ಗಣತಿಗೆ ‘ಆ್ಯಪ್‌’ ಅಡ್ಡಿ: ಪರಿಹಾರಕ್ಕೆ ಶಿಕ್ಷಕರ ಪಟ್ಟು

| Published : Sep 24 2025, 01:00 AM IST

ಸಾರಾಂಶ

ಅ.7ರವರೆಗೆ ನಡೆಯಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಗಣತಿಯಲ್ಲಿ ಸಮೀಕ್ಷೆಗೆ ರೂಪಿಸಿದ ಆ್ಯಪ್‌ನಿಂದ ತಾಂತ್ರಿಕ ಸಮಸ್ಯೆಯಿಂದ ಒಂದು ಮನೆಯನ್ನೂ ಜಾತಿಗಣತಿ ಮಾಡಿಲ್ಲ, ಸರ್ವರ್ ಕೈಕೊಡುತ್ತಿದೆ. ಆಯಾ ಶಾಲೆಯಲ್ಲಿ ಕೆಲಸ ನಿರ್ವಸುತ್ತಿರುವ ಶಿಕ್ಷಕರನ್ನು ಬಿಟ್ಟು ಬೇರೆ ಬೇರೆ ಗ್ರಾಮಗಳಿಗೆ ನೇಮಕ ಮಾಡಲಾಗಿದೆ. ಬೇರೆ ಗ್ರಾಮಗಳಿಗೆ ತೆರಳಿದ ಶಿಕ್ಷಕರಿಗೆ ಮಾಹಿತಿ ನೀಡುವುದಿಲ್ಲ ಎನ್ನುತ್ತಿರುವ ಜನರು.

ಕನ್ನಡಪ್ರಭ ವಾರ್ತೆ ಜಗಳೂರು

ಅ.7ರವರೆಗೆ ನಡೆಯಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಗಣತಿಯಲ್ಲಿ ಸಮೀಕ್ಷೆಗೆ ರೂಪಿಸಿದ ಆ್ಯಪ್‌ನಿಂದ ತಾಂತ್ರಿಕ ಸಮಸ್ಯೆಯಿಂದ ಒಂದು ಮನೆಯನ್ನೂ ಜಾತಿಗಣತಿ ಮಾಡಿಲ್ಲ, ಸರ್ವರ್ ಕೈಕೊಡುತ್ತಿದೆ. ಆಯಾ ಶಾಲೆಯಲ್ಲಿ ಕೆಲಸ ನಿರ್ವಸುತ್ತಿರುವ ಶಿಕ್ಷಕರನ್ನು ಬಿಟ್ಟು ಬೇರೆ ಬೇರೆ ಗ್ರಾಮಗಳಿಗೆ ನೇಮಕ ಮಾಡಲಾಗಿದೆ. ಬೇರೆ ಗ್ರಾಮಗಳಿಗೆ ತೆರಳಿದ ಶಿಕ್ಷಕರಿಗೆ ಮಾಹಿತಿ ನೀಡುವುದಿಲ್ಲ ಎನ್ನುತ್ತಿರುವ ಜನರು.

ಇವಷ್ಟೂ ಜಗಳೂರು ತಾಲೂಕಿನಲ್ಲಿ ಮಂಗಳವಾರ ಆರಂಭವಾದ ಜಾತಿಗಣತಿಯಲ್ಲಿ ಕೇಳಿ ಬರುತ್ತಿರುವ ಸಮಸ್ಯೆಗಳು.

ಚಿಕ್ಕಮ್ಮನಹಟ್ಟಿ, ಉರ್ಲುಕಟ್ಟೆ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಸರ್ವರ್ ಸಿಗುತ್ತಿಲ್ಲ. ಹೀಗಾದರೆ ಹೇಗೆ ಸಮೀಕ್ಷೆ ಮಾಡಬೇಕು ಎಂದು ಶಿಕ್ಷಕರು ತಹಸೀಲ್ದಾರ್ ಸಯಿದ್ ಕಲೀಂ ಉಲ್ಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಮೂರ್ತಿ ಅವರಿಗೆ ಸಮಸ್ಯೆಗಳನ್ನು ಎಳೆ ಎಳೆಯಾಗಿ ಮುಂದೆ ಇಟ್ಟು, ಸಮಸ್ಯೆ ಬಗೆಹರಿಯುವವರೆಗೆ ಗಣತಿಗೆ ಹೋಗುವುದಿಲ್ಲವೆಂದು ಶಿಕ್ಷಕರು ಪಟ್ಟುಹಿಡಿದರು.

