ದೇಶದ ರಕ್ಷಣೆಯಲ್ಲಿ ಕೇಂದ್ರ ವಿಫಲ

| Published : Apr 11 2024, 12:49 AM IST

ಸಾರಾಂಶ

ಕಾಂಗ್ರೆಸ್‌ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ. ಪಡಿತರ ಚೀಟಿ, ಪಿಂಚಣಿ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ.

ಕನ್ನಡಪ್ರಭ ವಾರ್ತೆ ಬಾದಾಮಿ

ದೇಶದ ರಕ್ಷಣೆ ವಿಷಯದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿಯಿಂದ ಒಂದು ನಾಯಿಯಾದರೂ ಸತ್ತಿದೆಯಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಪ್ರಶ್ನಿಸಿದರು.

ಬುಧವಾರ ನಗರದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಹಮ್ಮಿಕೊಂಡಿದ್ದ ಬಾದಾಮಿ ವಿಧಾನಸಭೆ ಮತಕ್ಷೇತ್ರದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ. ಪಡಿತರ ಚೀಟಿ, ಪಿಂಚಣಿ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ದೂರವಾಣಿ, ಮತದಾನದ ಹಕ್ಕು ರೈತರ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಮೋದಿ ಏನು ಮಾಡಿದರು? ದೇಶದ ವೀಕೆಸ್ಟ್ ಪ್ರಧಾನಿ ಮೋದಿ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮೋದಿ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ ₹15 ಲಕ್ಷ ಹಣ ಹಾಕುತ್ತೇನೆ, ಯುವಕರಿಗೆ ಉದ್ಯೋಗ, ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದು ಸುಳ್ಳು ಹೇಳಿದರು. ಪ್ರಧಾನಿಯಾಗಿ 10 ವರ್ಷಗಳಲ್ಲಿ ಯಾವುದೇ ಜನಪರ ಯೋಜನೆ ಜಾರಿ ಮಾಡಿಲ್ಲ. ಮೋದಿ ಒಬ್ಬ ಮಹಾನ್ ಸುಳ್ಳುಗಾರ. ರೈತರ ವಿರೋಧಿ ಕೃಷಿ ಕಾಯ್ದೆ ಜಾರಿಗೆ ತಂದರು. ವಿದೇಶದ ಕಪ್ಪು ಹಣ ತರಲಿಲ್ಲ. ಯುವಕರಿಗೆ ಉದ್ಯೋಗ ಕೊಡಲಿಲ್ಲ. ರೈತರ ಆದಾಯ ದ್ವಿಗುಣ ಮಾಡಲಿಲ್ಲ. ಇದೊಂದು ಪ್ರಜಾಪ್ರಭುತ್ವ ವಿರೋಧಿ ಸರ್ಕಾರ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.

ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷ, ಬೀಳಗಿ ಮತಕ್ಷೇತ್ರದ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಚುನಾವಣಾ ಬಾಂಡ್ ಮೂಲಕ ದೇಶದಲ್ಲಿ ದೊಡ್ಡ ಹಗರಣ ನಡೆದಿದೆ. ಇಡಿ, ಐಟಿ ದಾಳಿ ಮೂಲಕ ಶಾಸಕರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿ ಸರ್ಕಾರ ಮಾಡುತ್ತಿದೆ. ಮೋದಿ ಸರ್ಕಾರ ಬಡವರ, ರೈತರ ಸಾಲ ಮನ್ನಾ ಮಾಡಲು ಹಣವಿಲ್ಲ ಎಂದು ಹೇಳುತ್ತಾರೆ. ಆದರೆ, ಉದ್ಯಮಿಗಳ ₹14.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇದು ಉದ್ಯಮಿಗಳ ಪರ ಸರ್ಕಾರ ಎಂದು ಟೀಕಿಸಿದರು.

ಸಕ್ಕರೆ ಸಚಿವ ಶಿವಾನಂದ ಪಾಟೀಲ, ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ, ಬಾದಾಮಿ ಶಾಸಕ ಭಿಮಸೇನ ಚಿಮ್ಮನಕಟ್ಟಿ, ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ, ಮಾಜಿ ಸಚಿವ ಎಸ್.ಆರ್‌.ಪಾಟೀಲ ಮಾತನಾಡಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದು ಮನವಿ ಮಾಡಿದರು.

ವೇದಿಕೆಯ ಮೇಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ಶಿವಾನಂದ ಕುಳಗೇರಿ, ನಾಗರಾಜ ಮನ್ನಿಕೇರಿ ಸೇರಿದಂತೆ ಇತರರು ಹಾಜರಿದ್ದರು. ಸಂಜಯ ಬರಗುಂಡಿ ಸ್ವಾಗತಿಸಿ, ನಿರೂಪಿಸಿದರು. ಮಲ್ಲಪ್ಪ ಗಾರವಾಡ ವಂದಿಸಿದರು. ಕಾರ್ಯಕರ್ತರ ಸಭೆಯಲ್ಲಿ ಬಾದಾಮಿ ಮತಕ್ಷೇತ್ರದ ಸಹಸ್ರಾರು ಕಾರ್ಯಕರ್ತರು, ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಜರಿದ್ದರು.