ಸಾರಾಂಶ
ಅಥಣಿ ಪಟ್ಟಣದ ಪ್ರಭಾ ಕ್ಲಿನಿಕ್ ವತಿಯಿಂದ ಪ್ರತಿ ವರ್ಷ ದಂತ ಚಿಕಿತ್ಸೆ ಉಚಿತ ಶಿಬಿರ ನಡೆಸಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ.
ಕನ್ನಡಪ್ರಭ ವಾರ್ತೆ ಅಥಣಿ
ಶಾಸಕ ಲಕ್ಷ್ಮಣ ಸವದಿ ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಸಾಧನೆಗಳ ಕುರಿತು ಕನ್ನಡಪ್ರಭದ ವಿಶೇಷ ಪುರವಣಿ ಚೆನ್ನಾಗಿ ಮೂಡಿ ಬಂದಿದೆ ಎಂದು ಸಮಾಜ ಸೇವಕ, ಉದ್ಯಮಿ ಶಿವಶಂಕರ ಹಂಜಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಶುಕ್ರವಾರ ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರ 64ನೇ ಹುಟ್ಟುಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ದಂತ ಚಿಕಿತ್ಸೆ ಉಚಿತ ಶಿಬಿರದಲ್ಲಿ ಕನ್ನಡಪ್ರಭ ದಿನಪತ್ರಿಕೆಯಿಂದ ಪ್ರಕಟಿಸಲಾಗಿದ್ದ ಲಕ್ಷ್ಮಣ ಸವದಿ ಅವರ ಸಾಧನೆಯ ಕುರಿತು ವಿಶೇಷ ಪುರವಣಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಅಥಣಿ ಪಟ್ಟಣದ ಪ್ರಭಾ ಕ್ಲಿನಿಕ್ ವತಿಯಿಂದ ಪ್ರತಿ ವರ್ಷ ದಂತ ಚಿಕಿತ್ಸೆ ಉಚಿತ ಶಿಬಿರ ನಡೆಸಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ವಿದೇಶಗಳಲ್ಲಿ ದಂತ ಮತ್ತು ಕಣ್ಣಿನ ಚಿಕಿತ್ಸೆ ದುಬಾರಿ ಇದೆ. ನಮ್ಮಲ್ಲಿ ಅತ್ಯಂತ ಕಡಿಮೆ ದರದಲ್ಲಿ ಮತ್ತು ಉಚಿತ ಚಿಕಿತ್ಸೆ ನೀಡುತ್ತಿರುವುದು ವಿಶೇಷ ಎಂದರು.ದಂತ ವೈದ್ಯ ಡಾ. ವಿಶ್ವನಾಥ ಮಮದಾಪುರ ಮಾತನಾಡಿ, ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸೊಪ್ಪು, ತರಕಾರಿ, ಹಣ್ಣು, ಖನಿಜಯುಕ್ತ ಆಹಾರ ಸೇವಿಸುವ ಮೂಲಕ ಹಲ್ಲುಗಳ ರಕ್ಷಣೆ ಮಾಡಬೇಕು. ಆಹಾರ ಸೇವನೆ ಬಳಿಕ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯಬೇಕು. ಬೆಳಗ್ಗೆ ಮತ್ತು ರಾತ್ರಿ ತಪ್ಪದೆ ಬ್ರಷ್ ಮಾಡಬೇಕು ಎಂದು ಸಲಹೆ ನೀಡಿದರು.ಸಾನ್ನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರುಳುಸಿದ್ಧ ಸ್ವಾಮೀಜಿ ಮಾತನಾಡಿದರು. ಈ ವೇಳೆ ಹಿರಿಯರಾದ ಮುರಿಗೆಪ್ಪ ತೊದಲುಬಾಗಿ, ಪ್ರಕಾಶ ಮಹಾಜನ, ಚಂದ್ರಕಾಂತ ಯಲ್ಲಟ್ಟಿ, ಸಂಗಪ್ಪ ಉನ್ನಿ, ಸಾರಿಗೆ ಇಲಾಖೆಯ ವ್ಯವಸ್ಥಾಪಕ ಬಿ. ಎನ್. ಕೇರಿ ಸೇರಿದಂತೆ ಇನ್ನಿತರರು ಇದ್ದರು.