ಸಾರಾಂಶ
ಆನಂದ ಜಡಿಮಠ
ಕನ್ನಡಪ್ರಭ ವಾರ್ತೆ ಬೀಳಗಿಮತದಾನದಿಂದ ಯಾರೂ ವಂಚಿತರಾಗಬಾರದೆಂಬ ಸಂಕಲ್ಪತೊಟ್ಟ ಚುನಾವಣಾ ಆಯೋಗವು ನಾನಾ ರೀತಿಯಲ್ಲಿ ಮತದಾನ ಜಾಗೃತಿಯನ್ನು ಪ್ರತಿಭಾರಿಯಂತೆ ಮುಂದುವರೆಸಿದೆ. ಅದರಂತೆ ಇಲ್ಲೊಬ್ಬ ಮಹಿಳಾ ಅಧಿಕಾರಿಯೊಬ್ಬರು ತಾವೇ ಸ್ವತಃ ಕಾರ್ಟೂನ್‌ಗಳನ್ನು ಬಿಡಿಸಿ, ಮತದಾನ ಜಾಗೃತಿ ಸಂದೇಶ ಬಿತ್ತರಿಸುತ್ತಿರುವುದು ಭಾರಿ ಮೆಚ್ಚುಗೆಯಾಗಿದ್ದು, ಮತದಾನ ಜಾಗೃತಿಯ ಮೆರುಗು ಹೆಚ್ಚಿಸಿದೆ.ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾ ಸ್ವೀಪ್ ಸಮಿತಿ ಸದಸ್ಯೆ ಹಾಗೂ ಎಸ್‌ಡಬ್ಲ್ಯೂಡಿ ಜಿಲ್ಲಾ ಉಪನಿರ್ದೇಶಕಿ ಡಾ.ನಂದಾ ಹಣಬರಟ್ಟಿ ಕಾರ್ಟೂನ್ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿರುವ ಅಧಿಕಾರಿ. ಡಾ.ನಂದಾ ಅವರು ನಿತ್ಯ ಒಂದು ಮತದಾನ ಜಾಗೃತಿ ಕುರಿತಾಗಿ ತಮ್ಮದೆಯಾದ ಶೈಲಿಯಲ್ಲಿ ಕೆಲವು ಕಾರ್ನೂನ್‌ಗಳನ್ನು ಬಿಡಿ ಅದಕ್ಕೆ ಪೂರಕವಾದ ಅರ್ಥಗರ್ಭಿತ ಬರಹಗಳನ್ನು ಬರೆಯುತ್ತಾರೆ. ಚುನಾವಣೆ ಮತ್ತು ಮತದಾನದ ಮಹತ್ವ ಸಾರುವ ಕಾರ್ಟೂನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಜನರ ಹಾಗೂ ಅಧಿಕಾರಿಗಳ ಮೆಚ್ಚುಗೆ, ಪ್ರಶಂಸೆಗೆ ಪಾತ್ರವಾಗಿದೆ.ಮಹಿಳಾ ಮತದಾನ ಹೆಚ್ಚಳಕ್ಕೆ ಪ್ರೇರೆಪಣೆ:ಚುನಾವಣಾ ಆಯೋಗದ ಸಂದೇಶಗಳನ್ನು ಸಲೀಸಾಗಿ ಜನರಿಗೆ ತಲುಪಿಸಲು ಇದೊಂದು ಸುಲಭವಾದ ಮಾರ್ಗ ಹಾಗೂ ಅರ್ಥೈಸಲು ಸರಳ ದಾರಿ ಎಂಬ ಕಾರಣಕ್ಕೆ ನಿತ್ಯ ಜಾಗೃತಿ ಸಂದೇಶ ಸಾರುವ ಕಾಟೂ೯ನ್ ಚಿತ್ರಗಳನ್ನು ಡಾ.