಧರಣಿ ನಡೆಸಿದರು. ಕಂದಾಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರವನ್ನು ಖಂಡಿಸಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ಸಕಲೇಶಪುರ ಸ್ಟೇಡಿಯಂ ವ್ಯಾಪ್ತಿಯ ಪುರಸಭೆ ಸರ್ವೆ ನಂ. ೧೮೩೨ ಸಂಬಂಧ ಈಗಾಗಲೇ ಖಾತೆ ಅಸ್ತಿತ್ವದಲ್ಲಿದ್ದು, ನ್ಯಾಯಾಲಯದ ಆದೇಶದಂತೆ ಖಾತೆ ಬದಲಾವಣೆ ಮಾಡಿಕೊಡಬೇಕಾಗಿದೆ. ಆದರೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅರ್ಜಿ, ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರೀತಂ ದೂರಿದರು. ಕೋರ್ಟ್ ಆದೇಶ ಇದ್ದರೂ ಸಾರ್ವಜನಿಕರನ್ನು ಕಚೇರಿಗಳ ಮೆಟ್ಟಿಲೇರಿಸಿ ಅಲೆದಾಡಿಸುವುದು ಅಧಿಕಾರಿಗಳ ಅಸಡ್ಡೆ ಮತ್ತು ಅಧಿಕಾರ ದುರುಪಯೋಗದ ಪರಾಕಾಷ್ಠೆ ಎಂದು ಅವರು ಆರೋಪಿಸಿದರು. ಇದೇ ವೇಳೆ ಸಕಲೇಶಪುರ ಕಂದಾಯ ಅಧಿಕಾರಿ ಪ್ರಕಾಶ್ ಅವರು ಖಾತೆ ಬದಲಾವಣೆ ಮಾಡಿಕೊಡಲು ಒಂದು ಗುಂಟೆಗೆ ಒಂದು ಲಕ್ಷ ರು. ಗಳಂತೆ ೨೯ ಗುಂಟೆಗೆ ಒಟ್ಟು ೨೯ ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಲಂಚ ನೀಡಲು ನಿರಾಕರಿಸಿದ ಕಾರಣದಿಂದಲೇ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲಾಗುತ್ತಿದೆ. ಇಂತಹ ಭ್ರಷ್ಟ ಅಧಿಕಾರಿಗಳಿಂದ ಸಾಮಾನ್ಯ ನಾಗರಿಕರಿಗೆ ನ್ಯಾಯ ಸಿಗದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಾಲಯದ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ. ಕಾನೂನು ಪಾಲಿಸಬೇಕಾದ ಅಧಿಕಾರಿಗಳೇ ಕಾನೂನಿಗೆ ಬೆಲೆ ನೀಡುತ್ತಿಲ್ಲ. ಇದು ಕೇವಲ ನನ್ನ ಸಮಸ್ಯೆಯಲ್ಲ, ಅನೇಕ ರೈತರು ಮತ್ತು ನಾಗರಿಕರು ಇದೇ ರೀತಿ ಕಚೇರಿಗಳಲ್ಲಿ ಅಲೆದಾಡುತ್ತಿದ್ದಾರೆ ಎಂದು ಹೇಳಿದರು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳು ತಕ್ಷಣವೇ ಹಸ್ತಕ್ಷೇಪ ಮಾಡಿ, ಲಂಚ ಬೇಡಿಕೆ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿ ಪ್ರಕಾಶ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ನ್ಯಾಯಾಲಯದ ಆದೇಶದಂತೆ ಕೂಡಲೇ ಖಾತೆ ಬದಲಾವಣೆ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರೀತಂ ಎಚ್ಚರಿಕೆ ನೀಡಿದರು.