ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಅರಣ್ಯ ಇಲಾಖೆ ಆಶ್ರಯದಲ್ಲಿ ರಾಜ್ಯ ಸರ್ಕಾರದ ವಿನೂತನ ಯೋಜನೆಯಾದ ‘ಚಿಣ್ಣರ ವನದರ್ಶನ’ ಮಕ್ಕಳಲ್ಲಿ ಪರಿಸರ, ಗಿಡಮರಗಳು, ಪ್ರಾಣಿಸಂಕುಲದ ಕುರಿತು ಅರಿವು ನೀಡುವ ಕಾರ್ಯಕ್ರಮವಾಗಿದ್ದು, ಎರಡು ದಿನಗಳ ಪ್ರವಾಸವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆನಂದ್ ಹೇಳಿದರು. ವಲಯ ಅರಣ್ಯ ಸಂರಕ್ಷಣಾಧಿಕಾರಿ ಪುಷ್ಪಲತಾ ಮಾರ್ಗದರ್ಶನದಲ್ಲಿ ಇದೇ ಮೊದಲ ಬಾರಿಗೆ ‘ಚಿಣ್ಣರ ವನದರ್ಶನ’ಕ್ಕೆ ಆಯ್ಕೆಯಾಗಿ ಅರಣ್ಯಾಶ್ರಿತ ಪ್ರವಾಸಿ ತಾಣಗಳಿಗೆ ಎರಡು ದಿನಗಳ ಉಚಿತ ಪ್ರವಾಸ ಹೊರಟ ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಶುಭ ಕೋರಿ ಮಾತನಾಡಿದರು.ಪ್ರಾಯೋಗಿಕವಾಗಿ ಪ್ರವಾಸ
ಮುಂದಿನ ಪೀಳಿಗೆಗೆ ಜೀವ ಸಂಕುಲದ ಉಳಿವಿಗೆ ಪರಿಸರ ಸಂರಕ್ಷಣೆ ಅತಿ ಮುಖ್ಯ, ಗಿಡಮರಗಳು ಉಳಿದರೆ ಮಾತ್ರವೇ ಮನುಷ್ಯ ಉತ್ತಮ ಜೀವನ ನಿರ್ವಹಿಸಲು ಸಾಧ್ಯ ಎಂಬ ಸತ್ಯದ ಅರಿವಿದ್ದರೂ ನಾವಿಂದು ಪರಿಸರ ನಾಶಕ್ಕೆ ಕೈಹಾಕುತ್ತಿದ್ದೇವೆ. ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಸರ್ಕಾರ ಈ ವಿನೂತನ ಯೋಜನೆ ಇದೇ ಮೊದಲಬಾರಿಗೆ ಆರಂಭಿಸಿದ್ದು, ಪ್ರಾಯೋಗಿಕವಾಗಿ ತಾಲೂಕಿಗೆ ಒಂದು ಶಾಲೆಯ ಮಕ್ಕಳನ್ನು ಉಚಿತ ಪ್ರವಾಸ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು.ಮುಂದಿನ ಪೀಳಿಗೆಗೆ ಸಂಕಷ್ಟ
ಅಭಿವೃದ್ದಿ ಹೆಸರಿನಲ್ಲಿ ಅರಣ್ಯ ನಾಶವಾಗುತ್ತಿದೆ, ಕಾಂಕ್ರಿಟ್ ಕಾಡುಗಳು ಬೆಳೆಯುತ್ತಿವೆ, ಇದರಿಂದ ಪರಿಸರದ ಮೇಲೆ ಮಾರಕ ಪರಿಣಾಮ ಬೀರುವಂತಾಗಿದೆ, ಅರಣ್ಯ ನಾಶ ಮುಂದುವರೆಸಿದರೆ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಸಿಲುಕುತ್ತದೆ. ಈಗಾಗಲೇ ಹಲವಾರು ಪ್ರಾಣಿ, ಪಕ್ಷಿಗಳು ಕಣ್ಣಿಗೆ ಕಾಣದಾಗಿವೆ, ಅವುಗಳನ್ನು ಮಕ್ಕಳಿಗೆ ಕೇವಲ ಚಿತ್ರಪಟದಲ್ಲಿ ತೋರಿಸಬೇಕಾದ ಪರಿಸ್ಥಿತಿ ಇದೆ, ಗುಬ್ಬಚ್ಚಿಗಳು ಪ್ರತಿ ಮನೆಯಲ್ಲೂ ಚಿಲಿಪಿಲಿಗುಟ್ಟುತ್ತಾ ಓಡಾಡುತ್ತಿದ್ದ ಸನ್ನಿವೇಶ ಇತ್ತು ಆದರೆ ಈಗ ಗುಬ್ಬಚ್ಚಿಗಳನ್ನು ಹುಡುಕಬೇಕಾಗಿದೆ ಎಂದು ಉದಾಹರಿಸಿದರು.ಶಾಲಾ ಮಕ್ಕಳನ್ನು ಅರಣ್ಯ ಇಲಾಖೆಯ ಮಡೇರಹಳ್ಳಿ ನರ್ಸರಿ ತೋರಿಸುವುದರೊಂದಿಗೆ ಪ್ರವಾಸ ಆರಂಭಿಸಲಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ವೀಕ್ಷಣೆ, ಹುಲಿಸಫಾರಿ ನಂತರ ರಾತ್ರಿ ಅಲ್ಲಿನ ರೆಸಾರ್ಟ್‌ನಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಬುಧವಾರ ಮಕ್ಕಳು ಪ್ರಾಣಿಪಕ್ಷಿಗಳನ್ನು ವೀಕ್ಷಿಸಲಿದ್ದು, ನಂತರ ಸಂಜೆ ಕೋಲಾರಕ್ಕೆ ಕರೆತರಲಾಗುವುದು ಎಂದರು.
ಬ್ಯಾಗ್, ಕಿರುಹೊತ್ತಿಗೆ ವಿತರಣೆಇದೇ ಸಂದರ್ಭದಲ್ಲಿ ಮಕ್ಕಳಿಗೆ ಬ್ಯಾಗ್, ಅರಣ್ಯ ಇಲಾಖೆಯ ಮಾಹಿತಿಯ ಕಿರುಹೊತ್ತಿಗೆ ನೀಡಲಾಯಿತು. ಶಿಕ್ಷಕರಾದ ಆರ್.ವೆಂಕಟರೆಡ್ಡಿ, ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ರಮಾದೇವಿ, ಅರಣ್ಯ ಇಲಾಖೆಯ ಅರಣ್ಯ ಗಸ್ತುಪಾಲಕ ನಾಗರಾಜ್, ವೀಕ್ಷಕ ಶೇಖರ್, ಸುಬ್ರಮಣಿ ಇದ್ದರು.