ಉಡುಪಿ: ವಿಶ್ವದ ಜನಪ್ರಿಯ ನಾಯಕ ಹಾಗೂ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು “ಭಯೋತ್ಪಾದಕ” ಎಂದು ಕರೆದು ಅವಮಾನಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿತು.

ಪ್ರಧಾನಿ ಹುದ್ದೆ ಹಾಗೂ ದೇಶದ 140 ಕೋಟಿ ಜನರ ಭಾವನೆಗಳಿಗೆ ಖರ್ಗೆ ಅವರು ಘೋರ ಅವಮಾನ ಮಾಡಿದ್ದಾರೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ಪಕ್ಷವು ಇಂತಹ ಅಸಂವಿಧಾನಿಕ ಮತ್ತು ದ್ವೇಷಪೂರಿತ ಹೇಳಿಕೆಗಳನ್ನು ನೀಡುತ್ತಿದೆ. ಇಂತಹ ಪ್ರಚೋದನಕಾರಿ ಮಾತುಗಳು ಸಮಾಜದಲ್ಲಿ ಸೌಹಾರ್ದತೆ ಕೆಡಿಸಿ ಅಶಾಂತಿ ಸೃಷ್ಟಿಸುವ ಉದ್ದೇಶ ಹೊಂದಿವೆ ಎಂದು ಸಲ್ಲಿಸಲಾದ ಮನವಿಯಲ್ಲಿ ಆರೋಪಿಸಲಾಗಿದೆ.

ಸಂವಿಧಾನಕ್ಕೆ ಗೌರವ ಕೊಡುವ ಯಾರೂ ಕೂಡ ಪ್ರಧಾನಿಯ ಬಗ್ಗೆ ಇಂತಹ ಪದಬಳಕೆಯನ್ನು ಸಹಿಸುವುದಿಲ್ಲ. ಕಾಂಗ್ರೆಸ್ ಇನ್ನಾದರೂ ತನ್ನ ದ್ವೇಷದ ರಾಜಕಾರಣ ನಿಲ್ಲಿಸಬೇಕು ಮತ್ತು ತಕ್ಷಣವೇ ದೇಶದ ಕ್ಷಮೆಯಾಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಸಂದರ್ಭ ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ, ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಉಡುಪಿ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ವಿಜಯ ಕೊಡವೂರು, ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ವರಂಗ ಮತ್ತು ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಉಮೇಶ್ ನಾಯ್ಕ್ ಚೆರ್ಕಾಡಿ, ಉಡುಪಿ ನಗರ ಒಬಿಸಿ ಮೋರ್ಚಾ ಉಪಾಧ್ಯಕ್ಷ ಜಯಕರ್ ಆಚಾರ್ಯ, ನಗರಸಭಾ ನಿಕಟಪೂರ್ವ ಸದಸ್ಯರಾದ ಟಿ.ಜಿ. ಹೆಗ್ಡೆ ಹಾಗೂ ಮಂಜುನಾಥ್ ಮಣಿಪಾಲ, ಪ್ರಮುಖರಾದ ಸುಭಾಷಿತ್, ಸಂತೋಷ್, ಅಶೋಕ್ ಶೆಟ್ಟಿಗಾರ್, ದೀಕ್ಷಿತ್ ದೇವಾಡಿಗ, ಚಿನ್ಮಯ, ಸುಶಾಂತ್, ರಾಜೇಂದ್ರ ಪಂದುಬೆಟ್ಟು, ಪ್ರಮೋದ್ ಪಡುಕೆರೆ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.