ನಂದಾ ಅವರು ರಚಿಸಿ ಜನರಿಗೆ ತಲುಪಿಸುತ್ತಿದ್ದಾರೆ. ಅಷ್ಟೆ ಅಲ್ಲದೆ ಜಿಲ್ಲೆಯ ಯಾವುದೇ ಪಟ್ಟಣ, ಗ್ರಾಮಕ್ಕೂ ಭೇಟಿ ನೀಡಿದರೂ ಇವರು ತಾವು ಬಿಡಿಸಿದ ಕಾರ್ಟೂನ್‌ಗಳನ್ನು ನೀಡುತ್ತಾರೆ. ಜನರು ಕೂಡ ಇವುಗಳ ಸಂದೇಶಗಳನ್ನು ಓದುತ್ತಿದ್ದಾರೆ. ಜನ ಸಾಮಾನ್ಯರ ಭಾವನೆಗಳಿಗೆ ಹತ್ತಿರವಾಗುವಂತೆ ಹಾಗೂ ಸರಳ ಭಾಷೆಯಲ್ಲಿ ತಿಳಿಸುತ್ತಿರುವುದರಿಂದ ಜನರ ಮನಸಿಗೆ ಹತ್ತಿರವಾಗಿದ್ದಲ್ಲದೇ ಹೆಚ್ಚೆಚ್ಚು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಕಳೆದ ವರ್ಷವೂ ಕಾರ್ಟೂನ್ ಮೂಲಕ ಮತದಾನ ಜಾಗೃತಿ ಮೂಡಿಸಿದ್ದರು. ಪ್ರತಿಶತ ಮತದಾನ ಹೆಚ್ಚಳ ಮಾಡಲು ಈ ಬಾರಿ ವಿಶೇಷ ವಿಷಯಗಳೊಂದಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಮಹಿಳೆಯರ ಚಿತ್ರಗಳಲ್ಲಿ ವಿವಿಧ ಬಣ್ಣಗಳನ್ನು ಬಳಸಿ ಮಹಿಳೆಯರು ಮತದಾನ ಮಾಡಲು ಮುಂದೆ ಬರುವಂತೆ ಪ್ರೇರೆಪಿಸುತ್ತಿರುವುದು ವಿಶೇಷ.ಸಾಮಾಜಿಕ ಜಾಲತಾಣದಲ್ಲೂ ಭಾರಿ ಸದ್ದು:
ವಾಟ್ಸಪ್ ಹಾಗೂ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಡಾ.ನಂದಾ ಅವರು ಬಿಡಿಸಿದ ಮತ ಜಾಗೃತಿಯ ಕಾರ್ಟೂನ್‌ಗಳು ಹರಿದಾಡುತ್ತಿವೆ. ಗ್ರಾಮ, ನಗರ, ಪಟ್ಟಣಕ್ಕೆ ಹೋದಾಗ ಅಲ್ಲಿಯೇ ಹೊಳೆದ ಆಲೋಚನೆಗೆ ಅನುಗುಣವಾಗಿ ಕಾರ್ಟೂನ್‌ಗಳು ಬಿಡಿಸಿ ಮತ ಜಾಗೃತಿ ಮೂಡಿಸುವುದನ್ನು ಮುಂದುರೆಸಿದ್ದಾರೆ. ಓದುಗರಿಗೆ ಕಚಗುಳಿ ನೀಡುವಂತ ಕಾರ್ಟೂನ್‌ಗಳನ್ನು ಅಲ್ಲಿಯ ಜನರು ಹಾಗೂ ಅಭಿಮಾನಿಗಳು ಸ್ಟೇಟಸ್ ಸೇರಿದಂತೆ ತಮ್ಮ ತಮ್ಮ ವಾಟ್ಸ್‌ಪ್ ಗುಂಪುಗಳಿಗೆ ಫಾರ್ವಡ್ ಮಾಡುವ ಮೂಲಕ ರಾಜ್ಯಾದ್ಯಂತ ಜಾಗೃತಿಯ ಕಾರ್ಟೂನ್‌ಗಳು ಹರಿದಾಡುತ್ತಿವೆ. ರಾಜ್ಯ ಹಾಗೂ ಕೇಂದ್ರ ಚುನಾವಣೆ ಆಯೋಗದ ವೆಬ್ಸೈಟ್‌ನಲ್ಲಿ ಕಾರ್ಟೂನ್‌ಗಳನ್ನು ಬಳಸಿಕೊಂಡಿರುವುದು ಡಾ.ನಂದಾ ಅವರ ಜಾಗೃತಿಯ ಕಾರ್ಟೂನ್‌ಗಳ ಮಹತ್ವವನ್ನು ಹೆಚ್ಚಿಸುವಂತೆ ಮಾಡಿದೆ.ಬಾಕ್ಸ್..ಮತದಾನ ಜಾಗೃತಿಗೆ ಹೊಸ ಮೆರುಗು!
