ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಸಮಾಜದಲ್ಲಿ ಅತ್ಯಂತ ಮಹತ್ವವಾದ ಜತೆಗೆ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಪಾತ್ರ ಶ್ರೇಷ್ಠ ಹಾಗೂ ಗೌರವಯುತವಾಗಿದೆ. ಇಂತಹ ಶಿಕ್ಷಕರನ್ನು ಪೂಜ್ಯ ಭಾವನೆಯಲ್ಲಿ ಗೌರವಯುತವಾಗಿ ನಡೆಸಿಕೊಳ್ಳುವುದರ ಜೊತೆಗೆ ಅವರಿಗೆ ಸಹಾಯ ಹಾಗು ಸಹಕಾರ ನೀಡಲು ಸದಾ ಸಿದ್ಧನಿರುತ್ತೇನೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಸಂತಸದಿಂದ ನುಡಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಶಿಕ್ಷಕರ ಸಂಘ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಮತ್ತು ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕಿಯರು ಶಾಲೆಗೆ ಬರುವ ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ತಿಳಿದು ವಿನಯದಿಂದ ವಿದ್ಯೆ ಹಾಗೂ ಸಂಸ್ಕಾರ ಕಲಿಸುತ್ತಾರೆ ಹಾಗೂ ವಿದ್ಯಾರ್ಥಿಗಳೂ ಶಿಕ್ಷಕರಿಗೆ ತಮ್ಮ ತಂದೆ, ತಾಯಿಯಷ್ಟು ಗೌರವ ನೀಡುತ್ತಾರೆ, ಇಂತಹ ಗೌರವವನ್ನು ಸದಾ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು. ೨೦೧೧ರ ನಂತರ ಮತ್ತೆ ಜನಗಣತಿ ಪ್ರಾರಂಭ ಆಗುತ್ತಿದೆ ಮತ್ತು ಶಿಕ್ಷಕರು ಜನಗಣತಿ ಕಾರ್ಯವನ್ನು ಅತ್ಯಂತ ಸಮರ್ಥವಾಗಿ, ಸರಿಯಾಗಿ ಮಾಡುತ್ತಾರೆ ಎನ್ನುವ ಭರವಸೆಯಿಂದ ದೇಶಾದ್ಯಂತ ಶಿಕ್ಷಕರಿಗೇ ಈ ಕಾರ್ಯವನ್ನು ವಹಿಸಿದ್ದಾರೆ. ಇದೊಂದು ದೇಶ ಸೇವೆ ಎಂದು ತಿಳಿದು ಜನಗಣತಿ ಕಾರ್ಯದಲ್ಲಿ ಅತ್ಯಂತ ಪ್ರೀತಿಯಿಂದ ಭಾಗವಹಿಸಿ. ಜನಗಣತಿ ಕಾರ್ಯಕ್ಕೆ ನಿಯೋಜಿಸುವಾಗ ಸಮರ್ಥ ಶಿಕ್ಷಕರನ್ನು ನಿಯೋಜಿಸಿ ಎಂದು ತಹಸೀಲ್ದಾರ್ ಅವರಿಗೆ ತಿಳಿಸಿದ್ದೇನೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಮಾತನಾಡಿ ಸರ್ಕಾರಿ ಶಾಲೆಗಳನ್ನು ಉಳಿಸಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಶಿಕ್ಷಕರು ಸರ್ಕಾರಿ ಶಾಲೆಗಳನ್ನು ಉಳಿಸಲು ತೆಗೆದು ಕೊಳ್ಳಬೇಕಾದ ಎಲ್ಲಾ ಅಗತ್ಯ ಹಾಗೂ ಮಾನವೀಯ ಕ್ರಮಗಳನ್ನು ತೆಗೆದುಕೊಳ್ಳಿ. ಸರ್ಕಾರಿ ಶಾಲೆಗಳಲ್ಲೂ ಇಂಗ್ಲೀಷ್ ಕಲಿಸುವುದು ಕಡ್ಡಾಯ ಆಗಿದೆ. ಆದ್ದರಿಂದ ಶಿಕ್ಷಕರೂ ಇನ್ನೂ ಹೆಚ್ಚಿನ ಇಂಗ್ಲೀಷ್ ಜ್ಞಾನ ಬೆಳೆಸಿಕೊಳ್ಳಿ. ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯ, ಸಹಕಾರ, ಜ್ಞಾನದ ಬಗ್ಗೆ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೆ ವಿವರಿಸಿ. ದಾಖಲಾತಿ ಹೆಚ್ಚಿಸುವ ಜತೆಗೆ ಸರ್ಕಾರಿ ಶಾಲೆಗಳನ್ನು ಅತ್ಯುತ್ತಮವಾದ ಶಾಲೆಗಳನ್ನಾಗಿಸಿ ಎಂದರು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ ಶಿಕ್ಷಕರ ಸಂಘದವತಿಯಿಂದ ಜನಗಣತಿಗೆ ವಿನಾಯಿತಿ ನೀಡಿ ಎಂದು ವಿನಂತಿಸಿದ್ದೀರಿ. ಸರ್ಕಾರ ಜನಗಣತಿಯನ್ನು ಶಿಕ್ಷಕರಿಂದಲೇ ಮಾಡಿಸಬೇಕು ಎಂದು ನಿರ್ಧಾರ ಮಾಡಿರುವ ಕಾರಣ ಶಿಕ್ಷಕರೆಲ್ಲಾ ಮಾನಸಿಕವಾಗಿ ಸಿದ್ದರಾಗಿ. ಇತ್ತೀಚಿನ ದಿನಗಳಲ್ಲಿ ಬಿ.ಪಿ., ಶುಗರ್ ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ. ತೀರ ಅನಿವಾರ್ಯವಾದ ಸಂದರ್ಭದಲ್ಲಿ ಅತ್ಯಗತ್ಯವಾದವರಿಗೆ ಜಿಲ್ಲಾಧಿಕಾರಿಗಳ ಅನುಮತಿ ಕೊಡಲು ಮಾತ್ರ ಸಾಧ್ಯ. ಆದ್ದರಿಂದ ಎಲ್ಲರೂ ಜನಗಣತಿ ಕಾರ್ಯವನ್ನು ಚೆನ್ನಾಗಿ ಮಾಡಿ ಎಂದು ವಿನಂತಿಸಿದರು.ಉಷಾ ನರಸಿಂಹನ್ ಪ್ರಧಾನ ಭಾಷಣ ಮಾಡಿ ಶಿಕ್ಷಕ ವೃತ್ತಿಗೆ ಇರುವ ಮಾನ್ಯತೆ ಬೇರಾವ ವೃತ್ತಿಗೂ ಇಲ್ಲ, ಇಂತಹ ವೃತ್ತಿಯಲ್ಲಿ ಇರುವ ನಾವೇ ಧನ್ಯ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಪ್ರಸ್ತಾವಿಕ ನುಡಿಗಳನ್ನಾಡಿದರು. ಸಾವಿತ್ರಿ ಬಾ ಫುಲೆ ಶಿಕ್ಷಕಿರ ಸಂಘದ ಅಧ್ಯಕ್ಷೆ ಮಮತಾ, ಕಾರ್ಯದರ್ಶಿ ಭ್ರಮರಾಂಭ, ಡಯಟ್ನ ಹಿರಿಯ ಉಪನ್ಯಾಸಕಿ ಗೀತಾ, ಅಕ್ಷರ ದಾಸೋಹ ಅಧಿಕಾರಿ ರಾಮಚಂದ್ರಪ್ಪ, ಕ್ರೀಡಾ ಶಿಕ್ಷಣ ಸಂಯೋಜಕ ಸುಜತ್ ಅಲಿ ಭಾಗವಹಿಸಿದ್ದರು.
ಬಾಕ್ಸ್:: ಆತಂಕ ಸೃಷ್ಠಿಸಿದ ಫ್ಲವರ್ ಪಾಟ್ :
ಕಾರ್ಯಕ್ರಮ ಉದ್ಘಾಟಿಸುವಾಗ ಶಿಕ್ಷಕರೊಬ್ಬರು ಬಣ್ಣದ ಪೇಪರ್‌ಗಳನ್ನು ಸಿಡಿಸುವ ಪಾಟ್ ಹತ್ತಿಸಿದಾಗ ಬಣ್ಣದ ಪೇಪರ್‌ಗಳು ಮೇಲಕ್ಕೆ ಚಿಮ್ಮಿ ಆ ಪಾಟ್ ಡಂ ಎಂದು ಜೋರು ಶಬ್ದ ಮಾಡಿ ಸಿಡಿದು ಹೊಗೆ ಆವರಿಸಿದ್ದರಿಂದ ಕೆಲಕ್ಷಣ ವೇದಿಕೆಯಲ್ಲಿದ್ದ ಗಣ್ಯರು ಗಾಬರಿಗೊಂಡರು. ಹಿಂದೊಮ್ಮೆ ಇದೇ ರೀತಿ ಆಗಿತ್ತು. ಆಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಂತದನ್ನೆಲ್ಲಾ ಹತ್ತಿಸಬೇಡಿ ಎಂದಿದ್ದರೂ ಮತ್ತೆ ಹತ್ತಿಸಿ ಆತಂಕ ಸೃಷ್ಟಿಸಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಯಿತು.