ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಾರದು. ಕೊರತೆ ಉಂಟಾಗಬಹುದಾದ ಗ್ರಾಮಗಳ ಪಟ್ಟಿ ಮುಂಚಿತವಾಗಿ ಸಿದ್ಧಪಡಿಸಿ, ಅಲ್ಲಿ ನೀರಿನ ಪೂರೈಕೆಗಾಗಿ ಖಾಸಗಿ ಕೊಳವೆಬಾವಿ ಸೇರಿದಂತೆ ಲಭ್ಯ ಜಲಮೂಲಗಳನ್ನು ಗುರುತಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಬರ ನಿರ್ವಹಣೆ ಹಾಗೂ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುಂಜಾಗ್ರತಾ ಕ್ರಮಗಳನ್ಙು ತೆಗೆದುಕೊಳ್ಳಬೇಕು. ಗ್ರಾಮೀಣ ಪ್ರದೇಶಗಳು ಮಾತ್ರವಲ್ಲದೇ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಕೂಡ ಇದೇ ರೀತಿ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಕಂಡುಬಂದಿಲ್ಲ; ಆದಾಗ್ಯೂ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಸಮಸ್ಯೆ ಉದ್ಭವಿಸಿದರೆ ಅದನ್ನು ಸಮರ್ಪಕವಾಗಿ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ ಕಲಾದಗಿ ವಿವರಿಸಿದರು. ಬರಪೀಡಿತ ತಾಲೂಕುಗಳಿಗೆ ಈಗಾಗಲೇ ತಲಾ ₹ 25 ಲಕ್ಷ ಬಿಡುಗಡೆ ಮಾಡಲಾಗಿದೆ. ಇದಲ್ಲದೇ ಇದಕ್ಕೂ ಮುಂಚೆ ಬೆಳಗಾವಿ ಜಿಲ್ಲೆಗೆ ₹2 ಕೋಟಿ ಕೂಡ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.ಬೆಳೆಹಾನಿ- ರೈತರ ಖಾತೆಗೆ ₹ 60.40 ಕೋಟಿ ಪರಿಹಾರ ಜಮೆ: ಬರಗಾಲದ ಬೆಳೆಹಾನಿ ಪರಿಹಾರಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ 326366 ರೈತರಿಗೆ ₹ 60.40 ಕೋಟಿ ಪರಿಹಾರ ಡಿಬಿಟಿ ಮೂಲಕ ಜಮೆ ಮಾಡಲಾಗಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ನೋಂದಣಿ ಕಾರ್ಯ ಆದಷ್ಟು ಬೇಗನೇ ಪೂರ್ಣಗೊಳಿಸಿ ಬೆಳೆಹಾನಿ ಪರಿಹಾರ ಸಮರ್ಪಕವಾಗಿ ವಿತರಿಸಬೇಕು. ಜಿಲ್ಲೆಯಲ್ಲಿ ಬರಗಾಲದಿಂದ ಬೆಳೆಹಾನಿಯಾಗಿರುವುದಕ್ಕೆ 4.65 ಲಕ್ಷ ರೈತರ ಪೈಕಿ ಇದುವರೆಗೆ 3.24 ಲಕ್ಷ ಜನರಿಗೆ ಪರಿಹಾರ ವಿತರಿಸಲಾಗಿದೆ. ಮುಂದಿನ ಹಂತದಲ್ಲಿ ಇನ್ನುಳಿದ ರೈತರಿಗೆ ಪರಿಹಾರ ವಿತರಣೆಗೆ ಕೂಡ ತ್ವರಿತವಾಗಿ ಅನುಮೋದನೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ಶೇ.15 ರಷ್ಟು ಮಾತ್ರ ನರೇಗಾ ಕಾರ್ಮಿಕರು ನೂರು ದಿನಗಳ ಉದ್ಯೋಗ ಪಡೆದಿದ್ದಾರೆ. ಅದೇ ರೀತಿ ಉಳಿದವರಿಗೂ ಕೆಲಸ ಒದಗಿಸಬೇಕು ಎಂದರು. ಗೃಹಲಕ್ಷ್ಮೀ ಯೋಜನೆಯಲ್ಲಿ ನೋಂದಾಯಿತ ಶೇ.೫ ರಷ್ಟು ಫಲಾನುಭವಿಗಳಿಗೆ ಇದುವರೆಗೆ ಹಣ ಜಮೆಯಾಗದಿರುವ ಬಗ್ಗೆ ವಿವರಣೆ ಕೇಳಿದ ಅವರು, ಕೆ.ವೈ.ಸಿ. ಪೂರ್ಣಗೊಳಿಸಿ ಹಣ ಜಮೆ ಮಾಡಬೇಕು ಎಂದು ಸೂಚನೆ ನೀಡಿದರು.ಜಿಲ್ಲಾಧಿಕಾರಿ ನಿತೇಶಪಾಟೀಲ ಮಾತನಾಡಿ, ಫಲಾನುಭವಿಗಳ ಹೆಸರು ಹಾಗೂ ಕ್ಷೇತ್ರಗಳ ಮಾಹಿತಿ ಹೊಂದಾಣಿಕೆ ಆಗದಿರುವುದರಿಂದ ತಾಂತ್ರಿಕ ಕಾರಣಗಳಿಂದ ಕೆಲವು ರೈತರಿಗೆ ಮಾತ್ರ ಇದುವರೆಗೆ ಪರಿಹಾರ ಮೊತ್ತ ಜಮೆಯಾಗಿರುವುದಿಲ್ಲ. ತಾಂತ್ರಿಕ ಸಮಸ್ಯೆ ಸರಿಪಡಿಸಿ ಆದಷ್ಟು ಬೇಗನೇ ಉಳಿದವರಿಗೂ ಪರಿಹಾರ ಜಮೆ ಮಾಡಲಾಗುವುದು. ₹72 ಸಾವಿರ ಮರಣ ಪ್ರಕರಣಗಳಿರುವುದರಿಂದ ಸ್ವಲ್ಪಮಟ್ಟಿಗೆ ತಡವಾಗಿದೆ ಎಂದರು.
ಸರ್ಕಾರ ಈಗಾಗಲೇ ಮೇವಿನ ಮಿನಿ ಕಿಟ್ ಗಳನ್ನು ವಿತರಿಸಿದೆ. ಅದೇ ರೀತಿ ಮೇವಿನ ಕೊರತೆ ನೀಗಿಸಲು ಹಾಲು ಒಕ್ಕೂಟಗಳು ಕೂಡ ಸ್ವಯಂಪ್ರೇರಿತರಾಗಿ ಮಿನಿ ಕಿಟ್ ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಹೊರ ಗುತ್ತಿಗೆ ಆಧಾರಲ್ಲಿ ತಜ್ಞವೈದ್ಯರು ಆಸಕ್ತಿ ತೋರಿಸುತ್ತಿಲ್ಲ; ಆದ್ದರಿಂದ ಕಾಯಂ ತಜ್ಞ ವೈದ್ಯರನ್ನು ನೇಮಿಸಿದರೆ ಅನುಕೂಲವಾಗುತ್ತದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.
ಪ್ರೊಬೇಷನರಿ ಐಎಎಸ್. ಅಧಿಕಾರಿ ಶುಭಂ ಶುಕ್ಲಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಸಯೀದಾ ಆಫ್ರಿನ್ ಬಾನು ಬಳ್ಳಾರಿ, ಉಪ ವಿಭಾಗಾಧಿಕಾರಿಗಳಾದ ಪ್ರಭಾವತಿ, ಶ್ರವಣ ನಾಯಕ, ಸಂಪಗಾವಿ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಕ್ಯಾಲೆಂಡರ್ ಬಿಡುಗಡೆ: ಇದೇ ಸಂದರ್ಭದಲ್ಲಿ ಜಿಲ್ಲಾ ಪಙಚಾಯಿತಿ ಜಲಜೀವನ್ ಮಿಷನ್ ವತಿಯಿಂದ ಹೊರತರಲಾದ ಕ್ಯಾಲೆಂಡರ್ ಅನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ಮತ್ತಿತರರು ಇದ್ದರು.