ಎಲ್ಲ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ ಹಲವಾರು ಗ್ರಾಮ, ಪಟ್ಟಣಗಳಿಗೆ ಡಾ.ನಂದಾ ಅವರು ಚುನಾವಣೆ ಕಾರ್ಯ ನಿಮಿತ್ತ ಭೇಟಿ ನೀಡಿದಾಗ ಜನರನ್ನು ಸೇರಿಸಿ ಮತದಾನ ಪ್ರತಿಜ್ಞೆಯ ಜತೆಗೆ ಜಾಗೃತಿಯ ಕುರಿತಾಗಿ ಹೇಳುತ್ತಿದ್ದಾರೆ. ಮತದಾನ ಎಂದರೆ ಏನು?, ನಮ್ಮ ಮತ, ನಮ್ಮ ಹಕ್ಕನ್ನು ನಾವು ಚಲಾಯಿಸಬೇಕು. ನಾನು ಮತ ಚಲಾಯಿಸಿ ಇತರರಿಗೆ ಮತ ಚಲಾಯಿಸುವಂತೆ ಪ್ರೇರಣೆಯಾಗುವಂತಹ ಸಂದೇಶಗಳ ಕುರಿತಾಗಿ ಮತದಾನ ಜಾಗೃತಿಯ ಸಂದೇಶದ ಕಾರ್ಟೂನ್ ಚಿತ್ರ ಬಿಡಿಸಿದ್ದಾರೆ. ಪ್ರತಿದಿನ ಒಂದೊಂದು ವಿಚಾರವನ್ನು ಇಟ್ಟುಕೊಂಡು ಕಾರ್ಟೂನ್ ಬಿಡಿಸುತ್ತಾರೆ. ಒಮ್ಮೊಮ್ಮೆ ಎರಡ್ಮೂರು ಚಿತ್ರಗಳನ್ನು ಬಿಡಿಸುವ ಮೂಲಕ ಜನರಿಗೆ ಮತದಾನ ಜಾಗೃತಿಯನ್ನು ಸರಳ ಹಾಗೂ ಅರ್ಥಗರ್ಭಿತವಾಗಿ ತಿಳಿಸುತ್ತಿದ್ದಾರೆ. ಇಷ್ಟವಾಗಿದ್ದನ್ನು ಮತದಾರರು ಸಾಮಾಜಿಕ ಜಾಲತಾಣ ಮೂಲಕ ಹರಿಬಿಡುತ್ತಿರುವುದಲ್ಲದೇ ಹೆಚ್ಚೆಚ್ಚು ಸೇರ್ ಮಾಡುವ ಮೂಲಕ ಮತದಾನ ಜಾಗೃತಿ ಅಭಿಯಾನ ಯಶಸ್ವಿಗೆ ಕೈಜೋಡಿಸುತ್ತಿದ್ದಾರೆ. ಡಾ.ನಂದಾ ಅವರ ಕಾರ್ಟೂನ್‌ಗಳು ಮತದಾನ ಜಾಗೃತಿಗೆ ಹೊಸ ಮೆರುಗು ಹೆಚ್ಚಿಸಿರುವುದಕ್ಕೆ ಅವರಿಗೊಂದು ಹಾಟ್ಸಪ್ ಹೇಳಲೇ ಬೇಕು.---------ಕೋಟ್
ನಾವು ಜಿಲ್ಲೆಯ ಹಲವಾರು ಗ್ರಾಮ, ಪಟ್ಟಣಗಳಿಗೆ ಭೇಟಿ ನೀಡಿ ಜನರನ್ನು ಸೇರಿಸಿ ಮತದಾನ ಪ್ರತಿಜ್ಞೆಯ ಜತೆಗೆ ಜಾಗೃತಿಯ ಕುರಿತಾಗಿ ಹೇಳುತ್ತಿದ್ದೇವೆ. ಇವೆಲ್ಲದರ ಜತೆಗೆ ಮತದಾನ ಎಂದರೇನು? ನಮ್ಮ ಮತ, ನಮ್ಮ ಹಕ್ಕನ್ನು ನಾವು ಚಲಾಯಿಸಬೇಕು? ನಾನು ಮತ ಚಲಾಯಿಸಿ ಇತರರಿಗೆ ಮತ ಚಲಾಯಿಸುವಂತೆ ಪ್ರೇರಣೆಯಾಗುವಂತಹ ಸಂದೇಶಗಳ ಕುರಿತಾಗಿ ಮತದಾನ ಜಾಗೃತಿಯ ಸಂದೇಶದ ಕಾರ್ಟೂನ್ ಚಿತ್ರ ಬಿಡಿಸಿದ್ದೇನೆ. ಅದನ್ನು ಸಾಮಾಜಿಕ ಜಾಲತಾಣ ಮೂಲಕ ಎಲ್ಲರೂ ತಿಳಿಯುವಂತೆ ಮಾಡಲಾಗುತ್ತಿದೆ.- ಡಾ.ನಂದಾ.ಎಚ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