ಒಂದು ಹಂತದಲ್ಲಿ ತಾಲೂಕು ಕಚೇರಿಯಲ್ಲಿ ನಡೆದ ತುರ್ತು ಸಭೆಯಲ್ಲಿ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮತ್ತು ಶಿಕ್ಷಕರ ನಡುವೆ ಮಾತಿನ ಸಮರ ನಡೆಯಿತು.

ಬೆಳಿಗ್ಗೆಯಿಂದ ಆ್ಯಪ್ ಓಪನ್ ಆಗುತ್ತಿಲ್ಲ. ಹಳ್ಳಿಗಳಲ್ಲಿ ನೆಟ್ವರ್ಕ್ ಸಿಗುತ್ತಿಲ್ಲ. ಇದು ಕೇವಲ ತಾಲೂಕಿನ ಸಮಸ್ಯೆಯಲ್ಲ, ರಾಜ್ಯದೆಲ್ಲೆಡೆ ತೊಂದರೆ ಇದೆ. ಸರ್ಕಾರದ ಆದೇಶದಂತೆ ಕೆಲಸ ಮಾಡುವುದು ತಮ್ಮ ಕರ್ತವ್ಯವಾಗಿದೆ ಎಂದು ತಹಸೀಲ್ದಾರ್ ಸೈಯದ್ ಕಲೀಂ ಏರಿದ ಧ್ವನಿಯಲ್ಲಿ ಶಿಕ್ಷಕರಿಗೆ ತಾಕೀತು ಮಾಡಿದರು.

ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ನೂರಾರು ಶಿಕ್ಷಕರು ನೇರವಾಗಿ ಬಿಇಒ ಕಚೇರಿಗೆ ತೆರಳಿ ಸಮೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಬಿಇಒ ಹಾಲಮೂರ್ತಿ ಬಳಿ ಸಮಸ್ಯೆ ಹೇಳಿಕೊಂಡರು. ಅಲ್ಲಿಂದ ನೇರವಾಗಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.

ಜಗಳೂರು ತಾಲೂಕಿನಲ್ಲಿ ಜಾತಿಗಣತಿ ಸಮೀಕ್ಷೆಗೆ ೫೬೪ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಅದರಲ್ಲಿ ೪೧೨ ಗಣತಿದಾರರು, ೨೧ ಮೇಲ್ವಿಚಾರಕರು ಸೇರಿ ೪೩೩ ಶಿಕ್ಷಕರು ಸಮೀಕ್ಷೆ ಆರಂಭಿಸಿದ್ದರು.

ಕೊನೆಗೆ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರಿಗೆ ತಿಳಿಸಿದರು.

ಬಿಇಒ ಹಾಲಮೂರ್ತಿ, ಶಿಕ್ಷಕರಾದ ಹನುಮಂತೇಶ್, ಕೃಷ್ಣಪ್ಪ, ಜಿ.ಬಿ ನಾಗರಾಜ್, ಸತೀಶ್, ಶಿವಣ್ಣ, ಉಮೇಶ್, ಬಸವರಾಜ್, ಈರಪ್ಪ, ಉಲೇಪ್ಪ, ಶಕುಂತಲಮ್ಮ, ಓಂಕಾರಮ್ಮ, ಚಂದ್ರಕಲಾ, ಶರಣಪ್ಪ, ರೂಪ, ರಾಜು, ತಿಮ್ಮಣ್ಣ, ಓಂಕಾರಮ್ಮ, ಸುನೀತಾ, ನಾಗರಾಜ್, ತಿಪ್ಪೇಸ್ವಾಮಿ, ಗೌಡ ಮತ್ತಿತರು ಇದ್ದರು.